ಗೃಹಜ್ಯೋತಿ ದುಡ್ಡು ಜನರಿಂದಲೇ ವಸೂಲಿ ಆರೋಪ: ಸ್ಪಷ್ಟನೆ ನೀಡಿದ ಬೆಸ್ಕಾಂ ಎಂಡಿ
ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸದ್ಯ ಟೆನ್ಶನ್ ಶುರುವಾಗಿದೆ. ಸರ್ಕಾರ ಯೋಜನೆಗೆ ಮುಂಗಡ ಸಬ್ಸಿಡಿ ಬಿಡುಗಡೆ ಮಾಡದಿದ್ದರೆ ಗ್ರಾಹಕರಿಂದಲೇ ವಸೂಲಿ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಸದ್ಯ ಹಣ ವಸೂಲಿ ಪರ್ಯಾಯ ಮಾರ್ಗಕ್ಕೆ ಸಾರ್ವಜನಿಕರು ಹಾಗೂ ವಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ವೇಳೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, ಫೆಬ್ರವರಿ 24: ಗೃಹಜ್ಯೋತಿ (Gruha Jyothi Scheme) ಹಣ ಸರ್ಕಾರ ಪಾವತಿಸದಿದ್ದರೆ ಗ್ರಾಹಕರಿಂದ ವಸೂಲಿ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ಕೂಡ ಮಾಡಿದ್ದಾರೆ. ಈ ಮಧ್ಯೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಹೇಳಿಕೆ ನೀಡಿದ್ದು, ಸರ್ಕಾರ ನಮಗೆ ಪ್ರತಿ ತಿಂಗಳೂ ಮುಂಗಡ ಹಣ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗ್ರಾಹಕರು ಬಿಲ್ ಪಾವತಿಸಬೇಕಾದ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೊಂದಲಗಳಿಗೆ ತೆರೆಯೆಳೆದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಗೃಹ ಜ್ಯೋತಿ ಯೋಜನೆಗೆ ಮುಂಗಡ ಅನುದಾನ ನಮಗೆ ನೀಡಲಾಗಿದೆ. ಈ ಯೋಜನೆ ಸಂಬಂಧ ನಮ್ಮಲ್ಲಿ ಮುಂಗಡ 50 ಕೋಟಿ ರೂ. ಇದೆ. ಸರ್ಕಾರ ಮುಂಗಡ ಹಣ ಕೊಡದೇ ಇದ್ದಲ್ಲಿ ಗ್ರಾಹಕರು ಕೊಡಬೇಕು. ಆದರೆ ಸರ್ಕಾರ ನಮಗೆ ಪ್ರತಿ ತಿಂಗಳೂ ಮುಂಗಡ ಹಣ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗ್ರಾಹಕರು ಬಿಲ್ ಪಾವತಿಸಬೇಕಾದ ಪ್ರಮೇಯ ಬರುವುದಿಲ್ಲ. ರಾಜ್ಯ ಸರ್ಕಾರ ಉಚಿತ ಯೋಜನೆಗಳ ಸಬ್ಸಿಡಿ ಹಣ ಕೊಡದೇ ಇದ್ದಲ್ಲಿ, ಕೆಇಆರ್‌ಸಿ ನಿಯಮಗಳ ಪ್ರಕಾರ ನಾವು ಹಣ ವಸೂಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೃಹಜ್ಯೋತಿ ದುಡ್ಡು ಸರ್ಕಾರ ಕೊಡದಿದ್ರೆ ಜನರಿಂದಲೇ ವಸೂಲಿ? ಎಸ್ಕಾಂಗಳ ಪ್ರಸ್ತಾವಕ್ಕೆ ಬಿಜೆಪಿ ಕಿಡಿ
ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸಲು ಪರದಾಡುವಂತಾಗಿದೆ. ಹೀಗಾಗಿ ಗೃಹಜ್ಯೋತಿ ಯೋಜನೆಯ ಹಣವನ್ನು ಎಸ್ಕಾಂಗಳಿಗೆ ನೀಡಲು ಸಾಧ್ಯವಾಗಿಲ್ಲ ಈ ನಿಟ್ಟಿನಲ್ಲಿ ಎಸ್ಕಾಂ ಗಳು ಸಾರ್ವಜನಿಕರಿಂದಲೇ ಹಣ ವಸೂಲಿ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿರುವುದಾಗಿ ವರದಿಯಾಗಿದೆ.
ಬಿವೈ ವಿಜಯೇಂದ್ರ ಕಿಡಿ
ಇನ್ನು ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಗೃಹ ಜ್ಯೋತಿ ಯೋಜನೆಗೆ ಸರ್ಕಾರ ಎಸ್ಕಾಂ ಗಳಿಗೆ ಹಣ ಪಾವತಿಸದ ಪರಿಣಾಮ ಯೋಜನೆ ಫಲಾನುಭವಿಗಳಿಂದಲೇ ವಸೂಲಿ ಮಾಡುವುದಕ್ಕಾಗಿ ಅಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ. ಆ ಮೂಲಕ ಗೃಹ ಜ್ಯೋತಿಗೆ ಇತಿಶ್ರೀ ಆಡುವ ಮುನ್ಸೂಚನೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ: ಸಚಿವ ಕೆ.ಜೆ.ಜಾರ್ಜ್
ಇಂಧನ ಸಚಿವ ಕೆ.ಜೆ.ಜಾರ್ಜ್ ಕೂಡ ಸ್ಪಷ್ಟನೆ ನೀಡಿದ್ದು, ಗೃಹಜ್ಯೋತಿ ಹಣ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಸುವುದು, ಗ್ರಾಹಕರಿಂದ ಹಣ ಪಡೆಯುವ ಯಾವುದೇ ಪ್ರಸ್ತಾಪ ಇಲ್ಲ. ರಾಜ್ಯ ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ. ಯೋಜನೆ ಘೋಷಣೆ ಸಂದರ್ಭದಲ್ಲೇ ಸರ್ಕಾರ ಹೇಳಿತ್ತು. 200 ಯೂನಿಟ್‌ವರೆಗೆ ಫ್ರೀ ಕರೆಂಟ್ ಘೋಷಿಸಲಾಗಿತ್ತು. ಸಬ್ಸಿಡಿ ಮೊತ್ತ ಸರ್ಕಾರ ಪಾವತಿಸಲಿದೆ ಎಂದು ಹೇಳಿದ್ವಿ. ಅದರಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಫೆಬ್ರವರಿ 2025ರವರೆಗಿನ ಸಹಾಯಧನ ಪಾವತಿಸಿದ್ದೇವೆ. ಮುಂಗಡವಾಗಿ ಎಲ್ಲಾ ಎಸ್ಕಾಂಗಳಿಗೂ ಪಾವತಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಆರ್ಒ ಪ್ಲಾಂಟ್ಗಳ ನಿರ್ವಹಣೆ BWSSB ಸುಪರ್ದಿಗೆ: ಡಿಕೆ ಶಿವಕುಮಾರ್ ಸೂಚನೆ
ಕೆಇಆರ್‌ಸಿ (ಸಹಾಯಧನ ಪಾವತಿ ವಿಧಾನ) ನಿಯಮ 2008ರಲ್ಲಿ ವಿದ್ಯುತ್ ಯೋಜನೆಗಳ ಸಹಾಯಧನವು ರಾಜ್ಯ ಸರ್ಕಾರದಿಂದ ಮುಂಗಡವಾಗಿ ಪಾವತಿಯಾಗದಿದ್ದರೆ, ಗ್ರಾಹಕರಿಂದ ಪಡೆಯಲು ಎಸ್ಕಾಂಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ಸಾಮಾನ್ಯ ನಿಯಮವನ್ನೇ ತಪ್ಪಾಗಿ ಗ್ರಹಿಸಲಾಗಿದೆ. ಗ್ರಾಹಕರಿಂದ ಹಣ ಪಡೆಯುವ ಪ್ರಶ್ನೆಯೇ ಉದ್ಭವಿಸಲ್ಲ. ಗೃಹಜ್ಯೋತಿ ಯೋಜನೆ ಮುಂದುವರಿಸಲು ಇಲಾಖೆ ಬದ್ಧ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂಕಿ ಅಂಶ ಬಿಡುಗಡೆ ಮಾಡಿದ ಬೆಸ್ಕಾಂ
ಸದ್ಯ ಸರ್ಕಾರ ನೀಡಿರುವ ಅನುದಾನ ಕುರಿತು ಬೆಸ್ಕಾಂನಿಂದ ಅಂಕಿ ಅಂಶ ರಿಲೀಸ್ ಮಾಡಲಾಗಿದೆ. 2023ರ ಆಗಸ್ಟ್‌ನಿಂದ 2025ರ ಫೆಬ್ರವರಿವರೆಗಿನ ಅನುದಾನ ಕುರಿತ ಮಾಹಿತಿ ನೀಡಲಾಗಿದೆ. ಸರ್ಕಾರಕ್ಕೆ ಸುಮಾರು 6,592 ಕೋಟಿ ರೂಪಾಯಿ ಹಣ ಕೇಳಿದ್ದ ಬೆಸ್ಕಾಂ, 2025ರ ಫೆಬ್ರವರಿವರೆಗೆ ಒಟ್ಟು 6,631 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸರ್ಕಾರ ಬೆಸ್ಕಾಂಗೆ ಹೆಚ್ಚುವರಿಯಾಗಿ 39 ಕೋಟಿ ರೂಪಾಯಿ ನೀಡಿದೆ.
ವರದಿ: ಲಕ್ಷ್ಮಿ ನರಸಿಂಹ ದೊಡ್ಡಗುಬ್ಬಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:10 pm, Mon, 24 February 25