ಬೆಂಗಳೂರು, ಫೆಬ್ರವರಿ 29: ಬೆಂಗಳೂರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಬಜೆಟ್ (BBMP Budget) ಗುರುವಾರ ಮಂಡನೆಯಾಗಿದ್ದು, ರಸ್ತೆ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕ್ಷೇತ್ರಕ್ಕೆ (Infrastructure) ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಜತೆಗೆ, ಅನುದಾನವನ್ನೂ ಮೀಸಲಿಡಲಾಗಿದೆ. ಬಿಬಿಎಂಪಿ ವಿಶೇಷ ಅಯುಕ್ತ ಶಿವಾನಂದ ಕಲ್ಕೆರಿ ಬೆಂಗಳೂರಿನ ಟೌನ್ ಹಾಲ್ನಲ್ಲಿ ಬಜೆಟ್ ಮಂಡನೆ ಮಾಡಿದ್ದು. ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ಪ್ರತ್ಯೇಕ ESCROW ಖಾತೆ ತೆರೆಯುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಸುಗಮ ಸಂಚಾರ ಶೀರ್ಷಿಕೆಯಡಿ ಬೆಂಗಳೂರು ನಗರ ಸುಗಮ ಸಂಚಾರ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ಮೊದಲು 2 ಸ್ಥಳದಲ್ಲಿ ಸುರಂಗಮಾರ್ಗ ನಿರ್ಮಾಣ ಮಾಡಲು 200 ಕೋಟಿ ರೂ. ಮೀಸಲು ಇಡಲಾಗುವುದು. ಕನಕಪುರ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆ, ವಿಮಾನ ನಿಲ್ದಾಣಕ್ಕೆ ಸಂಪರ್ಕ ನೀಡುವ ಹೆಣ್ಣೂರು-ಬಾಗಲೂರು ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಚಾಮರಾಜಪೇಟೆ, ಪಾದಾರಾಯನಪುರ ರಸ್ತೆ ಅಗಲೀಕರಣಕ್ಕೆ 130 ಕೋಟಿ ರೂ. ಮೀಸಲಿಡಲಾಗುವುದು. ಬಳ್ಳಾರಿ ರಸ್ತೆಯಿಂದ ಸಾದಹಳ್ಳಿ ಗೇಟ್ ವರೆಗೆ ರಸ್ತೆ ಅಗಲೀಕರಣ ಟಿಡಿಆರ್ ವಿತರಣೆ ಹಾಗೂ ಕೆಂಗೇರಿ ಉಪನಗರದಿಂದ ಮೈಸೂರು ರಸ್ತೆಗೆ ನೇರವಾಗಿ ಸಂಪರ್ಕ ಕಲ್ಪಿಸಲು ರೇಲ್ವೇ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಪರಿಶುದ್ಧ ಗಾಳಿ ಯೋಜನೆಯಡಿ 45 ಕಿಮೀ ಉದ್ದದ ಪಾದಚಾರಿ ಸ್ನೇಹಿ ನಡಿಗೆ ಪಥಗಳನ್ನು ಸ್ಥಾಪಿಸಲು 135 ಕೋಟಿ ರೂ. ಮೀಸಲಿಡಲಾಗುವುದು. ರಾಜಕಾಲುವೆ ಬಫರ್ ಝೋನ್ ನಲ್ಲಿ 300 ಕಿಮೀ ಉದ್ದದ ಜನ ಸ್ನೇಹಿ ಪಥ ನಿರ್ಮಿಸಲು 600 ಕೋಟಿ ರೂ. ಮೀಸಲಿಡಲಾಗುವುದು. ಲಘುವಾಹನ, ಸೈಕಲ್ ಪಥ, ನಡಿಗೆ ಮಾರ್ಗ ಯೋಜಿತ ಜನ ಸ್ನೇಹಿ ಪಥ ಇದಾಗಿರಲಿದೆ ಎಂದು ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ನೂರು ಕಡೆ SHE TOILET, ಪೌರಕಾರ್ಮಿಕ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂ, ಇನ್ನೂ ಏನೇನಿದೆ?
ಬೆಂಗಳೂರು ನಗರದಲ್ಲಿ 145 ಕಿಮೀ ರಸ್ತೆಗೆ ವೈಟ್ ಟಾಪಿಂಗ್ಗೆ 800 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸಂಪರ್ಕ ಮೇಲ್ಸೇತುವೆಗೆ 380 ಕೋಟಿ ರೂ. ಘೋಷಿಸಲಾಗಿದೆ. ಮೆಟ್ರೋ ಯೋಜನೆಯಲ್ಲಿ ಸಂಯುಕ್ತ ಮೆಟ್ರೋ-ರಸ್ತೆ ಮೇಲ್ಸೇತುವೆಗೆ 100ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.
ಇಷ್ಟೇ ಅಲ್ಲದೆ, ಬನಶಂಕರಿ ವೃತ್ತದಲ್ಲಿ ಸ್ಕೈವಾಕ್ ನಿರ್ಮಾಣ, ಬಿಎಂಟಿಸಿ, ಮೆಟ್ರೋಗೆ ಹೊಂದಿಕೊಂಡಂತೆ ಸ್ಕೈವಾಕ್ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಇದನ್ನೂ ಓದಿ: ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತಿಕರಣಕ್ಕೆ 200 ಕೋಟಿ
ಪಾಲಿಕೆ ಮೈದಾನಗಳ ತಳಭಾಗದಲ್ಲಿ ಅಂಡರ್ ಗ್ರೌಂಡ್ ಪಾರ್ಕಿಂಗ್ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಹಮ್ಮಿಕೊಳ್ಳಲಾಗುತ್ತದೆ. ಈ ಯೋಜನೆಗೆ 5 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ