ಬೆಂಗಳೂರು, ಆಗಸ್ಟ್ 3: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಮೂಲಕ 2022-2023ರ ಅವಧಿಯಲ್ಲಿ 53,751 ಮೆಟ್ರಿಕ್ ಟನ್ ಪೆರಿಷೇಬಲ್ ಗೂಡ್ಸ್ (ಬೇಗನೆ ಹಾಳಾಗುವ ಸರಕುಗಳು) ಸಾಗಾಟ ಮಾಡಲಾಗಿದೆ. ಇದು ಹಿಂದಿನ ವರ್ಷದ 52,366 ಮೆಟ್ರಿಕ್ ಟನ್ ದಾಖಲೆಯನ್ನು ಮೀರಿಸಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ. ಬೇಗನೆ ಹಾಳಾಗುವ ಸರಕುಗಳು ಕೋಳಿ ಮಾಂಸ, ಹೂಗಳು, ತಾಜಾ ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ಒಳಗೊಂಡಿರುತ್ತವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಬೇಗನೆ ಹಾಳಾಗುವ ಸರಕು ರಫ್ತಿನಲ್ಲಿ ಶೇಕಡಾ 3 ರಷ್ಟು ಹೆಚ್ಚಳವಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BIAL) ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣವು ಬೇಗನೆ ಹಾಳಾಗುವ ಸರಕುಗಳ ರಫ್ತಿನಲ್ಲಿ ತನ್ನ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ. ಭಾರತದ ಒಟ್ಟಾರೆ ಏರ್ ಕಾರ್ಗೋ ಮಾರುಕಟ್ಟೆಯ ಸರಕು ನಿರ್ವಹಣೆಯಲ್ಲಿ ಶೇ 27 ರಷ್ಟು ಮತ್ತು ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಶೇಕಡಾ 41 ರಷ್ಟು ಪಾಲನ್ನು ಬೆಂಗಳೂರು ವಿಮಾನ ನಿಲ್ದಾಣ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೇಗನೆ ಹಾಳಾಗುವ ಸರಕುಗಳ ಪೈಕಿ, ಬೆಂಗಳೂರು ವಿಮಾನ ನಿಲ್ದಾಣವು ಕೋಳಿ ಮಾಂಸ ಮತ್ತು ಹೂವುಗಳ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಇದರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 9 ರಷ್ಟು ಹೆಚ್ಚಳ ಕಂಡುಬಂದಿದೆ. ಹಿಂದಿನ ವರ್ಷ ಮತ್ತು ಈ ವರ್ಷ ಕ್ರಮವಾಗಿ 39,865 ಮೆಟ್ರಿಕ್ ಟನ್ ಮತ್ತು 1,877 ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ. ಹೆಚ್ಚುವರಿಯಾಗಿ, ತಾಜಾ ತರಕಾರಿಗಳು ಮತ್ತು ತಾಜಾ ಹಣ್ಣುಗಳು ವಿಮಾನ ನಿಲ್ದಾಣದಿಂದ ರಫ್ತು ಮಾಡಲಾದ ಪ್ರಮುಖ ಸರಕುಗಳಲ್ಲಿ ಸೇರಿವೆ. ಇದೇ ಅವಧಿಯಲ್ಲಿ ತಾಜಾ ಮಾವಿನಹಣ್ಣಿನ ರಫ್ತು ಪ್ರಮಾಣದಲ್ಲಿ ಶೇಕಡಾ 10 ರಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ: Bengaluru: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ
2022-2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸರಕುಗಳು ರಫ್ತಾದ ಪ್ರಮುಖ ತಾಣಗಳಲ್ಲಿ ಓಮನ್, ಕತಾರ್, ಸಿಂಗಾಪುರ್, ಮಾಲ್ಡೀವ್ಸ್, ಯುಎಇ, ಕುವೈತ್ ಮತ್ತು ಯುಕೆ ಸೇರಿವೆ. ಬೆಂಗಳೂರು ವಿಮಾನ ನಿಲ್ದಾಣ ಆಡಳಿತದ ಪ್ರಕಾರ, ಮಾಲ್ಡೀವ್ಸ್ ಮತ್ತು ಕುವೈತ್‌ಗೆ ಸಾಗಿಸಲಾದ ಬೇಗನೆ ಹಾಳಾಗುವ ಸರಕುಗಳ ಪ್ರಮಾಣವು ಕೋವಿಡ್-ಪೂರ್ವ ಮಟ್ಟಕ್ಕೆ ಮರಳಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಗಣನೀಯ ಶೇ 50 ರ ಬೆಳವಣಿಗೆಯನ್ನು ದಾಖಲಿಸಿದೆ.
ಇದಲ್ಲದೆ, 2021-2022 ಕ್ಕೆ ಹೋಲಿಸಿದರೆ ಅಮೆರಿಕಕ್ಕೆ ಬೇಗನೆ ಹಾಳಾಗುವ ಸರಕುಗಳ ರಫ್ತು ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಮಾನ ನಿಲ್ದಾಣ ಆಡಳಿತ ತಿಳಿಸಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ