AICC ಹೆಸರಲ್ಲಿ ಕರೆ ಮಾಡಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ವಂಚನೆ ಯತ್ನ; ಎಚ್ಚರವಹಿಸುಂತೆ ಸೂಚನೆ
ಟಿಕೆಟ್ ಆಕಾಂಕ್ಷಿಗಳಿಗೆ AICC ಹೆಸರಲ್ಲಿ ಕರೆ ಮಾಡಿ ವಂಚನೆಗೆ ಯತ್ನಿಸಲಾಗುತ್ತಿದೆ. ಇಂತಹ ಕರೆಗಳಿಗೆ ಕಿವಿಗೊಡದಂತೆ ಎಚ್ಚರವಹಿಸುಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ವೇದಿಕೆ ಸಜ್ಜಾಗಿದೆ. ರಾಜಕೀಯ ಪಕ್ಷಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಆರಂಭಿಸಿವೆ. ಇನ್ನು ಮತ್ತೊಂದೆಡೆ ಚುನಾವಣೆಯ ಲಾಭ ಪಡೆಯಲು ವಂಚಕರು ಖತರ್ನಾಕ್ ಪ್ಲಾನ್ಗಳನ್ನು ಮಾಡುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳಿಗೆ AICC ಹೆಸರಲ್ಲಿ ಕರೆ ಮಾಡಿ ವಂಚನೆಗೆ ಯತ್ನಿಸಿರುವ ಘಟನೆ ನಡೆದಿದೆ. ದೆಹಲಿಯ ಎಐಸಿಸಿ ಕಚೇರಿಯಿಂದ ಮಾತಾಡುತ್ತಿದ್ದೇವೆ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಕರೆ ಮಾಡಿ ವಂಚನೆಗೆ ಯತ್ನ ನಡೆದಿದೆ.
8287309623 ಮೊಬೈಲ್ ನಂಬರ್ನಿಂದ ಅಪರಿಚಿತ ವ್ಯಕ್ತಿಗಳು ಆಕಾಂಕ್ಷಿಗಳಿಗೆ ಕರೆ ಮಾಡಿ ಹಣ ಪೀಕಲು ಮುಂದಾಗಿದ್ದಾರೆ. 2 ಮತ್ತು 3ನೇ ಸಾಲಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ವಂಚಕರು ಕರೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮೊದಲಿಗೆ ವಂಚಕರು ಆಕಾಂಕ್ಷಿಗಳಿಗೆ ಕರೆ ಮಾಡಿ, ವಿಧಾನಸಭಾ ಚುನಾವಣೆ ಸ್ಪರ್ಧೆ ಸಂಬಂಧ ಪಟ್ಟಿ ಸಿದ್ಧಗೊಂಡಿದೆ. ಚುನಾವಣೆ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಆಸೆ ಹೊಟ್ಟಿಸುತ್ತಾರೆ. ಬಳಿಕ ದಯವಿಟ್ಟು ನಿಮ್ಮ ಗುರುತಿನ ಚೀಟಿ ಜೊತೆ ಹಣ ಕಳುಹಿಸಿ ಎಂದು ಬೇಡಿಕೆ ಇಡುತ್ತಾರೆ. ಗುರುತಿನ ಚೀಟಿಯನ್ನು ₹39,000 ರೂ ಜೊತೆಗೆ 48,000 ರೂ. ಕಳಿಸುವಂತೆ ಡಿಮ್ಯಾಂಡ್ ಮಾಡುತ್ತಾರೆ.ಸದ್ಯ AICC ಹೆಸರಲ್ಲಿ ವಂಚನೆ ಗ್ಯಾಂಗ್ ಕೃತ್ಯವೆಸಗುತ್ತಿರುವ ಶಂಕೆ ವ್ಯಕ್ತವಾಗಿದ್ದು ಈ ಕುರಿತು ಪಕ್ಷದ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇಂತಹ ಕರೆಗಳಿಗೆ ಕಿವಿಗೊಡದಂತೆ ಎಚ್ಚರವಹಿಸುಂತೆ ಸೂಚನೆ ನೀಡಲಾಗಿದೆ. ಟಿಕೆಟ್ ಆಕಾಂಕ್ಷಿಗಳಿಗೆ ಸೂಚಿಸಿರುವ ಸ್ಕ್ರೀನ್ ಶಾಟ್ ವೈರಲ್ ಆಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:27 am, Sun, 19 March 23