ಕಾಲ್ ಗರ್ಲ್ ಬೇಕೆಂದು ಲಿಂಕ್ ಕ್ಲಿಕ್ ಮಾಡಿ ಪೇಮೆಂಟ್! ಬೆಂಗಳೂರು ಟೆಕ್ಕಿಗೆ ಲಕ್ಷಾಂತರ ರೂ. ಪಂಗನಾಮ
ಆನ್ಲೈನ್ ಮೂಲಕ ವಂಚನೆ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವುದರ ಮಧ್ಯೆಯೇ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬ ಕಾಲ್ ಗರ್ಲ್ ಮೋಹಕ್ಕೆ ಬಲಿಯಾಗಿ 1.4 ಲಕ್ಷ ರೂ. ಮತ್ತೊಂದು ಪ್ರಕರಣದಲ್ಲಿ, ಮ್ಯಾಟ್ರಿಮೋನಿ ಸೈಟ್ನಲ್ಲಿ ವಧುವಿನಂತೆ ಬಿಂಬಿಸಿ ಸೈಬರ್ ವಂಚಕರು ಟೆಕ್ಕಿಯೊಬ್ಬರಿಗೆ 55 ಲಕ್ಷ ರೂ. ಪಂಗನಾಮ ಹಾಕಿದ್ದಾರೆ.

ಬೆಂಗಳೂರು, ಆಗಸ್ಟ್ 6: ಆನ್‌ಲೈನ ಮೂಲಕ ಕಾಲ್ ಗರ್ಲ್ ಪಡೆಯಲು ಹೋಗಿ ಬೆಂಗಳೂರಿನ (Bengaluru) ಟೆಕ್ಕಿಯೊಬ್ಬರು 1.4 ಲಕ್ಷ ರೂ. ಕಳೆದುಕೊಂಡಿರುವ (Cyber Crime) ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ಕಾಲ್ ಗರ್ಲ್ ಸೇವೆ ಬೇಕೆಂದು ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್‌ನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದ್ದರು. ಆಗ ಅವರಿಗೆ ಇಶಾನಿ ರೆಡ್ಡಿ ಎಂದು ಗುರುತಿಸಿಕೊಂಡಿದ್ದವಳ ಜತೆ ಸಂವಹನ ಏರ್ಪಟ್ಟಿತ್ತು.
ಕಾಲ್ ಗರ್ಲ್ ಮತ್ತು ಸ್ಪಾ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡ ಇಶಾನಿ, 299 ರೂ. ಪಾವತಿಸುವಂತೆ ಸೂಚಿಸಿದ್ದಳು. ಅದನ್ನು ಪಾವತಿಸಿದ ನಂತರ, ವಿವಿಧ ಸೇವಾ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣವನ್ನು ಟ್ರಾನ್ಸ್ಫರ್ ಮಾಡುವಂತೆ ಪದೇ ಪದೇ ಆಕೆ ಒತ್ತಾಯಿಸಿದ್ದಳು. ಒಟ್ಟಾರೆಯಾಗಿ, 1,49,052 ರೂ.ಗಳನ್ನು ಟೆಕ್ಕಿ ಕಳುಹಿಸಿದ್ದರು.
ಬಳಿಕ, ಮೊತ್ತ ಹೆಚ್ಚಾಗಿದ್ದು, ಸೇವೆ ಬೇಕಾಗಿಲ್ಲ ಎಂದು ಟೆಕ್ಕಿ ಹೇಳಿದ್ದಾರೆ. ಅಲ್ಲದೆ, ಪಾವತಿ ಮಾಡಿದ್ದ ಮೊತ್ತವನ್ನು ರಿಫಂಡ್ ಮಾಡುವಂತೆ ಕೇಳಿದ್ದಾರೆ. ಆದರೆ, ಆ ಕಡೆಯಿಂದ ಉತ್ತರವೇ ಬಂದಿಲ್ಲ. ಹೀಗಾಗಿ ಟೆಕ್ಕಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ಈ ವಿಷಯದ ಬಗ್ಗೆ ವರದಿ ಮಾಡಿ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ.
ವಧುವಿನ ಹೆಸರಿನಲ್ಲಿ ಮ್ಯಾಟ್ರಿಮೊನಿ ಸೈಟ್ ಮೂಲಕ 55 ಲಕ್ಷ ರೂ. ವಂಚನೆ!
ಮತ್ತೊಂದು ಪ್ರಕರಣದಲ್ಲಿ ಟೆಕ್ಕಿಯೊಬ್ಬರು, ಮ್ಯಾಟ್ರಿಮೋನಿಯಲ್ ಪೋರ್ಟಲ್‌ನಲ್ಲಿ ವಧು ಎಂದು ಬಿಂಬಿಸಿದ್ದ ಸೈಬರ್ ವಂಚಕರ ನಂಬಿ 55 ಲಕ್ಷ ರೂ.ಗೂ ಹೆಚ್ಚು ಕಳೆದುಕೊಂಡಿದ್ದಾರೆ. ಉಲ್ಲಾಳ ಉಪನಗರದ 32 ವರ್ಷದ ಸಂತ್ರಸ್ತ ಟೆಕ್ಕಿ, ಒಕ್ಕಲಿಗ ವೈವಾಹಿಕ ವೇದಿಕೆಯಲ್ಲಿ ನಿಹಾರಿಕಾ ಗೌಡ ಎಂಬವರ ಸಂಪರ್ಕಕ್ಕೆ ಬಂದಿದ್ದರು. ಇಬ್ಬರೂ ಪರಸ್ಪರ ಚಾಟ್ ಆರಂಭಿಸಿ ಸಲುಗೆ ಹೊಂದಿದ್ದಾರೆ. ಟೆಕ್ಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆಕೆ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದ್ದಳು. ಅದು ಎಷ್ಟು ಲಾಭದಾಯಕ ಎಂದು ವಿವರಿಸಿ, ಟೆಕ್ಕಿಗೆ ನಕಲಿ ವೆಬ್‌ಸೈಟ್‌ನ ಲಿಂಕ್ ಕಳುಹಿಸಿ, ವ್ಯಾಲೆಟ್ ರಚಿಸಲು ಮಾರ್ಗದರ್ಶನ ನೀಡಿದ್ದಳು.
ಇದನ್ನೂ ಓದಿ: ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್, 378 ಕೋಟಿ ರೂ. ಮಾಯ
ಆರಂಭದಲ್ಲಿ 1 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದ ಟೆಕ್ಕಿ, ಸೈಟ್ ಲಾಭವನ್ನು ತೋರಿಸುತ್ತಿದ್ದಂತೆ ಹೂಡಿಕೆ ಮಾಡುವುದನ್ನು ಮುಂದುವರೆಸಿದದ್ದ. ಅಂತಿಮವಾಗಿ ಬಹು ವಹಿವಾಟುಗಳಲ್ಲಿ 55.64 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದ. ಹಣವನ್ನು ಹಿಂಪಡೆಯಲು ಸಾಧ್ಯವಾಗದಿದ್ದಾಗ ಮೋಸ ಹೋಗಿದ್ದೇನೆಂದು ಅರಿವಾಗಿದೆ. ನಂತರ ವಧುವೆಂದು ಬಿಂಬಿಸಿಕೊಂಡಿದ್ದ ವ್ಯಕ್ತಿಯಿಂದಲೂ ಪ್ರತಿಕ್ರಿಯೆ ಬರುವುದು ನಿಂತಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.




