ಬೆಂಗಳೂರು: ರಾಜ್ಯದಲ್ಲಿ ಮತ್ತೆ ವರಣನ ಆರ್ಭಟ ಆರಂಭಗೊಂಡಿದ್ದು, ಇಂದು ಕೂಡ ಅಲ್ಲಲ್ಲಿ ಮೋಡ ಕವಿದ ವಾತಾವರಣ (Cloudy weather) ನಿರ್ಮಾಣವಾಗಿದೆ. ನೆಲಮಂಗಲದಲ್ಲಿ ನೀರಿನ ರಭಸಕ್ಕೆ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿ ಮೃತಪಟ್ಟಿರುವ ಪ್ರಕರಣ ನಡೆದಿದೆ. ಕೆರೆ ಕೋಡಿ ಹೊಡೆದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ವೀರಭದ್ರಪ್ಪ (50) ಎಂಬ ವ್ಯಕ್ತಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಮನೆಯಿಂದ 500 ಮೀಟರ್ ದೂರದಲ್ಲಿ ಅವರ ಮೃತದೇಹ(dead body) ಪತ್ತೆಯಾಗಿದೆ. ಈ ಘಟನೆ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾನ್ಸೂನ್ ಪೂರ್ವ ಮಳೆಗೆ 9 ಸಾವು!
ರಾಜ್ಯದಲ್ಲಿ ಮಾನ್ಸೂನ್ ಪೂರ್ವ ಮಳೆಯಿಂದ ಆಸ್ತಿಪಾಸ್ತಿಯೊಂದಿಗೆ ಜೀವಹಾನಿಯೂ ಆಗಿದ್ದು, ಈವರೆಗೆ 9 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 204 ಹೆಕ್ಟೇರ್ ಕೃಷಿ ಬೆಳೆ ಹಾನಿ ಆಗಿದೆ. 431 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ ಮತ್ತು 29 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆಯೆಂದು ತಿಳಿದುಬಂದಿದೆ. ಈ ಬಗ್ಗೆ ಕಂದಾಯ ಇಲಾಖೆ ಮಾಹಿತಿ ಪಡೆದುಕೊಂಡಿದೆ.
ಮುಖ್ಯ ಎಂಜಿನಿಯರ್ ಎತ್ತಂಗಡಿಗೆ ಸೂಚನೆ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಟಿ ರೌಂಡ್ಸ್ ಹೊಡೆದು ಪರಿಶೀಲನೆ ನಡೆಸಿದ್ದಾರೆ. ನಂತರ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಿಎಂ ಬೊಮ್ಮಾಯಿ, ರಾಜುಕಾಲುವೆ ಸಮಗ್ರ ಅಭಿವೃದ್ಧಿ, ಒತ್ತುವರಿ ತೆರವು ಹಾಗೂ ಮಳೆ ಸಂತೃಸ್ತರಿಗೆ ಪರಿಹಾರ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಬೃಹತ್ ಮಳೆನೀರುಗಾಲುವೆ ಅಧಿಕಾರಿ ವಿರುದ್ದ ಸಿಎಂ ಕೆಂಡಾಮಂಡಲವಾಗಿದ್ದಾರೆ.
ರಾಜಕಾಲುವೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಿಎಂ ಬೇಸರ ವ್ಯಕ್ತಪಡಿಸಿದ್ದು, ರಾಜಕಾಲುವೆ ವಿಚಾರದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಜನವರಿಯಲ್ಲೇ ಎಚ್ಚೆತ್ತುಕೊಳ್ಳುವಂತೆ ಸೂಚಿಸಿದರೂ ಮೈಮರೆತಿದ್ದೀರಿ. ಹಾನಿ ತಪ್ಪಿಸಲು ಅಧಿಕಾರಿಗಳ ಮಟ್ಟದಲ್ಲೇ ಟಾಸ್ಕ್ ಫೋರ್ಸ್ ರಚಿಸಬೇಕು. ಗುಣಮಟ್ಟದ ಕೆಲಸ ಆಗದಿದ್ದರೆ ಅಧಿಕಾರಿಗಳನ್ನ ಎತ್ತಂಗಡಿ ಮಾಡಲಾಗುವುದು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದನ್ನು ಓದಿ: ಮಳೆಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತುಮಕೂರಿನ ಕೆಂಚನಹಳ್ಳಿ-ಸಿ ಎಸ್ ಪುರ ನಡುವಿನ ರಸ್ತೆ ಕೊಚ್ಚಿಕೊಂಡು ಹೋಯಿತು!
ಕಳೆದ ಬಾರಿ ಬಿಬಿಎಂಪಿ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಭೆ ನಡೆಸಿದ್ದರು. ಈ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿದ್ದ ಕೆಲವು ಕಾಮಗಾರಿಗಳನ್ನು ಪೂರ್ಣ ಮಾಡುವಂತೆ ಬೃಹತ್ ಮಳೆನೀರುಗಾಲುವೆ ಮುಖ್ಯ ಇಂಜಿನಿಯರ್ ಅವರಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ, ಇದುವರೆಗೆ ಕೆಲಸ ಕಾರ್ಯಗಳು ಪೂರ್ಣಗೊಳ್ಳದ ಹಿನ್ನೆಲೆ ಅಸಮಧಾನ ವ್ಯಕ್ತಪಡಿಸಿದ ಸಿಎಂ, ಬೃಹತ್ ಮಳೆನೀರುಗಾಲುವೆ ಮುಖ್ಯ ಇಂಜಿನಿಯರ್ ಸುಗುಣ ಅವರನ್ನು ಎತ್ತಂಗಡಿ ಮಾಡುವಂತೆ ಸೂಚಿಸಿದ್ದಾರೆ. ಅರ್ಹತೆ ಇಲ್ಲ ಅಂದ ಮೇಲೆ ಇಂಥ ಹುದ್ದೆಯಲ್ಲಿ ಇರುವುದು ಬೇಡ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್
ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇದ್ದು, ಈ ನಿಟ್ಟಿನಲ್ಲಿ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅದರಂತೆ, ರೆಡ್ ಅಲರ್ಟ್ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಕಂದಾಯ ಸಚಿವ ಆರ್.ಅಶೋಕ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಡಿಸಿಗಳ ಜೊತೆ ವಿಕಾಸಸೌಧದಿಂದ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ನೀತಿ ಸಂಹಿತೆ ಹಿನ್ನೆಲೆ ಹಾಸನ ಮತ್ತು ಉತ್ತರ ಕನ್ನಡ ಡಿಸಿಗಳ ಬದಲು ಜಿಲ್ಲಾ ಪಂಚಾಯತ್ ಸಿಇಒಗಳು ಭಾಗಿಯಾದರು. ಇದೇ ವೇಳೆ ಸಚಿವರು, ಜಿಲ್ಲೆಗಳಲ್ಲಿ ಕೈಗೊಂಡ ಅಗತ್ಯ ಕ್ರಮಗಳು ಹಾಗೂ ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಜ್ಯಕ್ಕೆ ಆಗಮಿಸಲಿರುವ NDRF ತಂಡ
ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆ 4 NDRF ತಂಡ ಆಗಮಿಸಲಿದ್ದು, ಮಾನ್ಸೂನ್ ಮಳೆ ಬರುವ ಮುನ್ನವೇ ಎನ್ಡಿಆರ್ಎಫ್ ತಂಡಗಳು ಆಗಮಿಸಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ಒಂದು ತಂಡ, ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರಿಗೆ ಒಂದು ತಂಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ 1 ತಂಡ, ರಾಯಚೂರು, ಯಾದಗಿರಿ, ಬಳ್ಳಾರಿ, ಕಲಬುರಗಿ 1 ಟೀಮ್, ಬೆಂಗಳೂರಿನಲ್ಲಿ ಕಾರ್ಯಚರಣೆಗೆ 1 ತಂಡ ಸಿದ್ಧವಾಗಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ