ಬಂಡೆಪಾಳ್ಯ ಇನ್ಸ್ಪೆಕ್ಟರ್ ಸಮಾಜಸೇವೆ; ಎಸ್ಎಸ್ಎಲ್ಸಿ ಫೇಲಾಗಿದ್ದ 70 ಮಕ್ಕಳು ಪೂರಕ ಪರೀಕ್ಷೆಯಲ್ಲಿ ಪಾಸ್!
ಅನೇಕ ಹುಡುಗರು ಎಸ್ಎಸ್ಎಲ್ಸಿ ಫೇಲಾದ ನಂತರ ಅಡ್ಡ ದಾರಿ ಹಿಡಿಯುತ್ತಿದ್ದದ್ದನ್ನು ಗಮನಿಸಿದ ರಾಜೇಶ್ ಅವರಿಗೆಲ್ಲ ಸರಿಯಾದ ಮಾರ್ಗದರ್ಶನ ಮಾಡಬೇಕೆಂದು ತೀರ್ಮಾನಿಸಿದರು. ಪರಿಣಾಮವಾಗಿ 70 ಮಂದಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಸುಮಾರು 70 ಮಂದಿ ವಿದ್ಯಾರ್ಥಿಗಳು ಹೊಸೂರು ರಸ್ತೆಯ ಬಳಿಯ ಬಂಡೆಪಾಳ್ಯ (Bandepalya) ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಲ್ವೈ ರಾಜೇಶ್ (LY Rajesh) ಅವರ ನೆರವಿನಿಂದ ಹೆಚ್ಚಿನ ತರಬೇತಿ ಪಡೆದು, ಪೂರಕ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಕುರಿತು ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಅವರು ಸಾಮಾಜಿಕ ಮಾಧ್ಯಮ ಫೇಸ್ಬುಕ್ ಮೂಲಕ ಗಮನ ಸೆಳೆದಿದ್ದಾರೆ. ಇನ್ಸ್ಪೆಕ್ಟರ್ ಎಲ್ವೈ ರಾಜೇಶ್ ಅವರನ್ನು ಭೇಟಿಯಾದದ್ದು, ಅವರು ಮಾಡಿರುವ ಸಾಮಾಜಿಕ ಕಾರ್ಯವನ್ನು ತಿಳಿದು ಅವರನ್ನು ಅಭಿನಂದಿಸಿದ ಬಗ್ಗೆ ಸುರೇಶ್ ಕುಮಾರ್ ಅವರು ಫೇಸ್ಬುಕ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ನಿನ್ನೆ ಸ೦ಜೆ ಬೆ೦ಗಳೂರಿನ ಪೊಲೀಸ್ ಠಾಣೆಯೊಂದಕ್ಕೆ ಹೋದಾಗ ಭರವಸೆಗೆ ಕಾರಣವೊ೦ದು ಸಿಕ್ಕಿತು. ಹೊಸೂರು ರಸ್ತೆಯ ಬಳಿ ಇರುವ ಬ೦ಡಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಲ್ವೈ ರಾಜೇಶ್ ಮಾಡುತ್ತಿರುವ ಸಮಾಜಮುಖಿ ಕಾರ್ಯ ನನ್ನ ಗಮನಕ್ಕೆ ಬ೦ದ ನ೦ತರ ಆ ಠಾಣೆಗೆ ಭೇಟಿ ಕೊಡಬೇಕಂದೆನಿಸಿತು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅನೇಕ ಹುಡುಗರು ಎಸ್ಎಸ್ಎಲ್ಸಿ ಫೇಲಾದ ನ೦ತರ ಅಡ್ಡ ದಾರಿ ಹಿಡಿಯುತ್ತಿದ್ದದ್ದನ್ನು ಗಮನಿಸಿದ ರಾಜೇಶ್ ಅವರಿಗೆಲ್ಲ ಸರಿಯಾದ ಮಾರ್ಗದರ್ಶನ ಮಾಡಬೇಕೆಂದು ತೀರ್ಮಾನಿಸಿದರು. ಪರೀಕ್ಟೆಯಲ್ಲಿ ಫೇಲಾದ ಸುಮಾರು 70 ಮಕ್ಕಳನ್ನು ಸೇರಿಸಿ ಅವರು ಪೂರಕ ಪರೀಕ್ಷೆಗೆ ಸಿದ್ಧರಾಗಲು ತರಬೇತಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಿದರು. ಆ ವ್ಯಾಪ್ತಿಯಲ್ಲಿಯೇ ಲಭ್ಯವಿದ್ದ ಉತ್ತಮ ಶಿಕ್ಷಕರ ನೆರವಿನಿಂದ ಆ ಮಕ್ಕಳಿಗೆಲ್ಲ ವಿಶೇಷ ಪಾಠ ದೊರಕುವಂತೆ ಮಾಡಿದರು’ ಎಂದು ಸುರೇಶ್ ಕುಮಾರ್ ಅವರು ತಮ್ಮ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
ಸುಮಾರು 20 – 25 ದಿನ ಬೆಳಗಿನಿಂದ ಸಂಜೆವರೆಗೂ ಆ ಮಕ್ಕಳಿಗೆ ಮಾರ್ಗದರ್ಶನ ಪಾಠಗಳನ್ನು ಮಾಡಿಸಿ ಅವರಿಗೆ ಅಲ್ಲೇ ಊಟದ ವ್ಯವಸ್ಥೆಯನ್ನು ಮಾಡಿಸಿ ಅವರೆಲ್ಲರೂ ಪೂರಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವಂತೆ ಮಾಡಿದರು. ಅಷ್ಟೇ ಅಲ್ಲದೆ, ಅವರು ಹೇಗಿರಬೇಕೆಂದು ಪ್ರೇರಣಾದಾಯಿ ಘಟನೆಗಳ ಮೂಲಕ ತಿಳುವಳಿಕೆ ಕೂಡುವ ಪುಯತ್ನವನ್ನೂ ಮಾಡಿದರು. ಆರು ವಿಷಯಗಳಲ್ಲಿಯೂ ಫೇಲ್ ಆಗಿದ್ದ ಕಲ ಮಕ್ಕಳು ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿರುವುದು ಆನಂದದ ವಿಚಾರ. ಅನೇಕ ವಿದ್ಯಾರ್ಥಿಗಳು ಈಗ ಪದವಿ ಪೂರ್ವ ತರಗತಿಗಳಲ್ಲಿ ಶಿಕ್ಷಣ ಪಡಯುತ್ತಿದ್ದಾರೆ’ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಆ ಮಕ್ಕಳಿಗೆಲ್ಲ ಪಾಠ ಹೇಳಿದ ಶಿಕ್ಷಕರು, ಈ ಕಾರ್ಯದ ರೂವಾರಿ ರಾಜೇಶ್, ಕೆಲ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿರುವುದಾಗಿಯೂ ಆ ಶಿಕ್ಷಕರು ಈ ಕಾರ್ಯದ ಮೂಲಕ ತಮಗೆ ಉಂಟಾಗಿರುವ ಸಂತೃಪ್ತಿಯನ್ನು ವಿವರಿಸುವಾಗ ಅವರೆಲ್ಲರ ಮುಖಗಳಲ್ಲಿ ಆನಂದ ಕಾಣಿಸುತ್ತಿತ್ತು ಎಂದೂ ಅವರು ತಿಳಿಸಿದ್ದಾರೆ.
ಠಾಣೆಗೆ ಬರುವ ಪ್ರತಿಯೊಬ್ಬರ ಅನುಭವ ಪಡೆಯುವ ‘ದರ್ಪಣ’
ತಮ್ಮ ಠಾಣೆಗೆ ಬರುವ ಪ್ರತಿಯೊಬ್ಬರ ಅನುಭವಗಳ ಮಾಹಿತಿ ಪಡೆಯುವ ‘ದರ್ಪಣ’ ಎ೦ಬ ಕಾರ್ಯಕ್ರಮವನ್ನು ಸಹ ರಾಜೇಶ್ ಪ್ರಾರಂಭಿಸಿದ್ದಾರೆ. ಠಾಣೆಗೆ ಬ೦ದಾಗ ನಾಗರಿಕರ ಜತೆ ಪೊಲೀಸರ ವರ್ತನೆ ಹೇಗಿತ್ತು, ಒಟ್ಟು ಪೊಲೀಸ್ ಸ್ಮೇಷನ್ ವಾತಾವರಣದಿಂದ ಆ ನಾಗರಿಕರಿಗೆ ಏನು ಅನಿಸಿದೆ ಎಂಬ ವಿಚಾರಗಳಿಗೆ ಸಂಬಂಧಿಸಿದ ಸುಮಾರು ಐದಾರು ಪ್ರಶ್ನೆಗಳನ್ನು ಹೊ೦ದಿರುವ ಪ್ರಶ್ನಾವಳಿಯ ಮೂಲಕ ಅನುಭವವನ್ನು ತಿಳಿಯುವ ಪುಯತ್ನ ಅವರು ಮಾಡುತ್ತಿದ್ದಾರೆ. ಇದರ ಆಧಾರದ ಮೇಲೆ ಪ್ರತಿ 15 ದಿನಗಳಿಗೆ ಒಮ್ಮೆ ಉತ್ತಮ ಸಿಬ್ಬಂದಿಯನ್ನು ‘ಸ್ಟಾರ್ ಆಫ್ದಿ ಫಾರ್ಟ್ನೈಟ್’ ಎ೦ದು ಗುರುತಿಸಿ ಅವರ ಫೋಟೋವನ್ನು ಸ್ನೇಷನ್ ಬೋರ್ಡ್ನಲ್ಲಿ ಹಾಕಿ ಅವರ ಬೆನ್ನು ತಟ್ಟುವ ವಿಶಿಷ್ಟ ಪುಯತ್ನವನ್ನು ಕೂಡ ರಾಜೇಶ್ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ