AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 45 ಕಂದಾಯ ಅಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Lokayukta Raid in Bengaluru: ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಆರ್‌ಒ, ಎಆರ್‌ಒ, ಎಡಿಟಿಪಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಲ್ಲದೆ, ಬೀದರ್​ನಲ್ಲಿ, ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಲಂಚ ಪಡೆಯುತ್ತಿದ್ದ ಪ್ರಾಂಶುಪಾಲ ​ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ 45 ಕಂದಾಯ ಅಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರಿನಲ್ಲಿ ಕಂದಾಯ ಅಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Follow us
Shivaprasad
| Updated By: Rakesh Nayak Manchi

Updated on:Aug 03, 2023 | 6:50 PM

ಬೆಂಗಳೂರು, ಆಗಸ್ಟ್ 3: ಕರ್ನಾಟಕದಲ್ಲಿ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸುತ್ತಿರುವ ಲೋಕಾಯುಕ್ತ (Lokayukta Raid) ಪೊಲೀಸರು ಇದೀಗ ಬೆಂಗಳೂರು (Bengaluru) ನಗರ ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಕಂದಾಯ ಅಧಿಕಾರಿಗಳ ಕಚೇರಿಗಳ ಮೇಲೆ ಇಂದು ಸಂಜೆ ದಾಳಿ ನಡೆಸಿದ್ದಾರೆ.

ಪದ್ಮನಾಭನಗರ, ಜಯನಗರ, ವಿಜಯನಗರ, ಬಸವನಗುಡಿ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ ಕೆ.ಆರ್.ಪುರಂ ಸೇರಿದಂತೆ ಒಟ್ಟು 45 ಆರ್‌ಒ, ಎಆರ್‌ಒ, ಎಡಿಟಿಪಿ ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ, ತಪಾಸಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Revenge: ಅಯ್ಯೋ! ಇದೆಂಥಾ ರಿವೇಂಜ್, ಲಂಚ ಕೇಳಿದ್ದಕ್ಕೆ ಲೋಕಾಯುಕ್ತಕ್ಕೆ ಹಿಡಿದುಕೊಟ್ಟಿದ್ದರು, ಅದಕ್ಕೆ ನಿವೃತ್ತಿ ದಿನ ಶಿಕ್ಷಕಿಗೆ ಅವಮಾನಕರ ಸೆಂಡ್​ ಆಫ್​

ಖುದ್ದು ಅಖಾಡಕ್ಕಿಳಿದ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್

ಖುದ್ದು ಅಖಾಡಕ್ಕಿಳಿದ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್​, ರಾಜಾಜಿನಗರದ ಕಂದಾಯ ಕಚೇರಿಯಲ್ಲಿ ಅಧಿಕಾರಿ ಹೆಚ್​ ಭಾರತಿ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ, ಅರ್ಜಿದಾರರಿಗೆ ಕರೆ ಮಾಡಿ ತಾವು ಸಲ್ಲಿಸಿರುವ ಅರ್ಜಿಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿದ್ದಾರಾ? ಲಂಚ ಕೇಳಿದ್ದಾರಾ ಎಂಬಿತ್ಯಾದಿ ಮಾಹಿತಿ ಪಡೆಯುತ್ತಿದ್ದಾರೆ. ಕ್ಯಾಶ್​ ರಿಜಿಸ್ಟ್ರೇಷನ್ ಬಗ್ಗೆ ಆರ್​ಒ ಕಚೇರಿಯಲ್ಲಿ ಲೋಕಾಯುಕ್ತರು ಪ್ರಶ್ನೆ ಕೇಳಿದಾರೆ. ಈ ವೇಳೆ ಯಾವುದೇ ದಾಖಲೆ ಒದಗಿಸದಿದ್ದಕ್ಕೆ ಲೋಕಾಯುಕ್ತರು ಗರಂ ಆಗಿದ್ದಾರೆ. ಕ್ಯಾಶ್ ಡಿಕ್ಲರೇಷನ್ ಬುಕ್ ಬಗ್ಗೆ ಕೇಳಿದ ಹೆಚ್​ ಭಾರತಿ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೆ, ಬುಕ್ ಇಡುವಂತೆ ನಾನು ಈಗಾಗಲೇ  ಹೇಳಿದ್ದೀನಿ ಅಂತ ಹೇಳಿ ಜಾರಿಕೊಂಡಿದ್ದಾರೆ.

ಎಂಜಿ ರಸ್ತೆ ಯುಟಿಲಿಟಿ ಬಿಲ್ಡಿಂಗ್​ಗೆ ಲೋಕಾಯುಕ್ತ ಎಸ್​ಪಿ ಭೇಟಿ

ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ಎಂಜಿ ರೋಡ್​ನಲ್ಲಿರುವ ಯುಟಿಲಿಟಿ ಬಿಲ್ಡಿಂಗ್​ಗೆ ಲೋಕಾಯುಕ್ತ ಎಸ್​ಪಿ ಅಶೋಕ್ ಭೇಟಿ ನೀಡಿದರು. ಯುಟಿಲಿಟಿ ಬಿಲ್ಡಿಂಗ್​ನಲ್ಲಿ ಶಾಂತಿನಗರ ARO ಮತ್ತು RO ಕಚೇರಿ, ದೊಮ್ಮಲೂರು RO ಮತ್ತು ARO ಕಚೇರಿ ಇದೆ.

ನಂತರ ಮಾತನಾಡಿದ ಅಶೋಕ್, ಒಟ್ಟು 45 ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಸಂಜೆ ನಾಲ್ಕು ಗಂಟೆಯಿಂದ ದಾಳಿ ಶುರುವಾಗಿದೆ. ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಸಾರ್ವಜನಿಕರಿಂದ ಸಾಕಷ್ಟು ದೂರು ಬಂದ ಹಿನ್ನಲೆ ಸರ್ಚ್ ನಡೆಸಲಾಗುತ್ತಿದೆ. ದಾಳಿ ಮುಕ್ತಾಯದ ವೇಳೆಗೆ ಏನೆಲ್ಲ ಸಿಗಲಿದೆ ಅನ್ನೋದು ಗೊತ್ತಾಗಲಿದೆ ಎಂದರು.

ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ

ಬೀದರ್: ಲಂಚ ಸ್ವೀಕರಿಸುತ್ತಿದ್ದ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ​ ಶಂಕರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದಲ್ಲಿ ನಡೆದಿದೆ. ನಾಗಶೆಟ್ಟಿ ಎಂಬುವರ ಮಗನಿಗೆ ವಸತಿ ಶಾಲೆಗೆ ಪ್ರವೇಶ ಕೊಡಲು ಶಂಕರ್ ಅವರು 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಾಗಶೆಟ್ಟಿ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್​ಪಿ ಓಲೇಕಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶಂಕರ್ ಅವರನ್ನು ರೆಡ್​ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.

ಪೌರಾಯುಕ್ತೆ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ಚಿತ್ರದುರ್ಗ: ಲಂಚ ಪಡೆಯುತ್ತಿದ್ದ ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಾಗರಾಜ್ ಎಂಬುವರ ಮನೆ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿದ್ದರು. ಅದರಂತೆ  ನಾಗರಾಜ್ ಅವರಿಂದ ಮೂರು ಲಕ್ಷ ಲಂಚ ಸ್ವೀಕಾರ ಮಾಡುತ್ತಿದ್ದಾಗ ಪೌರಾಯುಕ್ತೆ ಲೀಲಾವತಿ, ಬಿಲ್ ಕಲೆಕ್ಟರ್ ನಿಶಾಂತ್‌ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಿತ್ರದುರ್ಗ ಲೋಕಾಯುಕ್ತ ಎಸ್​ಪಿ ವಾಸುದೇವರಾಮ ನೇತೃತ್ವದಲ್ಲಿ ನಡೆದ ದಾಳಿ ಇದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Thu, 3 August 23