ಬೆಂಗಳೂರು, ಜನವರಿ 14: ಮಕರ ಸಂಕ್ರಮಣದ (Makar Sankranti) ದಿನವಾದ ಇಂದು (ಜನವರಿ 14) ಬೆಂಗಳೂರಿನ ಬಸವನಗುಡಿಯ (Basavangudi) ಗವಿಪುರದಲ್ಲಿರುವ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ (Gavi Gangadhareshwar Temple) ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದೆ (Sun Light). ಸಂಜೆ 5 ಗಂಟೆ 14 ನಿಮಿಷಕ್ಕೆ ಶಿವಲಿಂಗಕ್ಕೆ ಸೂರ್ಯ ನಮಸ್ಕರಿಸಲಿದ್ದಾನೆ. 5 ಗಂಟೆ 17 ನಿಮಿಷದವರೆಗೆ ಶಿವಲಿಂಗದ ಮೇಲೆ ಸೂರ್ಯನ ರಶ್ಮಿ ಇರಲಿದೆ. ಈ ದಿನ ಸೂರ್ಯ ದೇವ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಪಥ ಬದಲಿಸುತ್ತಾನೆ.
ಈ ಹಿನ್ನೆಲೆಯಲ್ಲಿ ಸಂಜೆ ಹೊತ್ತಿಗೆ ನೇಸರನ ಕಿರಣ ಗವಿಗಂಗಾಧರೇಶ್ವರ ದೇಗುಲದ ಬಲಭಾಗದ ಕಿಂಡಿಯಿಂದ ದೇವಸ್ಥಾನದೊಳಗೆ ಪ್ರವೇಶಿಸಲಿದೆ. ಸೂರ್ಯನ ರಶ್ಮಿ ಮೊದಲು ಗವಿಗಂಗಾಧರೇಶ್ವರನ ಪಾದ ಸ್ಪರ್ಶಿಸಲಿದೆ. ಬಳಿಕ ನಂದಿ ವಿಗ್ರಹದ ಮೂಲಕ ಸೂರ್ಯನ ಕಿರಣ ಹಾದು ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಸುಕಿನ ಜಾವ 5:30ಕ್ಕೆ ಗವಿಗಂಗಾಧರೇಶ್ವರನಿಗೆ ವಿಶೇಷ ಪೂಜೆ ನೆರವೇರಿದೆ. ಶಂಖಪ್ರಭಶ್ಚನ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಾತ್ರ ಮಧ್ಯಾಹ್ನ 12.30ರ ತನಕ ದೇವಾಲಯ ಬಾಗಿಲು ತೆರೆದಿರುತ್ತದೆ. ಮಧ್ಯಾಹ್ನ ಎರಡು ಗಂಟೆಗಳ ಕಾಲ ದೇವಾಲಯದ ಬಾಗಲಿನ್ನು ಮುಚ್ಚಲಾಗುತ್ತದೆ.
ಇದನ್ನೂ ಓದಿ: ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ನಂತರ, ಸಂಜೆ 4 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಈ ವೇಳೆ ಸರಳವಾಗಿ ಪೂಜೆ ನೆರವೇರುತ್ತದೆ. ಬಳಿಕ ಸೂರ್ಯ ರಶ್ಮಿ ಸ್ಪರ್ಶಿಸುವ ಸಮಯದಲ್ಲಿ ಅಭಿಷೇಕ ಪ್ರಿಯನಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಸಂಜೆ 6 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಸೂರ್ಯ ರಶ್ಮಿ ಸ್ಪರ್ಶಿಸುವ ದೃಶ್ಯವನ್ನು ವೀಕ್ಷಿಸಲು ದೇವಾಲಯದ ಹೊರ ಭಾಗದಲ್ಲಿ ಎಲ್ಇಡಿ ಪರದೆಗಳನ್ನು ಹಾಕಲಾಗಿದೆ.
ಗವಿಗಂಗಾಧರೇಶ್ವರ ದೇವಾಲಯವನ್ನು ವೈದಿಕ ಕಾಲದಲ್ಲಿ ಗೌತಮ ಮಹರ್ಷಿ ಮತ್ತು ಭಾರದ್ವಾಜ ಮುನಿಗಳು ನಿರ್ಮಿಸಿದರು ಎಂದು ನಂಬಲಾಗಿದೆ. ನಂತರ, ಇದನ್ನು ಸಾ.ಶ 16ನೇ ಶತಮಾನದಲ್ಲಿ ಬೆಂಗಳೂರಿನ ಸ್ಥಾಪಕರಾದ ಕೆಂಪೇಗೌಡರು ನವೀಕರಿಸಿದರು.
ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಗವಿ ಗಂಗಾಧರೇಶ್ವರ ದೇವಾಲಯವನ್ನು ರಾಮರಾಯನಿಂದ ಐದು ವರ್ಷಗಳ ಜೈಲು ಶಿಕ್ಷೆಯಿಂದ ಬಿಡುಗಡೆಯಾದ ನಂತರ, ಕೆಂಪೇಗೌಡರು ನಿರ್ಮಿಸಿದರು. ಗವಿ ದೇವಾಲಯವು ವಾಸ್ತುಶಿಲ್ಪದ ಮೂಲಕ ಭಕ್ತರನ್ನು ಆಕರ್ಷಿಸುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 am, Tue, 14 January 25