ಖಾಸಗಿ ಸೈಬರ್ಗಳಲ್ಲೂ ಇ-ಖಾತಾ ಹಂಚಿಕೆಗೆ ಬಿಬಿಎಂಪಿ ಪ್ಲಾನ್
ಇ ಖಾತಾ ವಿತರಣೆಗೆ ಹಲವು ಸರ್ಕಸ್ ನಡೆಸುತ್ತಿರುವ ಬಿಬಿಎಂಪಿ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಈಗಾಗಲೇ ಬೆಂಗಳೂರು ವನ್, ಬಿಬಿಎಂಪಿ ಕಚೇರಿಗಳಲ್ಲಿ ಇ ಖಾತಾ ನೀಡಲಾಗುತ್ತಿದ್ದು, ಇದೀಗ ಖಾಸಗಿ ಸೈಬರ್ ಕೇಂದ್ರಗಳಲ್ಲೂ ವಿತರಣೆ ಮಾಡುವ ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.

ಬೆಂಗಳೂರು, ಜನವರಿ 29: ಬೆಂಗಳೂರಿನಲ್ಲಿ ಇ-ಖಾತಾ ಸಂಕಷ್ಟ ಬಗೆಹರಿಸಲು ಬಿಬಿಎಂಪಿ ನಿತ್ಯ ಒಂದಿಲ್ಲೊಂದು ಹೊಸ ತಂತ್ರ ಹುಡುಕುತ್ತಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಲು ಅವಕಾಶ ನೀಡಿದ್ದ ಪಾಲಿಕೆ, ಇದೀಗ ಇ-ಖಾತಾ ಹಂಚಿಕೆಗೆ ಮತ್ತೊಂದು ಯೋಜನೆ ಜಾರಿ ಮಾಡಲು ಹೊರಟಿದೆ. ಬುಧವಾರವಷ್ಟೇ ಇ-ಖಾತಾ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣ ಪತ್ರ ಬೇಡ ಎಂದು ಆದೇಶ ಹೊರಡಿಸಿದ್ದ ಪಾಲಿಕೆ, ಇತ್ತ ಇ-ಖಾತಾಗಳನ್ನು ಸಮರ್ಪಕವಾಗಿ ತಲುಪಿಸುವುದಕ್ಕಾಗಿ ಖಾಸಗಿ ಸೈಬರ್ ಕೆಫೆಗಳಿಗೂ ಇ-ಖಾತಾ ಹಂಚಿಕೆಗೆ ಅವಕಾಶ ನೀಡಲು ಹೊರಟಿದೆ.
ಸದ್ಯ ಬೆಂಗಳೂರಿನಲ್ಲಿ ಆಸ್ತಿಗಳಿಗೆ ಇ-ಖಾತಾ ಕಡ್ಡಾಯ ಎಂದಿರುವ ಪಾಲಿಕೆ, ಇತ್ತೀಚೆಗಷ್ಟೇ ಬರೀ ಬಿಬಿಎಂಪಿಯ ಕಚೇರಿಗಳಷ್ಟೇ ಅಲ್ಲದೇ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ಹಂಚಿಕೆಗೆ ಅವಕಾಶ ನೀಡಿತ್ತು. ಇದೀಗ ಅಂದುಕೊಂಡಷ್ಟು ಇ-ಖಾತಾ ಹಂಚಿಕೆ ಆಗದ ಬೆನ್ನಲ್ಲೇ ಮತ್ತೊಂದು ಕ್ರಮಕ್ಕೆ ಮುಂದಾಗಿದೆ.
ಇ-ಖಾತಾ ಹಂಚಿಕೆಗೆ ಎಷ್ಟೇ ಯೋಜನೆ ರೂಪಿಸಿದರೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದುದರಿಂದ ಅಲರ್ಟ್ ಆಗಿರುವ ಪಾಲಿಕೆ, ಇದೀಗ ಖಾಸಗಿ ಸೈಬರ್ ಕೆಫೆಗಳಲ್ಲೂ ಇ-ಖಾತಾ ಹಂಚಿಕೆಗೆ ಅವಕಾಶ ನೀಡಲು ಹೊರಟಿದೆ. ಸದ್ಯ ಬೆಂಗಳೂರು ಒನ್ ಸೆಂಟರ್ ಗಳಲ್ಲಿ ಇ-ಖಾತಾ ಪಡೆಯಲು 45 ರೂಪಾಯಿ ಶುಲ್ಕ ನಿಗದಿಪಡಿಸಿದ್ದ ಪಾಲಿಕೆ, ಇದೀಗ ಸೈಬರ್ ಕೆಫೆಗಳಲ್ಲೂ ಇದೇ ಮೊತ್ತದಲ್ಲಿ ಇ-ಖಾತಾ ಹಂಚಿಕೆಗೆ ಗ್ರೀನ್ ಸಿಗ್ನಲ್ ಕೊಡಲು ಹೊರಟಿದೆ.
ಇ-ಖಾತಾ ಮೇಳ ಆಯೋಜನೆಗೆ ಬಿಬಿಎಂಪಿ ನಿರ್ಧಾರ
ಬೆಂಗಳೂರಿನಲ್ಲಿ 22 ಲಕ್ಷ ಇ-ಖಾತಾಗಳ ಪೈಕಿ ಕೇವಲ 1 ಲಕ್ಷದಷ್ಟು ಹೆಚ್ಚು ಖಾತಾ ವಿತರಣೆಯಾಗಿದ್ದು, ಇದೀಗ ಅತಿಹೆಚ್ಚು ಜನವಸತಿಪ್ರದೇಶ, ಸಂಘ-ಸಂಸ್ಥೆಗಳ ಮೂಲಕ ಇ-ಖಾತಾ ಮೇಳವನ್ನು ಆಯೋಜಿಸಲು ಕೂಡ ಪಾಲಿಕೆ ತಯಾರಿ ನಡೆಸಿದೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಸದ್ಯ ಬೆಂಗಳೂರಿನಲ್ಲಿ ಹಲವು ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಆಸಕ್ತಿ ತೋರದೇ ಮೌನವಾಗಿದ್ದು, ಇದೀಗ ಇ-ಖಾತಾ ನೋಂದಣಿಗೆ ಮೇಳಗಳನ್ನು ಆಯೋಜಿಸುವ ಲೆಕ್ಕಾಚಾರ ಹಾಕುತ್ತಿರುವ ಪಾಲಿಕೆಯ ಪ್ಲಾನ್ ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ