ಬೆಂಗಳೂರು: ವಾಹನ ಚಲಾಯಿಸುವಾಗ ಅತಿಯಾದ ಮೊಬೈಲ್ ಬಳಕೆ; 10 ತಿಂಗಳಲ್ಲಿ 38 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲು
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ನಲ್ಲಿ ಕಾಲ ಕಳೆಯುವ ವಾಹನ ಸವಾರರು, ವಿಶೇಷವಾಗಿ ಆಟೋ ಮತ್ತು ಕ್ಯಾಬ್ ಚಾಲಕರು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ. ಚಾಲನೆ ವೇಳೆ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುತ್ತಿರುವುದರಿಂದ ಇತರ ಪ್ರಯಾಣಿಕರು ಮತ್ತು ಪಾದಾಚಾರಿಗಳ ಸುರಕ್ಷತೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಈ ಕುರಿತು ಕಠಿಣ ಕ್ರಮಗಳ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗಳೂರು, ನವೆಂಬರ್ 11: ಬೆಂಗಳೂರಿನಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲೇ (Bengaluru Traffic) ಕಾಲ ಕಳೆಯುವುದು ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ಸಾಮಾನ್ಯವಾಗಿದೆ. ಈ ಸಮಯದಲ್ಲಿ ಟೈಮ್ ಪಾಸ್ ಮಾಡಲು ಮೊಬೈಲ್ ಹಿಡಿದು ಕೂರುತ್ತಾರೆ. ಹೀಗೆ ಮೊಬೈಲ್ ಗೀಳಿಗೆ ಬಿದ್ದಿರುವ ವಾಹನ ಸವಾರರು ಅಪಾಯಕಾರಿ ಪ್ರವೃತ್ತಿಗೆ ಜಾರುತ್ತಿದ್ದಾರೆ. ಈ ಕುರಿತಂತೆ ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಎಲ್ಲರನ್ನು ಆತಂಕಕ್ಕೆ ದೂಡುತ್ತಿದೆ.
10 ತಿಂಗಳಲ್ಲಿ 38 ಸಾವಿರಕ್ಕೂ ಹೆಚ್ಚು ಪ್ರಕರಣ
ಬೆಂಗಳೂರಿನ ಆಟೋ ಮತ್ತು ಕ್ಯಾಬ್ ಚಾಲಕರಲ್ಲಿ ಸ್ಕ್ರೀನ್ ವ್ಯಸನವು ರಸ್ತೆ ಸುರಕ್ಷತೆಗೆ ಧಕ್ಕೆ ತರುತ್ತಿದೆ. ಸಂಚಾರ ಪೊಲೀಸರು 2025 ರ ಜನವರಿ ಮತ್ತು ಅಕ್ಟೋಬರ್ ನಡುವೆ ಒಟ್ಟಾರೆಯಾಗಿ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆಯ 38,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ನೇವಿಗೇಷನ್ಗೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ವಿಡಿಯೋಸ್, ಶಾರ್ಟ್ಸ್ ನೋಡುತ್ತಾ ಚಾಲನೆ ಮಾಡುವ ಪ್ರವೃತ್ತಿ ಅತಿಯಾಗಿರುವುದು ರಸ್ತೆ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ.
ಇದನ್ನೂ ಓದಿ ಬೆಂಗಳೂರು ಟ್ರಾಫಿಕ್ ನಿಭಾಯಿಸಲು ‘ಕೋಬ್ರಾ ಬೀಟ್’! ಏನಿದು ಹೊಸ ವ್ಯವಸ್ಥೆ?
ಕಠಿಣ ಕ್ರಮ ಜಾರಿಗೆ ಆಗ್ರಹ
ಬೆಂಗಳೂರಿನ ಸಂಚಾರ ಸಮಸ್ಯೆಗಳು ವಾಹನ ನೋಂದಣಿಯಲ್ಲಿನ ತೀವ್ರ ಏರಿಕೆಯಿಂದ ಮತ್ತಷ್ಟು ಜಟಿಲಗೊಂಡಿವೆ. ಈ ಏರಿಕೆಯು ಅಸ್ತಿತ್ವದಲ್ಲಿರುವ ರಸ್ತೆ ಸುರಕ್ಷತಾ ಸವಾಲುಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ. ಇದರ ಮಧ್ಯೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಚಾಲಕರು ಪಾದಾಚಾರಿಗಳ ಸಂಚಕಾರಕ್ಕೂ ಕಾರಣರಾಗುತ್ತಿದ್ದಾರೆ. ಹೀಗಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳ ಜಾರಿ ಹಾಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 am, Tue, 11 November 25




