
ಬೆಂಗಳೂರು, ಮೇ 18: ನಿನ್ನೆ ನಗರದ ಕೋರಮಂಗಲ (Koramangala) ಜಿ.ಎಸ್.ಸೂಟ್ ಹೋಟೆಲ್ನಲ್ಲಿ (Hotel Gs Suites) ಕನ್ನಡಿಗರನ್ನ ನಿಂದಿಸುವ ಡಿಸ್ಪ್ಲೇ ಬೋರ್ಡ್ ಹಾಕಿ ಅವಮಾನಿಸಿರುವಂತಹ ಘಟನೆ ನಡೆದಿತ್ತು. ಇದು ಕನ್ನಡಿಗರನ್ನ ಮತ್ತೆ ಕೆರಳಿಸುವಂತೆ ಮಾಡಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮ್ಯಾನೇಜರ್ ಸರ್ಫಜ್ ಎಂಬಾತನನ್ನು ಬಂಧಿಸಲಾಗಿದ್ದು, ಕನ್ನಡಿಗರಿಗೆ ಅಪಮಾನ ಮಾಡಿದ್ದ ಜಿ.ಎಸ್.ಸೂಟ್ ಹೋಟೆಲ್ ಸೀಜ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಹೋಟೆಲ್ ಮಾಲೀಕ ಜಮ್ಸದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ನಮ್ಮ ನೆಲದ ಅನ್ನ ತಿಂದು ನಮ್ಮನ್ನೇ ಅವಮಾನಿಸುತ್ತಿದ್ದಾರೆ. ಪದೆ-ಪದೇ ಕನ್ನಡಿಗರನ್ನ ಕೆರಳಿಸುತ್ತಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದಲ್ಲಿ ಜಿ.ಎಸ್.ಸೂಟ್ ಹೋಟೆಲ್ ಇದೆ. ಈ ಹೋಟೆಲ್‌ನ ಹೊರಭಾಗದ ಡಿಸ್ಪ್ಲೇ ಬೋರ್ಡ್‌ನಲ್ಲಿ ನಿನ್ನೆ ರಾತ್ರಿ ಅವಹೇಳನಕಾರಿ ಬರಹ ಪ್ರದರ್ಶಿಸಿದ್ದರು. ಅದನ್ನ ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಬಳಿಕ ವಿಡಿಯೋ ನೋಡ್ತಿದ್ದಂತೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ಕನ್ನಡಿಗರಿಗೆ ಅವಮಾನ, ಕೋರಮಂಗಲದ ಹೋಟೆಲೊಂದರ ವಿರುದ್ಧ ದೂರು ದಾಖಲು
ಈ ವೇಳೆ ತಕ್ಷಣ ಅಲರ್ಟ್ ಆದ ಮಡಿವಾಳ ಪೊಲೀಸರು ಹೋಟೆಲ್ಗೆ ಬಂದು ಪರಿಶೀಲನೆ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಅಬ್ದುಲ್ ಸಮಾದ್ ಹಾಗೂ ಮ್ಯಾನೇಜರ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಜೊತೆಗೆ ಡಿಸ್ಪ್ಲೇ ಬೋರ್ಡ್ ವಶಕ್ಕೆ ಪಡೆದು, ಹೋಟೆಲ್ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಕಳೆದ ಮೂರು ವರ್ಷದಿಂದ ಕೋರಮಂಗಲದ ಓರ್ವ ವ್ಯಕ್ತಿ ಈ ಡಿಸ್ಪ್ಲೇ ಬೋರ್ಡ್ ನಿರ್ವಹಣೆ ಮಾಡ್ತಿದ್ದಾರಂತೆ. ಡಿಸ್ಪ್ಲೇ ಕಂಟ್ರೋಲರ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ. ಆದರೆ ಪೊಲೀಸರ ತನಿಖೆ ನಂತರವೇ ಅಸಲಿ ಸತ್ಯ ಹೊರಬರಬೇಕಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಜೋರು, ಬೆಂಗಳೂರಿಗೆ ಯೆಲ್ಲೋ ಅಲರ್ಟ್
ಒಟ್ಟಿನಲ್ಲಿ ಹೊಟ್ಟೆ ಪಾಡಿಗಾಗಿ ಕರ್ನಾಟಕಕ್ಕೆ ವಲಸೆ ಬಂದಿರುವ ಇಂತಹ ಜನರ ಸೊಕ್ಕು ಇಳಿಯಬೇಕಿದೆ. ಕನ್ನಡಿಗರಿ ಅವಮಾನ ಮಾಡಿದ ಕಿಡಿಗೇಡಿಗಳಿಗೆ ಕನ್ನಡದ ಪಾಠ ಮಾಡಬೇಕಿದೆ. ಜೊತೆಗೆ ಕನ್ನಡಿಗರ ಸ್ವಾಭಿಮಾನದ ಕಿಚ್ಚಿನ ಬಿಸಿ ತಾಕಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.