ಬೆಂಗಳೂರು, ನವೆಂಬರ್ 9: ಇತ್ತೀಚೆಗೆ ಕೆಂಗೇರಿಯ ಬಸ್ ನಿಲ್ದಾಣದ ಬಳಿ ನಡೆದಿದ್ದ ಬೆಂಜ್ ಕಾರ್ ಅಪಘಾತ ಪ್ರಕರಣದ ಮತ್ತೊಂದು ಸತ್ಯ ಇದೀಗ ಬಯಲಾಗಿದೆ. ಈಗಾಗಲೇ ಬಂಧಿತನಾಗಿರುವ ಬೆಂಜ್ ಕಾರ್ ಚಾಲಕ ಧನುಷ್ ಕಾರಿನಲ್ಲೇ ಕೂತು ಮದ್ಯಪಾನ ಮಾಡಿದ್ದು, ಕೆಂಗೇರಿ ಸಂಚಾರ ಪೊಲೀಸರ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. ಅಷ್ಟಲ್ಲದೇ ಆರೋಪಿ ಮದ್ಯ ಖರೀದಿ ಮಾಡಿದ್ದೆಲ್ಲಿ, ಕುಡಿದಿದ್ದೆಷ್ಟು ಎಂಬ ವಿಚಾರಗಳು ಕೂಡ ತನಿಖೆಯಲ್ಲಿ ಗೊತ್ತಾಗಿದ್ದು, ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.
ಬೆನ್ಜ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಸಂಧ್ಯಾ ಪ್ರಾಣ ತೆಗೆದಿದ್ದ ಧನುಷ್, ಮದ್ಯಪಾನ ಮಾಡಿರುವುದು ಆ ವೇಳೆಯೇ ಖಚಿತಪಟ್ಟಿತ್ತು. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ಕೂಡ ದಾಖಲಿಸಿದ್ದರು. ತನಿಖೆ ವೇಳೆ, ಆತ ನಾಯಂಡಹಳ್ಳಿ ಬಳಿ ಎಣ್ಣೆ ಖರೀದಿ ಮಾಡಿರುವುದು ಗೊತ್ತಾಗಿದೆ. ಸ್ನೇಹಿತನ ಜೊತೆ ಸೇರಿ ಎಣ್ಣೆ ಖರೀದಿಸಿ ಕಾರಿನಲ್ಲೇ ಎಣ್ಣೆ ಹೊಡೆದಿರುವ ಶಂಕೆ ಕೂಡ ಇದೆ.
ಕಾರಲ್ಲೇ ಮದ್ಯಪಾನ ಮಾಡಿದ ಬಳಿಕ, ಮೈಸೂರು ಬೆಂಗಳೂರು ರಸ್ತೆಯಲ್ಲಿ ಅತಿವೇಗದಲ್ಲಿ ಕಾರು ಚಲಾಯಿಸಿದ್ದು, ಕೆಂಗೇರಿ ಬಸ್ ನಿಲ್ದಾಣದ ಬಳಿ ಬಂದಾಗ ಹಂಪ್ ಅನ್ನೂ ಎಗರಿಸಿ ಸಂಧ್ಯಾಗೆ ಡಿಕ್ಕಿ ಹೊಡೆದಿದ್ದಾನೆ. ಇದಕ್ಕೆಲ್ಲ ಪೊಲೀಸರು ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಹೀಗೆ ಪೊಲೀಸರು ಧನುಷ್ ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಅಷ್ಟಲ್ಲದೇ, ಅಪಘಾತ ಸ್ಥಳ ಹಾಗೂ ಬೆನ್ಜ್ ಕಾರಿನಲ್ಲಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಧನುಷ್ ಡಿಡಿ ಚೆಕ್ ಮಾಡಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಸದ್ಯ ಆರೋಪಿ ರಕ್ತದ ಮಾದರಿಯ ವರದಿ ಬರುವುದು ಬಾಕಿಯಿದೆ. ಆದರೆ, ಬೆಂಜ್ ಕಂಪನಿ ಸಿಬ್ಬಂದಿ ಕರೆಸಿ ಕಾರ್ ಪರಿಶೀಲನೆ ಮಾಡಿಸಿದಾಗ ಡ್ಯಾಶ್ ಕ್ಯಾಮರಾದಲ್ಲಿ ಅಪಘಾತ ದೃಶ್ಯ ಪತ್ತೆಯಾಗಿಲ್ಲ.
ಇದನ್ನೂ ಓದಿ: ಬೆಂಜ್ ಕಾರು ಡಿಕ್ಕಿಯಾಗಿ ಫ್ಯಾಷನ್ ಡಿಸೈನರ್ ಸಾವು: ಕೇಸ್ ಹಿಂಪಡೆಯಲು ಆರೋಪಿಯಿಂದ ಒಂದೂವರೆ ಕೋಟಿ ಆಮಿಷ
ಒಟ್ಟಿನಲ್ಲಿ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಅಪಘಾತ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿ ಒದಗಿಸಬೇಕೆಂದು ಸಂಧ್ಯಾ ಪೋಷಕರು ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಒದಗಿಸಲು ಟ್ರಾಫಿಕ್ ಪೊಲೀಸರಿಗೆ ನಿರ್ದೇಶಿಸುವಂತೆ ಅರ್ಜಿ ಹಾಕಿದ್ದು, ಪ್ರಕರಣ ವಿಚಾರಣೆಗೆ ಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Sat, 9 November 24