ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು: ತಡವಾಗಿ ಎಚ್ಚೆತ್ತ ಬಿಬಿಎಂಪಿ, ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಕಸದ ಲಾರಿಗಳಿಂದ ಪದೇ‌ಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಾಹನಗಳ ಕ್ರಮಬದ್ಧ ತಪಾಸಣೆ ಮತ್ತು ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು: ತಡವಾಗಿ ಎಚ್ಚೆತ್ತ ಬಿಬಿಎಂಪಿ, ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಅಪಘಾತಕ್ಕೆ ಕಾರಣವಾದ ಬಿಬಿಎಂಪಿ ಕಸದ ಲಾರಿ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 19, 2022 | 9:43 AM

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕಸದ ಲಾರಿ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ನಗರದ ನಾಯಂಡಹಳ್ಳಿ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಸೇಂಟ್ ಮಾರ್ಕ್ಸ್​ ರಸ್ತೆಯಿಂದ ರಾಜರಾಜೇಶ್ವರಿ ನಗರಕ್ಕೆ ಹೋಗುತ್ತಿದ್ದ ಪದ್ಮಿನಿ ಮೃತರು. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಕೂಟರ್​ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕ ಲಾರಿಯನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಪರಾರಿಯಾದ. ಕಸದ ಲಾರಿಗಳಿಂದ ಪದೇ‌ಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಾಹನಗಳ ಕ್ರಮಬದ್ಧ ತಪಾಸಣೆ ಮತ್ತು ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಎಲ್ಲ ಕಾಂಪ್ಯಾಕ್ಟರ್, ಟಿಪ್ಪರ್​ಗಳು ಫಿಟ್​ನೆಸ್ ಸರ್ಟಿಫಿಕೆಟ್ ಹೊಂದಿರಬೇಕು. ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು ಎಂದು ಹೇಳಿದ್ದಾರೆ.

ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ಕಸದ ಲಾರಿಗಳ ಪ್ರಮಾಣ ಪತ್ರಗಳನ್ನು ಆಗಾಗ ಪರಿಶೀಲಿಸುತ್ತಿರುಬೇಕು. ಕಾರ್ಯಪಾಲಕ ಎಂಜಿನಿಯರ್ ಕಸದ ಲಾರಿಗಳ ರ್‍ಯಾಂಡಮ್ ಚೆಕ್ ಮಾಡಬೇಕು. ಚಾಲಕರ ವಾಹನ ಚಾಲನಾ ಸಾಮರ್ಥ್ಯವನ್ನು ನಿಗದಿತ ಮಾನದಂಡ ಬಳಸಿ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ತ್ಯಾಜ್ಯ ಸಂಗ್ರಹ ಮಾಡುವ ಬಹುತೇಕ ವಾಹನಗಳು ಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿವೆ. ಪಾಲಿಕೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ಒದಗಿಸಿರುವ ವಾಹನಗಳ ಬಗ್ಗೆ ಕಾರ್ಯಪಾಲಕ ಅಭಿಯಂತರರು (ಸಾರಿಗೆ) ಗುತ್ತಿಗೆದಾರರು ಕ್ರಮವಹಿಸಬೇಕು. ವಲಯವಾರು ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ಕಾಲಕಾಲಕ್ಕೆ ಈ ಎಲ್ಲಾ ಪ್ರಮಾಣಪತ್ರ ಪರಿಶೀಲಿಸುತ್ತಿರಬೇಕು. ಚಾಲಕರು ಶಿಸ್ತಿನಿಂದ ವಾಹನ ಚಾಲನೆ ಮಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್‌ಗಳಿಗೆ ಬಿಬಿಎಂಪಿ ನೊಟೀಸ್

ಇದನ್ನೂ ಓದಿ: ಬಿಬಿಎಂಪಿ ಮಾಡಿದ ತಪ್ಪಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳಿಗೆ ಹಾನಿ, ಬಿಬಿಎಂಪಿ ಕಾಮಗಾರಿಗಳಲ್ಲೂ ಪರ್ಸೆಂಟೇಜ್ ಪ್ರತಿಧ್ವನಿ