
ಬೆಂಗಳೂರು, (ಫೆಬ್ರವರಿ 24): ಮಹಾಶಿವರಾತ್ರಿ ಹಬ್ಬದ (Maha Shivaratri Festival) ಪ್ರಯುಕ್ತ ಫೆಬ್ರವರಿ 26ರಂದು ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ಮಾಂಸ ಮಾರಾಟ ಮಾಡದಂತೆ ಬಿಬಿಎಂಪಿ ಆದೇಶ ಹೊರಡಿಸಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಕಸಾಯಿಖಾನೆ ಮುಚ್ಚುವಂತೆ ಆದೇಶಿಸಿದ್ದು, ಒಂದು ವೇಳೆ ಆದೇಶ ಉಲ್ಲಂಘಿಸಿ ಪ್ರಾಣಿ ವಧೆ, ಮಾಂಸ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ-2025ರ ಪ್ರಯುಕ್ತ 23ನೇ ಜನವರಿಯಿಂದ 17ನೇ ಫೆಬ್ರವರಿ 2025ರವರೆಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು. ಯಲಹಂಕ ವಲಯದ ಏರ್‌ಪೋರ್ಸ್ ಸ್ಟೇಷನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಾಂಸ ಮಾರಾಟದ ಉದ್ದಿಮೆಗಳು ಮುಚ್ಚಬೇಕು ಹಾಗೂ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧ ಮಾಡಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಮಹಾಶಿವರಾತ್ರಿಯಂದು ಫೆ.26ರಂದು ಸಹ ಮತ್ತೊಮ್ಮೆ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಫೆಬ್ರವರಿ 26ರ ಬುಧವಾರ ಮಹಾಶಿವರಾತ್ರಿ ಹಬ್ಬ . ಈ ಹಬ್ಬ ಅತ್ಯಂತ ಶಕ್ತಿಯುತ ಮತ್ತು ಪವಿತ್ರ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಭಕ್ತರು ಶಿವನ ಪ್ರೀತಿ ಮತ್ತು ಭಕ್ತಿಯಲ್ಲಿ ಮುಳುಗುತ್ತಾರೆ. ದೈವಿಕ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ರಾತ್ರಿಯನ್ನು ಧ್ಯಾನ, ಜಪ, ನೃತ್ಯ ಇನ್ನಿತರ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಈ ದಿನ ಶಿವನ ಭಕ್ತರು ಬೆಳಗ್ಗೆಯಿಂದ ಸಂಜೆ ವರೆಗೂ ಉಪವಾಸ ಮಾಡುತ್ತಾರೆ.
ಶಿವನು ಲಿಂಗ ರೂಪವನ್ನು ಪಡೆದುಕೊಂಡ ದಿನವನ್ನೇ ಮಹಾ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಇದಕ್ಕೆ ಇನ್ನೊಂದು ಕಾರಣವೆಂದರೆ ಮಹಾ ಶಿವರಾತ್ರಿಯಂದು ರಾತ್ರಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಮಹಾ ಶಿವರಾತ್ರಿ ಹಬ್ಬದ ದಿನದಂದು ಪರಶಿವನ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಭಕ್ತರು ನಾನಾ ಕಾರ್ಯಗಳನ್ನು ಮಾಡುತ್ತಾರೆ. ಯಾವ ವ್ಯಕ್ತಿ ಶಿವನಿಗೆ ಪ್ರಿಯವಾಗುವಂತಹ ಕೆಲಸಗಳನ್ನು ಮಾಡುತ್ತಾನೋ ಅವನ ಜೀವನದಲ್ಲಿನ ಸಕಲ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
Published On - 4:40 pm, Mon, 24 February 25