ಬೆಂಗಳೂರು, ನವೆಂಬರ್ 8: ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಬಿಬಿಎಂಪಿ ಮುಂದಾಗಿದೆ. ನಾಲಾ ರಸ್ತೆ ಜಂಕ್ಷನ್‌ನಿಂದ ಪುರಭವನ ಜಂಕ್ಷನ್‌ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯಲಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಭಾಗಶಃ ನಿಷೇಧ ಹೇರಲಾಗಿದೆ. ಶುಕ್ರವಾರ ಬೆಳಗ್ಗೆ ಕಾಮಗಾರಿ ಶುರುವಾಗಲಿದ್ದು, ಕಾಮಗಾರಿ ಮುಕ್ತಾಯಾಗುವವರೆಗೂ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇರಲಿದೆ.
ಕಾಮಗಾರಿ ನಡೆಯುವ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಂಚಾರ ಪೊಲೀಸರು, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ.
ವೈಟ್ ಟ್ಯಾಪಿಂಗ್ ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಹೊಸೂರು ರಸ್ತೆಯಿಂದ ಜೆಸಿ ರಸ್ತೆ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಬಲಕ್ಕೆ ತಿರುವು ಪಡೆದು ಕೆ.ಎಚ್. ರಸ್ತೆ, ಶಾಂತಿನಗರ, ರಿಚ್ಮಂಡ್ ಆರ್.ಆರ್. ರಸ್ತೆಯ ಮೂಲಕ ಹಡ್ಸನ್ ವೃತ್ತ ತಲುಪಬಹುದಾಗಿದೆ. ಸೌತ್ ಎಂಡ್ ವೃತ್ತದಿಂದ ಜೆ.ಸಿ. ರಸ್ತೆಯ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು, ಮಿನರ್ವ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಲಾಲ್‌ಬಾಗ್ ಪೋರ್ಟ್ ರಸ್ತೆ ಹಾಗೂ ಕೆ.ಆರ್. ರಸ್ತೆಯ ಮೂಲಕ ಕೆ.ಆರ್. ಮಾರುಕಟ್ಟೆ ತಲುಪಿ ಎಸ್.ಜೆ.ಪಿ. ರಸ್ತೆ, ಪುರಭವನ ಸಂಪರ್ಕ ಪಡೆಯಬಹುದು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆಸಿ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲದ ಸಂದರ್ಭದಲ್ಲಿ ಟ್ರಾಫಿಕ್ ಹೆಚ್ಚಿರುತ್ತದೆ. ಕೆಲಸ ಮುಗಿಸಿ ಮನೆಗೆ ಹೋಗಲು ಒಂದು ಗಂಟೆಗೂ ಅಧಿಕ ಸಮಯ ಬೇಕು. ಈಗ ಪರ್ಯಾಯ ಮಾರ್ಗದಲ್ಲಿ ಹೋಗಬೇಕಾಗಿದೆ. ಮತ್ತಷ್ಟು ಟ್ರಾಫಿಕ್ನಿಂದ ಮನೆಗೆ ಹೋಗಲು ಸಮಯ ಹೋಗುತ್ತದೆ. ವೈಟ್ ಟಾಪಿಂಗ್ ಕಾಮಗಾರಿ ಮಾಡುತ್ತಿರುವುದು ಒಳ್ಳೆಯದು. ಆದರೆ ಆದಷ್ಟು ಬೇಗನೆ ಕಾಮಗಾರಿ ಮಾಡುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿ ಕೊಡಿ ಅಂತ ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕಿಸ್ತಾನ ನಂಟು: ನೆರೆ ದೇಶದಲ್ಲಿ ತಲೆಮರೆಸಿಕೊಂಡ ಶಹೀದ್ ಫೈಸಲ್
ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿರುವುದು ಒಳ್ಳೆಯ ವಿಚಾರ. ಆದರೆ ದಿನ ನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಕಾಮಗಾರಿ ಮುಗಿಯುವ ವರೆಗೂ ಟ್ರಾಫಿಕ್ ಬಿಸಿ ತಟ್ಟಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ