AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಭೆಯಲ್ಲಿ ಸಿದ್ದರಾಮಯ್ಯ ತ್ಯಾಗದ ಮಾತು: ಹೊಸ ಚರ್ಚೆ ಹುಟ್ಟುಹಾಕಿದ ಸಿಎಂ

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ನಡೆಯುತ್ತಿರುವ ಪಟ್ಟದ ಆಟಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ.. ಸಿಎಂ ಪರ ಒಂದಿಷ್ಟು ಶಾಸಕರು, ಸಚಿವರು ಅತ್ತ ಡಿಸಿಎಂ ಡಿಕೆ ಶಿವಕುಮಾರ್ ಪರ ಒಂದಿಷ್ಟು ಶಾಸಕರು ಬ್ಯಾಟ್ ಬೀಸುತ್ತಿರುವಾಗಲೇ, ಡಿನ್ನರ್ ದಂಗಲ್ ನಡೆಯುತ್ತಿರುವಾಗಲೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಲ್ಲಿ ತ್ಯಾಗದ ಮಾತುಗಳು ಬಂದಿವೆ. ಸಿದ್ದರಾಮಯ್ಯ ತ್ಯಾಗದ ಮಾತಿನ ಮರ್ಮ ಏನು ಎನ್ನುವುದು ಇಲ್ಲಿದೆ ನೋಡಿ.

ಸಭೆಯಲ್ಲಿ ಸಿದ್ದರಾಮಯ್ಯ ತ್ಯಾಗದ ಮಾತು: ಹೊಸ ಚರ್ಚೆ ಹುಟ್ಟುಹಾಕಿದ ಸಿಎಂ
ಕಾಂಗ್ರೆಸ್​ ಸಭೆ
ರಮೇಶ್ ಬಿ. ಜವಳಗೇರಾ
|

Updated on: Jan 13, 2025 | 10:10 PM

Share

ಬೆಂಗಳೂರು, (ಜನವರಿ 13): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿದೇಶ ಪ್ರವಾದಲ್ಲಿರುವಾಗ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ನಡೆಸಿದ ಡಿನ್ನರ್ ಮೀಟಿಂಗ್ ಕಾಂಗ್ರೆಸ್​​ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಡಿನ್ನರ್​​ ಮೀಟಿಂಗ್ ಬಳಿಕ ರಾಜ್ಯ ಕಾಂಗ್ರೆಸ್​​ನಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಹುದ್ದೆ ಸಂಬಂಧ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಸಿಎಂ ಕುರ್ಚಿ ಅದಲು ಬದಲು ಸುತ್ತ ಕಳೆದೊಂದು ವಾರದಿಂದ ದೊಡ್ಡ ಚರ್ಚೆಯಾಗುತ್ತಿದೆ. ಇದರ ಮಧ್ಯ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ (Randeep Surjewala) ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತ್ಯಾಗದ ಮಾತನ್ನು ಆಡಿದ್ದಾರೆ. ತ್ಯಾಗದ ಮಾತನಾಡುವ ಮೂಲಕ ಒಂದು ರೀತಿಯಲ್ಲಿ‌ ಎಲ್ಲರನ್ನೂ ಸಿಎಂ ಗೊಂದಲದಲ್ಲಿ ಇಟ್ಟಿದ್ದಾರೆ.

ಇತ್ತ ಸಿದ್ದರಾಮಯ್ಯ ಪರ ಒಂದಿಷ್ಟು ಶಾಸಕರು, ಸಚಿವರು ಬ್ಯಾಟಿಂಗ್ ಮಾಡುತ್ತಿದ್ದೆ. ಅತ್ತ ಡಿಕೆ ಶಿವಕುಮಾರ್ ಸಿಎಂ ಎಂದು ಒಂದಿಷ್ಟು ಶಾಸಕರು ಘೋಷಣೆ ಮೊಳಗಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಇಂದು ರಾಜ್ಯಕ್ಕೆ ಉಸ್ತುವಾರಿ ರಣದೀಪ್ ಸುರ್ಜೆವಾಲ ಎಂಟ್ರಿಯಾಗಿದೆ. ಅತ್ತ ಸಿಎಂ ಮತ್ತು ಡಿಸಿಎಂ ಸಚಿವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ವರದಿ ಸಲ್ಲಿಸಿದ್ದು, ಸಂಪುಟ ಪುನಾರಚನೆ ಮುನ್ನೆಲೆಗೆ ಬಂದಿದೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆಗಳು ಎದ್ದಿವೆ. ಹೀಗೆ ಕಾಂಗ್ರೆಸ್ ಪಾಳೆಯದಲ್ಲಿ ಸರಣಿ ಸಭೆ, ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿರುವಾಗಲೇ ಸಿಎಂ ಸಿದ್ದರಾಮಯ್ಯ ಆಡಿದ ಮಾತು ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದುವೆ ತ್ಯಾಗದ ಮಾತು.

ಇದನ್ನೂ ಓದಿ: ಪಂಚ ಪ್ರಶ್ನೆ.. 60 ದಿನಗಳ ಟಾರ್ಗೆಟ್.. ಶಿಸ್ತಿನ ಪಾಠ: ಕಾಂಗ್ರೆಸ್ ಸಭೆಯ ಇನ್​ಸೈಡ್​ ಡಿಟೇಲ್ಸ್

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಇಂದು (ಜನವರಿ 13) ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆ ನಡೆಸಲಾಯ್ತು. ಇದೇ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾಡಿದ ತ್ಯಾಗವನ್ನ ಸ್ಮರಿಸಿದ್ದಾರೆ. ನಾವು ಕೂಡಾ ಅದೇ ತ್ಯಾಗದ ದಾರಿಯಲ್ಲಿ ನಡೆಯೋ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದಿಂದ್ಲೇ ಪರಿವರ್ತನೆ ಎನ್ನುವ ಮಾತುಗಳನ್ನ ಆಡಿದ್ದಾರೆ.

ನಮ್ಮಲ್ಲೂ ಕೂಡಾ ಈಗ ಸೋನಿಯಾ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ತ್ಯಾಗ ಮಾಡಿದ್ದಾರೆ, ನಾವು ಕೂಡಾ ಅದೇ ದಾರಿಯಲ್ಲಿ ನಡೆಯುವಂಥ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯಾಕಂದ್ರೆ ಕಾಂಗ್ರೆಸ್ ಪಕ್ಷ ಮಾತ್ರ ಸಮಾಜದಲ್ಲಿ ಪರಿವರ್ತನೆಯನ್ನ ಬಯಸತಕ್ಕದ್ದಂತು. ಬಿಜೆಪಿಯವರು ಯಥಾ ಸ್ಥಿತಿಯನ್ನ ಬಯಸತಕ್ಕಂತವರು. ಜೆಡಿಎಸ್​ನವರಿಗೆ ಯಾವುದೇ ಸಿದ್ಧಾಂತ ಇಲ್ಲ ಎಂದಿದ್ದಾರೆ.

ಅಗತ್ಯ ಸಂದರ್ಭದಲ್ಲಿ ತ್ಯಾಗಕ್ಕೆ ಸಿದ್ದ ಎಂಬ ಸಂದೇಶದ ಮೂಲಕ ವಿರೋಧಿ ಬಣಕ್ಕೂ ಸಂದೇಶವನ್ನು ರವಾನೆ ಮಾಡಿದ್ದಾರೆ. ತ್ಯಾಗದ ವಿಚಾರದಲ್ಲಿ ಮಾರ್ಮಿಕ ಮಾತನಾಡಿ ಅವರವರ ಲೆಕ್ಕಾಚಾರದ ಪ್ರಕಾರ ಅರ್ಥೈಸಿಕೊಳ್ಳುವಂತೆ ಮಾಡಿ ಸಿದ್ದರಾಮಯ್ಯ ಈಗ ಹೊಸ ಚರ್ಚೆ ಹುಟ್ಟುಹಾಕಿದ್ದು, ಕಾಂಗ್ರೆಸ್​ನಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇನ್ನು ಸಿದ್ದರಾಮಯ್ಯ ಅವರಿಗೂ ಮುನ್ನ, ಇದೇ ಸರ್ವ ಸದಸ್ಯರ ಸಭೆಯಲ್ಲೇ ಮಾತನಾಡಿರುವ ಡಿಸಿಎಂ ಡಿಕೆ ಪಕ್ಷವನ್ನ ಅಧಿಕಾರಕ್ಕೆ ತರೋದು ಗೊತ್ತಿದೆ, ನಾನು ಇರುತ್ತೇನೋ ಇಲ್ವೋ ಮುಖ್ಯವಲ್ಲ. ನಮ್ಮ ಪಕ್ಷ ಮುಂದೆಯೂ ಅಧಿಕಾರಕ್ಕೆ ಬಂದೇ ಬರಲಿದೆ. ನೀವು ನಮ್ಮ ಜೊತೆ ನಿಲ್ಲಿ.. ಪಕ್ಷವನ್ನ ಅಧಿಕಾರಕ್ಕೆ ತರೋದು ಗೊತ್ತಿದೆ. ನಾನು ಇರುತ್ತೇನೋ, ಇಲ್ವೋ ಮುಖ್ಯವಲ್ಲ, ನಾನು ಕಾಂಗ್ರೆಸ್ಸಿಗ. ಹೀಗೆಂದು ಹೇಳೋ ಮೂಲಕ ಡಿಸಿಎಂ ಡಿಕೆ ಅಬ್ಬರಿಸಿದ್ದಾರೆ. ಸದ್ಯದ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ನೋಡಿದ್ರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಆಡಿರುವ ಮಾತು ತುಂಬಾನೇ ಕುತೂಹಲ ಕೆರಳಿಸಿವೆ ಮತ್ತು ಪ್ರಾಮುಖ್ಯತೆ ಪಡೆದುಕೊಂಡಿವೆ.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ