ಮಲ್ಲೇಶ್ವರಂ ಕಡಲೆ ಪರಿಷೆಗೆ ದಿನಗಣನೆ: ಈ ಬಾರಿಯ ವಿಶೇಷವೇನು? ಇಲ್ಲಿದೆ ನೋಡಿ

Kadalekai Parishe: ಬಸವನಗುಡಿ ಕಡಲೆಕಾಯಿ ಪರಿಷೆಗೂ ಮುನ್ನ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಕಾಡುಮಲ್ಲೇಶ್ವರ ಗೆಳೆಯರ ಬಳಗವು ಆಯೋಜಿಸಿರುವ ಈ ಕಡಲೆ ಪರಿಷೆ ಯಾವಾಗ ಆರಂಭವಾಗಲಿದೆ, ಎಷ್ಟು ದಿನ ಇರಲಿದೆ, ಈ ಬಾರಿಯ ವಿಶೇಷವೇನು? ಎಲ್ಲ ವಿವರ ಇಲ್ಲಿದೆ.

ಮಲ್ಲೇಶ್ವರಂ ಕಡಲೆ ಪರಿಷೆಗೆ ದಿನಗಣನೆ: ಈ ಬಾರಿಯ ವಿಶೇಷವೇನು? ಇಲ್ಲಿದೆ ನೋಡಿ
ಸಂಗ್ರಹ ಚಿತ್ರ

Updated on: Nov 13, 2024 | 8:01 AM

ಬೆಂಗಳೂರು, ನವೆಂಬರ್ 13: ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೂ ಕೆಲವೇ ದಿನಗಳ ಮುನ್ನ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಇಲ್ಲಿನ ಕಾಡುಮಲ್ಲೇಶ್ವರ ಗೆಳೆಯರ ಬಳಗವು ನವೆಂಬರ್ 15 ರಿಂದ 18 ರವರೆಗೆ ಮಲ್ಲೇಶ್ವರಂನಲ್ಲಿ ನಾಲ್ಕು ದಿನಗಳ ಕಡಲೆಕಾಯಿ ಪರಿಷೆಯನ್ನು ಆಯೋಜಿಸಿದೆ. ಕಡಲೆಕಾಯಿ ಪರಿಷೆ ಪ್ಲಾಸ್ಟಿಕ್ ಮುಕ್ತ ಹಾಗೂ ರೈತ ಸ್ನೇಹಿಯಾಗಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ವರ್ಷ ಪ್ಲಾಸ್ಟಿಕ್ ಬದಲಿಗೆ ಕಾಗದ ಮತ್ತು ಬಟ್ಟೆಯ ಚೀಲಗಳನ್ನೇ ಬಳಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 40 ಸಾವಿರ ಕಾಗದದ ಚೀಲಗಳನ್ನು ಮಾರಾಟಗಾರರಿಗೆ ವಿತರಿಸಲಾಗುವುದು ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿಕೆ ಶಿವರಾಂ ಮಾಹಿತಿ ನೀಡದ್ದಾರೆ. ವಿದ್ಯಾರ್ಥಿ ಸ್ವಯಂಸೇವಕರು ತಯಾರಿಸಿದ ಚೀಲಗಳು ಎರಡರಿಂದ ಮೂರು ಕಿಲೋ ಕಡಲೆಕಾಯಿಯನ್ನು ತುಂಬಿಸಬಲ್ಲದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾಗದದ ಚೀಲಗಳು ಮಾತ್ರವಲ್ಲದೆ, ಹಳೆಯ ಸೀರೆಗಳು ಮತ್ತು ಇತರ ವಸ್ತುಗಳನ್ನು ಬಳಸಿ ಸುಮಾರು 6,000 ಬಟ್ಟೆ ಚೀಲಗಳನ್ನು ಸಿದ್ಧಪಡಿಸಲಾಗಿದೆ. ಈ ಚೀಲಗಳನ್ನು ಮಾರಾಟಗಾರರಿಗೆ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕಡಲೆಕಾಯಿ ಪರಿಷೆ ಹಿನ್ನೆಲೆ

ಕಡಲೆಕಾಯಿ ರೈತರು ತಮ್ಮ ಬೆಳೆಯನ್ನು ಜಾನುವಾರುಗಳಿಂದ ರಕ್ಷಿಸಿಕೊಳ್ಳಲು ಬಸವನನ್ನು ಪೂಜಿಸುತ್ತಾರೆ. ಜಾನುವಾರುಗಳು ಜಮೀನಿಗೆ ಬರುವಂತೆ ಮಾಡುವ ಶಕ್ತಿಗಳನ್ನು ಹತ್ತಿಕ್ಕಲು ರೈತರು ಸಾಂಪ್ರದಾಯಿಕವಾಗಿ ತಮ್ಮ ಮೊದಲ ಬೆಳೆಯನ್ನು ಬಸವ ದೇವರಿಗೆ ಅರ್ಪಿಸುತ್ತಾರೆ. ಇದರಿಂದ ಬೆಳೆ ರಕ್ಷಣೆಯಾಗುತ್ತದೆ ಎಂಬ ನಂಬಿಕೆ ಅವರದ್ದು. ಕಡಲೆ ಪರಿಷೆಯ ಜಾನಪದ ಹಿನ್ನೆಲೆಯಿದು ಎಂದು ಶಿವರಾಂ ವಿವರಿಸಿದ್ದಾರೆ.

ತಮಿಳುನಾಡು, ಆಂಧ್ರದಿಂದಲೂ ಬರಲಿದ್ದಾರೆ ರೈತರು

ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡು, ಆಂಧ್ರಪ್ರದೇಶದ ರೈತರು ಕೂಡ ಪರಿಷೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್​​ನ್ಯೂಸ್: ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್​

ಅಂದಹಾಗೆ, ಬಸವನಗುಡಿಯ ಕಡಲೆಕಾಯಿ ಪರಿಷೆ ನವೆಂಬರ್ 25ರಿಂದ ಆರಂಭವಾಗಲಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:59 am, Wed, 13 November 24

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us