Bangalore: ಹಳೆ ಮದ್ರಾಸ್ ರಸ್ತೆ ಟು ಇಂದಿರಾನಗರ ಸಂಚಾರ ಮಾರ್ಗದಲ್ಲಿ ವ್ಯತ್ಯಯ; ಪರ್ಯಾಯ ಮಾರ್ಗ ಇಲ್ಲಿದೆ ನೋಡಿ
ಹಳೆ ಮದ್ರಾಸ್ ರಸ್ತೆಯ ಒಂದು ಭಾಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಹಳೆ ಮದ್ರಾಸ್ ರಸ್ತೆಯಿಂದ ಪೂರ್ವ ಬೆಂಗಳೂರಿನ ಇಂದಿರಾನಗರಕ್ಕೆ ತೆರಳುವ ಸಾರ್ವಜನಿಕರಿಗೆ ಬದಲಿ ಸಂಚಾರಿ ಮಾರ್ಗವನ್ನು ಕಲ್ಪಿಸಲಾಗಿದೆ.
ಬೆಂಗಳೂರು: ನಗರದ ವಿವಿಧ ರಸ್ತೆಗಳಿಗೆ ವೈಟ್ ಟಾಪಿಂಗ್ ಕೆಲಸಕಾರ್ಯಗಳು ನಡೆಯುತ್ತಿರುವುದರಿಂದ ಸಂಚಾರಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದೀಗ ಹಳೆ ಮದ್ರಾಸ್ ರಸ್ತೆಯ ಒಂದು ಭಾಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಹಳೆ ಮದ್ರಾಸ್ ರಸ್ತೆಯಿಂದ ಬೆಂಗಳೂರಿನ ಇಂದಿರಾನಗರಕ್ಕೆ ವಾಹನಗಳನ್ನು ಚಲಾಯಿಸುವ ಪ್ರಯಾಣಿಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಬುಧವಾರದಂದು ಸಲಹೆ ನೀಡಿದ್ದಾರೆ. ಇಂದಿರಾನಗರ, ಹಲಸೂರು ಮತ್ತು ಜೀವನ್ ಭೀಮಾ ನಗರ ಸೇರಿದಂತೆ ಪೂರ್ವ ಬೆಂಗಳೂರು ಭಾಗಗಳಲ್ಲಿ ಸಂಚಾರ ದಟ್ಟಣೆಯಾಗುವ ಬಗ್ಗೆ ವಾಹನ ಸವಾರರಿಗೆ ಹಾಗೂ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಹಳೆ ಮದ್ರಾಸ್ ರಸ್ತೆಯಲ್ಲಿ 100 ಅಡಿ ರಸ್ತೆ ಜಂಕ್ಷನ್ ಮತ್ತು ಲಕ್ಷ್ಮೀಪುರಂ ಜಂಕ್ಷನ್ ನಡುವೆ ವೈಟ್ ಟಾಪಿಂಗ್ ಕಾಮಗಾರಿ ಪ್ರಕ್ರಿಯೆ ಆರಂಭ (ನ.16ರಿಂದ)ಗೊಂಡಿದ್ದು, ಸಂಚಾರ ಮಾರ್ಗದಲ್ಲಿ ವ್ಯತ್ಯಯ ಆಗಲಿದೆ. ಕೆಆರ್ ಪುರಂನಿಂದ ಬರುವ ಭಾರಿ ವಾಹನಗಳು 80 ಅಡಿ ರಸ್ತೆ ಮತ್ತು ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆಯನ್ನು ಬಳಸಿ ಹಳೆಯ ಮದ್ರಾಸ್ ರಸ್ತೆಗೆ ಮರುಸಂಪರ್ಕಿಸಬೇಕು. ಸಣ್ಣ ವಾಹನಗಳು 100 ಅಡಿ ರಸ್ತೆ ಮತ್ತು ಸಿಎಂಎಚ್ ರಸ್ತೆಯನ್ನು ಬಳಸಬೇಕು.
ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಮದ್ರಾಸ್ ರಸ್ತೆ ಲಕ್ಷ್ಮೀಪುರಂ ಸ್ಮಶಾನ ಅಥವಾ ಆಂಜನೇಯ ಜಂಕ್ಷನ್ನಿಂದ ಇಂದಿರಾನಗರ 100 ಅಡಿ ರಸ್ತೆಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಪೂರ್ವ ಬೆಂಗಳೂರಿನ ಇಂದಿರಾನಗರ, ಹಲಸೂರು ಮತ್ತು ಜೀವನ್ ಭೀಮಾ ನಗರ ಟ್ರಾಫಿಕ್ ಪೊಲೀಸ್ ಮಿತಿಯಲ್ಲಿರುವ ಸಿಎಂಎಚ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ನಿರೀಕ್ಷಿಸಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Thu, 17 November 22