ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಜಿರಳೆ ಕಾಟ: ಮಕ್ಕಳು, ಬಾಣಂತಿಯರು ಪರದಾಟ

ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಂಡುಬಂದಿದೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಎಡವಟ್ಟಿನಿಂದ ಮಕ್ಕಳಿಗೆ, ಬಾಣಂತಿಯರಿಗೆ ಜಿರಳೆ ಕಾಟ ಶುರುವಾಗಿದೆ. ಎರಡು ದಿನದ ಹಸುಗೂಸಿಗೆ ದೇಹ ಪೂರ್ತಿ ಜಿರಳೆಗಳು ಕಚ್ಚಿವೆ. ಹಸುಗೂಸಿಗೆ ಜಿರಳೆ ಕಚ್ಚಿಲ್ಲ, ಬಟ್ಟೆಯಿಂದ ರ‍್ಯಾಷಸ್ ಆಗಿದೆ ಎಂದು ಆಸ್ಪತ್ರೆ ಅಧೀಕ್ಷಕಿ ಸವಿತಾ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಜಿರಳೆ ಕಾಟ: ಮಕ್ಕಳು, ಬಾಣಂತಿಯರು ಪರದಾಟ
ಜಿರಳೆ ಕಾಟದಿಂದ ಮಗುವಿಗೆ ರ‍್ಯಾಷಸ್ ಉಂಟಾಗಿರುವುದು.
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on:Dec 02, 2023 | 4:34 PM

ಬೆಂಗಳೂರು, ಡಿಸೆಂಬರ್​​​ 02: ನಗರದ ವಾಣಿವಿಲಾಸ ಸರ್ಕಾರಿ ಆಸ್ಪತ್ರೆ (Vanivilas Government Hospital) ಯಲ್ಲಿ ಅವ್ಯವಸ್ಥೆ ಎದುರಾಗಿದ್ದು, ಎರಡು ದಿನದ ಹಸುಗೂಸಿಗೆ ದೇಹ ಪೂರ್ತಿ ಜಿರಳೆಗಳು ಕಚ್ಚಿವೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಎಡವಟ್ಟಿನಿಂದ ಜಿರಳೆ ಕಾಟಕ್ಕೆ ಮಕ್ಕಳು, ಆಸ್ಪತ್ರೆಯಲ್ಲಿರುವ ಬಾಣಂತಿಯರು ಪರದಾಡಿದ್ದಾರೆ. 2 ದಿನದ ಹಿಂದೆ ಗಂಡು ಮಗುವಿಗೆ ಆಶಾರಾಣಿ ಜನ್ಮ ನೀಡಿದ್ದರು. ಬಾಣಂತಿ ವಾರ್ಡ್​​ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಸ್ವಚ್ಛತೆ ಮಾಡಿಲ್ಲ. ಹೆರಿಗೆ ವಾರ್ಡ್​ನಲ್ಲೂ ಸ್ವಚ್ಛತೆ ಇಲ್ಲದ್ದರಿಂದ ಜಿರಳೆ ಕಾಟ ಹೆಚ್ಚಿದೆ.

ಹಸುಗೂಸಿಗೆ ಜಿರಳೆ ಕಚ್ಚಿಲ್ಲ, ಬಟ್ಟೆಯಿಂದ ರ‍್ಯಾಷಸ್ ಆಗಿದೆ: ವಾಣಿವಿಲಾಸ ಆಸ್ಪತ್ರೆ ಅಧೀಕ್ಷಕಿ ಸವಿತಾ ಸ್ಪಷ್ಟನೆ 

ಈ ವಿಚಾರವಾಗಿ ವಾಣಿವಿಲಾಸ ಆಸ್ಪತ್ರೆ ಅಧೀಕ್ಷಕಿ ಸವಿತಾ ಮಾತನಾಡಿ, ಹಸುಗೂಸಿಗೆ ಜಿರಳೆ ಕಚ್ಚಿಲ್ಲ, ಬಟ್ಟೆಯಿಂದ ರ‍್ಯಾಷಸ್ ಆಗಿದೆ. ವಾಣಿವಿಲಾಸ ಆಸ್ಪತ್ರೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಪೋಷಕರು ಬಂದು ನಮ್ಮ ಬಳಿ ಕೂಡ ಹೇಳಿಲ್ಲ. ಕೂಡಲೇ ಮಕ್ಕಳ ತಜ್ಞರನ್ನು ಕರೆಸಿ ಮಾಹಿತಿ ಪಡೆದಿದ್ದೇವೆ. ಆದರೆ ಯಾಕೆ ಆ ರೀತಿ ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಾಯಚೂರು: ಅಡುಗೆ ಮಾಡದೆ ಹಾಸ್ಟೆಲ್ ಸಿಬ್ಬಂದಿ ನಾಪ್ಪತ್ತೆ, ಊಟ ರೆಡಿ ಮಾಡಿ ಬಡಿಸಿದ ಪೊಲೀಸ್ ಇನ್​ಸ್ಪೆಕ್ಟರ್

ಟಿವಿ9 ಸುದ್ದಿ ಪ್ರಸಾರದ ಬಳಿಕ ವಾಣಿ ವಿಲಾಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಸವಿತಾ, ಜಿರಳೆ ಕಚ್ಚಿರುವ ಆರೋಪ ಮಾಡಿರುವ ವಾರ್ಡ್​ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಲೋಪವಾಗಿದ್ದರೆ ಸಚಿವ ಶರಣಪ್ರಕಾಶ್ ಪಾಟೀಲ್​ ಕ್ರಮ ಕೈಗೊಳ್ತಾರೆ: ಸಚಿವ ದಿನೇಶ್ ಗುಂಡೂರಾವ್

ವಾಣಿವಿಲಾಸ ಆಸ್ಪತ್ರೆಯಲ್ಲಿ ಜಿರಳೆ ಕಾಟ ವಿಚಾರವಾಗಿ ಮಂಗಳೂರಿನಲ್ಲಿ ಟಿವಿ9ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಪ್ರತಿಕ್ರಿಯಿಸಿದ್ದು, ವಾಣಿ ವಿಲಾಸ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನಕ್ಕೆ ಬರುತ್ತೆ. ನಾನು ಸಹ ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳ ಜತೆ ಮಾತಾಡುತ್ತೇನೆ ಎಂದರು.

ಇದನ್ನೂ ಓದಿ: ಕಂದಾಯ ಇಲಾಖೆಯ ಯಡವಟ್ಟು: ಯುವಕನ ಅಂತ್ಯಸಂಸ್ಕಾರಕ್ಕೆ ಪರದಾಟ

ಆಸ್ಪತ್ರೆಯ ಬೆಡ್​ಗಳು ಕ್ಲೀನ್ ಆಗಿ ಇರಬೇಕು. ಲೋಪವಾಗಿದ್ದರೆ ಸಚಿವ ಶರಣಪ್ರಕಾಶ್ ಪಾಟೀಲ್​ ಕ್ರಮ ಕೈಗೊಳ್ಳುತ್ತಾರೆ. ಸಚಿವ ಶರಣಪ್ರಕಾಶ್ ಪಾಟೀಲ್ ಜೊತೆಗೂ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:33 pm, Sat, 2 December 23