ಬೆಂಗಳೂರಿನಲ್ಲಿ 2026 ರ ಹೊಸ ವರ್ಷಾಚರಣೆಗೆ ಹೊಸ ಟ್ರಾಫಿಕ್ ರೂಲ್ಸ್!
ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನಲ್ಲಿ ಹೊಸವರ್ಷದ (New year 2026) ಸ್ವಾಗತಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಈಗಾಗಲೇ ಹೊಸರ್ಷಾಚರಣೆಗೆ ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರ ಬೆನ್ನಲ್ಲೇ ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ವಿಶೇಷ ಟ್ರಾಫಿಕ್ ನಿಯಂತ್ರಣ ಮತ್ತು ನಿರ್ಬಂಧಗಳನ್ನು ನಗರ ಪೊಲೀಸ್ ಇಲಾಖೆ ಜಾರಿಗೊಳಿಸಿದೆ. ಡಿಸೆಂಬರ್ 31 ರ ಸಂಜೆಯಿಂದ ಜನವರಿ 1ರ ಬೆಳಗಿನವರೆಗೂ ಸಂಚಾರ ಸುರಕ್ಷತೆಗಾಗಿ ಕೆಲವು ರಸ್ತೆಗಳಲ್ಲಿ ವಾಹನ ನಿಷೇಧ ಹೇರಲಾಗಿದ್ದು, ಪಾರ್ಕಿಂಗ್ ವ್ಯವಸ್ಥೆ ಮತ್ತು ಪರ್ಯಾಯ ಮಾರ್ಗಗಳನ್ನು ಟ್ರಾಫಿಕ್ ಅಡ್ವೈಸರಿ ಹಂಚಿಕೊಂಡಿದೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ?
ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿ 02 ಗಂಟೆಯವರೆಗೆ ಪೊಲೀಸ್ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರ ಎಲ್ಲಾ ವಾಹನಗಳ ಸಂಚಾರವನ್ನು ಕೆಳಕಂಡ ರಸ್ತೆಗಳಲ್ಲಿ ನಿಷೇಧಿಸಲಾಗಿದೆ
- ಎಂ.ಜಿ ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ
- ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಓಪೇರಾ ಜಂಕ್ಷನ್ ವರೆಗೆ
- ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ
- ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್‌ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
- ಮ್ಯೂಸಿಯಂ ರಸ್ತೆ: ಎಂ.ಜಿ ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ ವೃತ್ತ) ವರೆಗೆ
- ರೆಸ್ಟ್ ಹೌಸ್ ರಸ್ತೆ: ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ
- ರೆಸಿಡೆನ್ಸಿ ಕ್ರಾಸ್ ರಸ್ತೆ: ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರದವರೆಗೆ)
ಇದನ್ನೂ ಓದಿ New Year 2026: ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ನಿರ್ಬಂಧಿತ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಡಿಸೆಂಬರ್ 31ರ ರಾತ್ರಿ 08 ಗಂಟೆಯ ನಂತರ ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಪೊಲೀಸ್ ಇಲಾಖೆ ಸೂಚಿಸಿದೆ
- ಕ್ವೀನ್ಸ್ ವೃತ್ತದಿಂದ ಹಲಸೂರು ಕಡೆಗೆ ಹೋಗುವ ವಾಹನಗಳು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ – ಬಿ.ಆರ್.ವಿ ಜಂಕ್ಷನ್ – ಕಬ್ಬನ್ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಬಹುದು
- ಹಲಸೂರಿನಿಂದ ಕಂಟೋನ್ಮೆಂಟ್ ಕಡೆಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ – ಡಿಕನ್ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆ ಸೇರಬೇಕು
- ಕಾಮರಾಜ್ ರಸ್ತೆ: ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ವಾಹನ ನಿಲುಗಡೆಗೆ ಅವಕಾಶ
- ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲ ತಿರುವು ಪಡೆದು ಎ.ಎಸ್.ಸಿ ಸೆಂಟರ್‌ನಲ್ಲಿ ಎಡ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು
- ಹೆಚ್.ಎ.ಎಲ್ ಕಡೆಯಿಂದ ಬರುವ ವಾಹನಗಳು ಎ.ಎಸ್.ಸಿ ಸೆಂಟರ್‌ನಲ್ಲಿ ಬಲ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು
- ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ ರಸ್ತೆ ಜಂಕ್ಷನ್‌ನಿಂದ ಓಪೇರಾ ಜಂಕ್ಷನ್ ಕಡೆಗೆ ಮಾತ್ರ ಕಾಲ್ನಡಿಗೆಯಲ್ಲಿ ಸಾಗಬೇಕು; ವಿರುದ್ಧ ದಿಕ್ಕಿನಲ್ಲಿ ಸಂಚರಿಸಲು ಅವಕಾಶವಿಲ್ಲ
ಇದನ್ನೂ ಓದಿ ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಪಾರ್ಕಿಂಗ್ಗೆ ನಿರ್ಬಂಧ
ಡಿಸೆಂಬರ್ 31ರ ಸಂಜೆ 04.00 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 03.00 ಗಂಟೆಯವರೆಗೆ ಕೆಳಕಂಡ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ವಿಧಿಸಲಾಗಿದೆ
- ಎಂ.ಜಿ ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ
- ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಓಲ್ಡ್ ಪಿ.ಎಸ್ ಜಂಕ್ಷನ್ ವರೆಗೆ
- ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್ ವರೆಗೆ
- ರೆಸ್ಟ್ ಹೌಸ್ ರಸ್ತೆ: ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ
- ಮ್ಯೂಸಿಯಂ ರಸ್ತೆ: ಎಂ.ಜಿ ರಸ್ತೆ ಜಂಕ್ಷನ್‌ನಿಂದ ಎಸ್.ಬಿ.ಐ ವೃತ್ತದವರೆಗೆ
- ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್‌ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಹಾಗೂ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಡಿಸೆಂಬರ್ 31ರ ಸಂಜೆ 04.00 ಗಂಟೆಯೊಳಗೆ ತೆರವುಗೊಳಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ
ಪಾರ್ಕಿಂಗ್ ವ್ಯವಸ್ಥೆ
ಸಾರ್ವಜನಿಕರ ಅನುಕೂಲಕ್ಕಾಗಿ ಶಿವಾಜಿನಗರ ಬಿ.ಎಂ.ಟಿ.ಸಿ ಶಾಪಿಂಗ್ ಕಾಂಪ್ಲೆಕ್ಸ್ – 1ನೇ ಮಹಡಿ, ಯು.ಬಿ. ಸಿಟಿ, ಗರುಡಾ ಮಾಲ್, ಕಾಮರಾಜ್ ರಸ್ತೆ (ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ) ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.