ಬೆಂಗಳೂರು: ದರ್ಶಿನಿ, ಹೋಟೆಲ್​ಗಳಲ್ಲಿ ಇಡ್ಲಿಗಿಲ್ಲ ಡಿಮಾಂಡ್, ದೋಸೆಗೇ ಗ್ರಾಹಕರ ಆದ್ಯತೆ

|

Updated on: Mar 05, 2025 | 10:47 AM

ಬೆಂಗಳೂರು ಮತ್ತು ಕರ್ನಾಟಕದಲ್ಲಿ ಇಡ್ಲಿ ಮಾದರಿಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಬಳಿಕ ಇಡ್ಲಿ ಮಾರಾಟದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಆಹಾರ ಸುರಕ್ಷತಾ ಇಲಾಖೆಯ ತಪಾಸಣೆಯ ನಂತರ ಗ್ರಾಹಕರು ಇಡ್ಲಿ ಖರೀದಿಸಲು ಹಿಂಜರಿಯುತ್ತಿದ್ದಾರೆ. ಹಲವು ರೆಸ್ಟೋರೆಂಟ್‌ಗಳು ಸ್ಟೇನ್‌ಲೆಸ್ ಸ್ಟೀಲ್ ಬಳಸುವ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳುತ್ತಿವೆ. ಆದರೆ, ಗ್ರಾಹಕರು ದೋಸೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಬೆಂಗಳೂರು: ದರ್ಶಿನಿ, ಹೋಟೆಲ್​ಗಳಲ್ಲಿ ಇಡ್ಲಿಗಿಲ್ಲ ಡಿಮಾಂಡ್, ದೋಸೆಗೇ ಗ್ರಾಹಕರ ಆದ್ಯತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್​ 5: ಬೆಂಗಳೂರು ಹಾಗೂ ಕರ್ನಾಟಕದ (Karnataka) ವಿವಿಧ ಕಡೆಗಳಿಂದ ಸಂಗ್ರಹಿಸಿದ ಇಡ್ಲಿ (Idli) ಸ್ಯಾಂಪಲ್​ಗಳಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಇಡ್ಲಿ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FDA) ಇಡ್ಲಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರಿನ ದರ್ಶಿನಿಗಳಲ್ಲಿ ಜನಪ್ರಿಯ ಉಪಹಾರದ ಮಾರಾಟ ಕುಸಿವಾಗಿದೆ.

ಮಲ್ಲೇಶ್ವರಂ, ಆರ್‌ಟಿ ನಗರ ಮತ್ತು ಜಯನಗರದಂತಹ ಪ್ರದೇಶಗಳ ಉಪಾಹಾರ ಮಂದಿರಗಳಲ್ಲಿ ಸಾಮಾನ್ಯ ಗ್ರಾಹಕರು ಇಡ್ಲಿ ಆರ್ಡರ್ ಮಾಡಲು ಹಿಂಜರಿಯುವುದು ಕಂಡುಬಂದಿದೆ ಎಂದು ಹೋಟೆಲ್ ಉದ್ಯಮದ ಮೂಲಗಳು ತಿಳಿಸಿವೆ. ಕೆಲವು ಮಂದಿ ಗ್ರಾಹಕರು, ಇಡ್ಲಿ ತಯಾರಿಸಲು ಬಟ್ಟೆಯನ್ನು ಬಳಸಲಾಗುತ್ತಿದೆಯೇ ಎಂದು ವಿಚಾರಿಸಿಕೊಂಡು ಆರ್ಡರ್ ಮಾಡುವುದು ಕಂಡುಬಂದಿದೆ.

ಆದಾಗ್ಯೂ, ಅನೇಕ ರೆಸ್ಟೋರೆಂಟ್‌ಗಳು ಇತ್ತೀಚಿನ ಆಹಾರ ಇಲಾಖೆ ತಪಾಸಣೆಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಹೊಂದಿದ್ದವು ಮತ್ತು ಅಡುಗೆಗೆ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಬಟ್ಟೆಯನ್ನು ಮಾತ್ರ ಬಳಸುತ್ತಿದ್ದವು. ಶುಚಿತ್ವ ಕಾಪಾಡುವುದರ ಜತೆಗೆ ನೈರ್ಮಲ್ಯ ಮಾನದಂಡಗಳನ್ನು ಕಾಯ್ದುಕೊಳ್ಳುತ್ತವೆ ಎಂದು ಹೋಟೆಲ್​​ಗಳ ಮಾಲೀಕರು ತಿಳಿಸಿದ್ದಾರೆ.

ಇದನ್ನೂ ಓದಿ
ಟ್ಯಾಟೂನಿಂದ ಎಚ್​ಐವಿ, ಕ್ಯಾನ್ಸರ್: ರಾಜ್ಯದಿಂದ ಹೊಸ ಕಾನೂನಿನ ಸುಳಿವು
ಬೆಂಗಳೂರಿನಲ್ಲಿ ಆಪರೇಷನ್​ ಇಡ್ಲಿ: ಹೋಟೆಲ್​ಗಳ ಮೇಲೆ ಅಧಿಕಾರಿಗಳ ರೇಡ್​
ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ
ಗೋಬಿ, ಕಬಾಬ್​ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ!

ಇಡ್ಲಿಯಿಂದ ದೋಸೆಗೆ ಶಿಫ್ಟ್ ಆದ ಗ್ರಾಹಕರು

ದಿನವಿಡೀ ಫ್ರೆಷ್ ಇಡ್ಲಿ ತಯಾರಿಸಲಾಗುತ್ತದೆ. ಆದರೆ ಆಹಾರ ಇಲಾಖೆಯ ತಪಾಸಣೆ ಸುದ್ದಿ ಬಂದ ನಂತರ ಗ್ರಾಹಕರ ಆದ್ಯತೆಗಳು ಬದಲಾಗಿವೆ. ಇದು ಮಾರಾಟದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಮಲ್ಲೇಶ್ವರಂನಲ್ಲಿರುವ ದರ್ಶಿನಿ ರೆಸ್ಟೋರೆಂಟ್‌ನ ಮಾಲೀಕ ಪ್ರಜ್ವಲ್ ಶೆಟ್ಟಿ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಮೊದಲು, ಜನರು ದೋಸೆ ಮತ್ತು ಇಡ್ಲಿಗಳನ್ನು ಬಹುತೇಕ ಸಮಾನ ಸಂಖ್ಯೆಯಲ್ಲಿ ಆರ್ಡರ್ ಮಾಡುತ್ತಿದ್ದರು, ಆದರೆ ಈಗ ಅವರು ದೋಸೆಗೆ ಆದ್ಯತೆ ನೀಡುತ್ತಾರೆ. ದೋಸೆ ತಯಾರಿವುದು ಕಣ್ಣೆದುರೇ ಕಾಣಿಸುವುದರಿಂದ ಅದು ಹೆಚ್ಚು ಸುರಕ್ಷಿತವೆಂದು ಗ್ರಾಹಕರು ಭಾವಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್: ಬೆಂಗಳೂರಿನ ಹಲವೆಡೆ ಇನ್ನೂ ನಿಂತಿಲ್ಲ ಇಡ್ಲಿ ತಯಾರಿಗೆ ಪ್ಲಾಸ್ಟಿಕ್ ಬಳಕೆ

ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಇಡ್ಲಿಗಳನ್ನು ಖರೀದಿಸುತ್ತೇವೆ. ಏಕೆಂದರೆ ಇದು ಹಗುರ ಮತ್ತು ಜೀರ್ಣಿಸಿಕೊಳ್ಳಲು ಸುಲಭ. ಆದಾಗ್ಯೂ, ಇತ್ತೀಚಿನ ವರದಿಗಳಿಂದ ಉಪಾಹಾರದ ಆಯ್ಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುವುದಾಗಿ ಗ್ರಾಹಕರೊಬ್ಬರು ತಿಳಿಸಿರುವುದನ್ನು ವರದಿ ಉಲ್ಲೇಖಿಸಿದೆ.

ಇತ್ತೀಚೆಗೆ ಆಹಾರ ಇಲಾಖೆಯು ರಾಜ್ಯದ ಹಲವು ಕಡೆಗಳಲ್ಲಿ ಇಡ್ಲಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಅವುಗಳಲ್ಲಿ ಹಲವು ಸ್ಯಾಂಪಲ್​ಗಳಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆಯಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಾರ, ಎಲ್ಲ ಹೋಟೆಲ್, ರೆಸ್ಟೋರೆಂಟ್​​ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ