ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಗಡುವು ಇಂದು ಅಂತ್ಯ: ರಜಾ ದಿನವಾದ ಭಾನುವಾರವೂ ಮುಂದುವರಿದ ಕಾಮಗಾರಿ!

| Updated By: Ganapathi Sharma

Updated on: Sep 16, 2024 | 7:56 AM

ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ‘ಟಿವಿ9’ ನಿರಂತರ ವರದಿ ಬೆನ್ನಲ್ಲೇ ರಸ್ತೆಗುಂಡಿಗಳನ್ನ ಮುಚ್ಚಲು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಡೆಡ್​ಲೈನ್ ಅಂತ್ಯವಾಗುತ್ತಿದ್ದಂತೆಯೇ ಪಾಲಿಕೆ ಅಧಿಕಾರಿಗಳು ಕೂಡ ಗುಂಡಿ ಮುಚ್ಚುವ ಕೆಲಸಕ್ಕೆ ವೇಗ ನೀಡಿದ್ದಾರೆ. ಭಾನುವಾರವೂ ಫೀಲ್ಡ್​​ಗಿಳಿದ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಮೂಲಕ ದಾಸರಹಳ್ಳಿ ವಲಯದ ರಸ್ತೆಗುಂಡಿಗಳಿಗೆ ತೇಪೆ ಹಚ್ಚಿಸಿದ್ದಾರೆ.

ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಗಡುವು ಇಂದು ಅಂತ್ಯ: ರಜಾ ದಿನವಾದ ಭಾನುವಾರವೂ ಮುಂದುವರಿದ ಕಾಮಗಾರಿ!
ಭಾನುವಾರವೂ ಮುಂದುವರಿದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ
Follow us on

ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಗಡುವು ಮತ್ತು ಸಸ್ಪೆಂಡ್ ಎಚ್ಚರಿಕೆಯ ಕಾರಣ ಅಧಿಕಾರಿಗಳು ಭಾನುವಾರದ ರಜೆಯನ್ನೂ ರದ್ದು ಮಾಡಿ ಫೀಲ್ಡ್​​ಗಿಳಿದಿದ್ದಾರೆ. ರಜೆಯ ದಿನ ಕೂಡ ದಾಸರಹಳ್ಳಿ ವಲಯದಲ್ಲಿ ಸಿಬ್ಬಂದಿ ಮೂಲಕ ರಸ್ತೆ ಗುಂಡಿ ಮುಚ್ಚಿಸಿದ್ದಾರೆ.

ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ತ್ವರಿತಗೊಳಿಸಿರುವ ಬಿಬಿಎಂಪಿ, ಡಿಸಿಎಂ ನೀಡಿದ್ದ 15 ದಿನಗಳ ಡೆಡ್​​​ಲೈನ್ ಅಂತ್ಯವಾಗುತ್ತಿದ್ದಂತೆಯೇ ಕೆಲಸ ಚುರುಕುಗೊಳಿಸಿದೆ. ಗುಂಡಿ ಮುಚ್ಚುವ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿದ ಪಾಲಿಕೆ ಅಧಿಕಾರಿಗಳು ಭಾನುವಾರ ದಾಸರಹಳ್ಳಿವಲಯದ ಸುಬ್ರತೋ ಮುಖರ್ಜಿ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ. ಖುದ್ದು ಅಖಾಡಕ್ಕಿಳಿದಿದ್ದ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರು ಎಲ್ಲೆಲ್ಲಿ ಗುಂಡಿಗಳಿವೆ ಎಂಬ ತಪಾಸಣೆ ನಡೆಸಿ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಸ್ಪಂದನೆ ವ್ಯಕ್ತವಾಗ್ತಿದ್ದು, ದಾಸರಹಳ್ಳಿವಲಯದಲ್ಲಿ ಕಾರ್ಯಾಚರಣೆ ವೇಳೆ ಕೆಲ ಸ್ಥಳೀಯರು, ನಮ್ಮ ಏರಿಯಾ ಗುಂಡಿಗಳನ್ನು ಮುಚ್ಚಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಈ ವೇಳೆ, ಎಲ್ಲ ಗುಂಡಿಗಳನ್ನೂ ಮುಚ್ಚುತ್ತೇವೆ ಎಂದು ಭರವಸೆ ಕೊಟ್ಟ ಪಾಲಿಕೆ ಅಧಿಕಾರಿಗಳು, ಸದ್ಯ ದೂರು ಬಂದಿರುವ ಎಲ್ಲಾ ಕಡೆ ಸಮಸ್ಯೆ ಬಗೆಹರಿಸಿದ್ದೇವೆ. ಇನ್ನೂ ಬರುತ್ತಿರುವ ದೂರಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಅಧಿಕಾರಿಗಳ ಮೇಲುಸ್ತುವಾರಿ

ಹಲವೆಡೆ ಟ್ರಾಫಿಕ್ ಜಾಮ್

ಪೀಕ್ ಅವರ್​​ನಲ್ಲೇ ಹಲವೆಡೆ ಗುಂಡಿ ಮುಚ್ಚುವ ಕೆಲಸ ಆಗುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು. ಟ್ರಾಫಿಕ್ ಜಾಮ್ ಆಗುತ್ತಿದ್ದಂತೆಯೇ ಫೀಲ್ಡ್​​​ಗಿಳಿದ ಮಾರ್ಷಲ್​​ಗಳು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಿದರು. ಈ ವೇಳೆ ಮಾತನಾಡಿದ ಜಂಟಿ ಆಯುಕ್ತೆ ಪಲ್ಲವಿ, ರಸ್ತೆ ಗುಂಡಿಗಳನ್ನು ಮುಚ್ಚುವಾಗ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಇನ್ಮುಂದೆ ರಾತ್ರಿ ವೇಳೆಯೇ ಗುಂಡಿಗಳನ್ನ ಮುಚ್ಚುವ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಸಾವು: ಕರ್ನಾಟಕದಲ್ಲಿ ಹೈ ಟೆನ್ಷನ್‌

ಒಟ್ಟಿನಲ್ಲಿ ಬೆಂಗಳೂರಿನ ರಸ್ತೆಗುಂಡಿಗಳಿಂದ ಕಂಗಾಲಾದ ಜನರಿಗೆ ಇದೀಗ ಪಾಲಿಕೆ ಕೆಲಸದಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಇತ್ತ ಡಿಸಿಎಂ ನೀಡಿದ್ದ ಗಡುವು ಇಂದು ಕೊನೆಗೊಳ್ಳಲಿದ್ದು, ರಾಜಧಾನಿಯ ಗುಂಡಿಗಳನ್ನು ಮುಚ್ಚಲು ಪಾಲಿಕೆ ಇನ್ನೆರಡು ದಿನ ಕಾಲಾವಕಾಶ ಕೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ