ನ್ಯೂ ಇಯರ್ಗೆ ಸಜ್ಜಾಯ್ತು ಬೆಂಗಳೂರು: ಎಂಜಿ ರಸ್ತೆಯಲ್ಲಿ ಖಾಕಿ ಭದ್ರತೆ, ಪೊಲೀಸ್ ಆಯುಕ್ತ ಹೇಳಿದ್ದಿಷ್ಟು
New Year 2024: ಇನ್ನೊಂದೇ ದಿನ ಬಾಕಿ. ನಾಳೆ ಇಷ್ಟೊತ್ತಿಗೆಲ್ಲ ಇಡೀ ನಗರಕ್ಕೆ ನಗರವೇ ಹೊಸ ವರ್ಷದ ಸಂಭ್ರಮದಲ್ಲಿ ತೇಲಾಡ್ತಿರುತ್ತೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ, ಬಾರ್, ರೆಸ್ಟೋರೆಂಟ್ಗಳೂ ಪಾರ್ಟಿ ಗಮ್ಮತ್ತು ಕಿಕ್ಕೇರಿಸಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ನೋಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 30: ನ್ಯೂ ಇಯರ್ (New Year) ಗೆ ಕೌಂಟ್ಡೌನ್ ಶುರುವಾಗ್ತಿದ್ದಂತೆ ಸಿಟಿ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಜಧಾನಿ ಮಂದಿ ಸೆಲೆಬ್ರೇಷನ್ಗೆ ಸಜ್ಜಾಗಿದ್ದು, ಇಡೀ ನಗರಕ್ಕೆ ನಗರವೇ ಜಗಮಗ ಅಂತಿದೆ. ಸದ್ಯ ಈ ಬಗ್ಗೆ ಮಾಧ್ಯದವರೊಂದಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿದ್ದು, ಎಂ.ಜಿ ರೋಡ್, ಬ್ರಿಗೆಡ್ ರೋಡ್, ಕೋರಮಂಗಲ ಬಳಿ ಸೆಲೆಬ್ರೇಷನ್ಗೆ ಬರುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ನೋಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬ್ರಿಗೆಡ್ ರಸ್ತೆ ಬಳಿ 300ಕ್ಕೂ ಹೆಚ್ಚು ತಾತ್ಕಾಲಿಕ ಸಿಸಿಟವಿ ಅಳವಡಿಕೆ ಮಾಡಲಾಗಿದೆ. ಮೊಬೈಲ್ ಕಮಾಂಡ್ ಸೆಂಟರ್ ಇರಲಿದೆ. ತಾತ್ಕಾಲಿಕ ಕಂಟ್ರೋಲ್ ರೂಂ ಬಳಸಲಾಗುತ್ತಿದೆ. ಹತ್ತು ಡ್ರೋಣ್ ಕ್ಯಾಮರಾ ಬಳಸಲಾಗುತ್ತೆ. ಅಗ್ನಿಶಾಮಕ, ಆರೋಗ್ಯ ಇಲಾಖೆ, ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆ ಅಧಿಕಾರಿಗಳ ಜೊತೆ ಕೋ ಆರ್ಡಿನೇಷನ್ ಮಾಡಲಾಗಿತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳು ಹೀಗಿವೆ
ಮಹಿಳೆಯರ ಸೇಫ್ಟಿಯಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಫ್ಯಾಮಿಲಿಯವರಿಗೆ ಅಂತಾನೇ ಸ್ಥಳ ನಿಗದಿಪಡಿಸಲಾಗಿದೆ. ಓಲಾ, ಉಬರ್ನಲ್ಲಿ ಬರುವವರಿಗೆ ಕೂಡ ಒಂದಷ್ಟು ಸೂಚನೆ ನೀಡಲಾಗಿದೆ. ಟ್ರಾಫಿಕ್ ಉಂಟಾಗದಂತೆ ಸಂಚಾರ ವಿಭಾಗದಿಂದ ನೋಡಿಕೊಳ್ಳಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಿಗಾವಹಿಸಲಾಗಿದೆ. ಬ್ಯಾರಿಕೇಡ್ ಹಾಕಿ ವ್ಹೀಲಿಂಗ್, ರ್ಯಾಷ್ ಡ್ರೈವ್ ಮಾಡುವವರ ಮೇಲೂ ಕಣ್ಣಿಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಮನವಿ: ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್
ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಪ್ರತಿಕ್ರಿಯೆ ನೀಡಿದ್ದು, ಮದ್ಯಪಾನ ಮಾಡಿ ಯಾರೂ ವಾಹನ ಚಲಾಯಿಸಬಾರದು ಅಂತಾ ಮನವಿ ಮಾಡುತ್ತೇನೆ. ನಾಳೆ ರಾತ್ರಿ ಕೆಲ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗಿ ಇರುತ್ತೆ. ಆ ಸ್ಥಳಗಳನ್ನ ಗುರುತಿಸಲಾಗಿದೆ. ಎಂ.ಜಿ ರೋಡ್, ಬ್ರಿಗೆಡ್, ಕೋರಮಂಗಲ, ಮಹದೇವಪುರ ಗುರುತಿಸಲಾಗಿದೆ. ಸಾಕಷ್ಟು ಕಡೆ ಟ್ರಾಫಿಕ್ ಡೈವರ್ಷನ್ ಇರುತ್ತೆ. ಏರ್ಪೋರ್ಟ್ ಫ್ಲೈ ಓವರ್ ಹೊರತುಪಡಿಸಿ ಎಲ್ಲಾ ಫ್ಲೈ ಓವರ್ ಬಂದ್ ಇರುತ್ತವೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಡ್ರಿಂಕ್ ಆ್ಯಂಡ್ ಡ್ರೈವ್ ಪರೀಕ್ಷೆ: 8 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ
ಜನಸಂದಣಿ ಇರುವಂತಹ ಸ್ಥಳಗಲ್ಲಿ ನೋ ಪಾರ್ಕಿಂಗ್ನಲ್ಲಿ ಪಾರ್ಕ್ ಮಾಡಿದರೆ ಟೋಯಿಂಗ್ ಮಾಡಲಾಗುತ್ತೆ. ನೋ ಪಾರ್ಕಿಂಗ್ ಕೇಸ್ ಹಾಕಲಾಗುತ್ತೆ, ಟೋಯಿಂಗ್ ಚಾರ್ಜಸ್ ನಾವೇ ಭರಿಸುತ್ತೇವೆ. ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಪಾವತಿಸಬೇಕು ಎಂದಿದ್ದಾರೆ. ಎಂ.ಜಿ ರೋಡ್, ಬ್ರಿಗೆಡ್ ರಸ್ತೆಗಳಲ್ಲಿ ವಾಹನ ಬಿಡುವುದಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಟೆಸ್ಟ್ ಮಾಡಲಾಗುತ್ತೆ. ವ್ಹೀಲಿಂಗ್ ಮಾಡುವವರ ರಕ್ತಪರೀಕ್ಷೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.
ಅಗ್ನಿಶಾಮಕ ಇಲಾಖೆ ಅಲರ್ಟ್
ಅಗ್ನಿಶಾಮಕ ಇಲಾಖೆ ನಿರ್ದೇಶಕ ಶಿವಶಂಕರ್ ಪ್ರತಿಕ್ರಿಯಿಸಿದ್ದು, ನಮ್ಮ ಡಿಜಿ ಕಮಲ್ ಪಂಥ್ ಸರ್ ನಮಗೆ ಸೂಚನೆ ನೀಡಿದ್ದಾರೆ. ನಾಳೆ 20 ಕಡೆ ನಮ್ಮ ಸಿಬ್ಬಂದಿ ಅಲರ್ಟ್ ಇರುತ್ತಾರೆ. ಎಂ.ಜಿ ರೋಡ್, ಇಂದಿರಾನಗರ, ಲುಲು ಮಾಲ್, ಏಷ್ಯಾ ಮಾಲ್ ಸೇರಿದಂತೆ 20ಕಡೆ ನಮ್ಮ ಸಿಬ್ಬಂದಿಗಳು ಇರುತ್ತಾರೆ. ಅಗ್ನಿ, ವರುಣಾ ಸೇರಿದಂತೆ ನಮ್ಮ ಸಿಬ್ಬಂದಿ ಅಲರ್ಟ್ ಇರುತ್ತೆ. ಬೆಂಗಳೂರು ನಗರದಾದ್ಯಂತ ಎಲ್ಲಾ ಕಡೆ ಅಗ್ನಿಶಾಮಕ ಮತ್ತು ಎಸ್ಡಿಆರ್ಎಫ್ ತಂಡ ಗ್ರೌಂಡ್ನಲ್ಲಿ ಇರುತ್ತೆ. ಬೆಂಗಳೂರು ಅಷ್ಟೇ ಅಲ್ಲ ಮೈಸೂರು, ದಾವಣಗೆರೆ, ಬೆಳಗಾವಿ, ಮಂಗಳೂರಿನಲ್ಲೂ ನಮ್ಮ ಇಲಾಖೆ ಅಲರ್ಟ್ ಇರುತ್ತೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:46 pm, Sat, 30 December 23