
ಬೆಂಗಳೂರು, ಮಾರ್ಚ್ 12: ಬೆಂಗಳೂರು ಸಹಕಾರ ಹಾಲು ಒಕ್ಕೂಟ (BAMUL) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಘೋಷಿಸಿದೆ. ಆ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿದೆ. ಸರ್ಕಾರದಿಂದಲೂ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬಮೂಲ್ನಿಂದ ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಏಪ್ರಿಲ್ 1ರಿಂದ ಮಾರ್ಚ್ 31ವರೆಗೆ ಹಾಲು ಹಾಕಿರುವವರಿಗೆ ಇದು ಲಭ್ಯವಾಗಲಿದೆ.
ಇನ್ನು ಈ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದು, ಯಾವುದೇ ತಾರತಮ್ಯ ಇಲ್ಲದೆ ಬಮೂಲ್ನಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೂ 5 ರೂಪಾಯಿ ಪ್ರೋತ್ಸಾಹ ಧನ ಕೊಡುತ್ತಿದೆ. ರೈತರಿಂದ 59,39,78,492 ಲೀಟರ್ ಹಾಲು ಖರೀದಿಸಿದ್ದೇವೆ. ಈ ಬಾರಿ 500 ಕೋಟಿ ಹೆಚ್ಚುವರಿ ಟರ್ನ್ ಓವರ್ ಮಾಡುವ ಗುರಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಮೂಲ್ ನೂತನ ಅಧ್ಯಕ್ಷರಾಗಿ ಡಿಕೆ ಸುರೇಶ್ ಆಯ್ಕೆ
ಕಾರ್ಮಿಕರಿಗೆ ಸುಮಾರು 6 ಕೋಟಿ ರೂಪಾಯಿ ಡಿಎ ಕೊಡಬೇಕು. ನಾವೂ ಸುಮಾರು 60 ಕೋಟಿ ರೂ ಲಾಭ ಗಳಿಸುವ ಮಟ್ಟಿಗೆ ಬಂದಿದ್ದೇವೆ. ಹೀಗಾಗಿ ಸಿಬ್ಬಂದಿಗೆ ಬಾಕಿ ಇದ್ದ ಹಣ ಕೊಡಲು ತೀರ್ಮಾನಿಸಲಾಯಿತು. ಗುತ್ತಿಗೆದಾರರಿಗೆ 5 ಸಾವಿರ ಬೋನಸ್ ಕೊಡುತ್ತೇವೆ. ಗುಣಮಟ್ಟದ ಹಾಲು ಕೊಡುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಮಾರುಕಟ್ಟೆ ಸೋರಿಕೆ ತಡೆದಿದ್ದೇವೆ. ತುಪ್ಪದ ಬೆಲೆ ಜಾಸ್ತಿ ಮಾಡಿದ್ದೇವೆ. ಚೀಸ್ ಜಾಸ್ತಿ ಮಾರಾಟವಾಗುತ್ತಿದೆ. ಗುಣಮಟ್ಟ ಇದೆ. ಡೆಲ್ಲಿ ಮದರ್ ಡೈರಿಗೆ 2 ಲಕ್ಷ ಕೊಡುತ್ತಿದ್ದೇವೆ. ದುಂದು ವೆಚ್ಚ ಕಡಿಮೆ ಮಾಡಿದ್ದೇವೆ. ಸಿಬ್ಬಂದಿ ಮತ್ತು ಮಾರುಕಟ್ಟೆ ಸುಧಾರಣೆ ಮಾಡಲಾಗಿದ್ದು, ಈ ಎಲ್ಲಾ ಕೆಲವು ಕಾರಣಗಳಿಂದ ಲಾಭ ಹೆಚ್ಚಾಗಿದೆ ಎಂದಿದ್ದಾರೆ.
ಇನ್ನು ಕ್ಷೀರ ಭಾಗ್ಯಕ್ಕೆ 75 ಸಾವಿರ ಲೀಟರ್ ಪೌಡರ್ ಆಗಿ ಕನ್ವರ್ಟ್ ಮಾಡಿ ಕೊಡುತ್ತಿದ್ದೇವೆ. ರಾಗಿ ಮಾಲ್ಟ್ ಜೊತೆ ಹಾಲು ಮಿಕ್ಸ್ ಮಾಡಿ ಕೂಡ ನಾವೂ ಕೊಡಲು ಸಿದ್ಧ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.