ಬಿಬಿಎಂಪಿ ಬಜೆಟ್: ಬೆಂಗಳೂರಿನ ನೂರು ಕಡೆ SHE TOILET, ಪೌರಕಾರ್ಮಿಕ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂ, ಇನ್ನೂ ಏನೇನಿದೆ?
BBMP Budget 2024: ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ, ಮಹಿಳಾ ಸುರಕ್ಷತೆ ಹಾಗೂ ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. 2024-25ನೇ ಸಾಲಿನ ಬಿಬಿಎಂಪಿ ಆಯವ್ಯಯದಲ್ಲಿ ಏನೇನು ಘೋಷಣೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 29: ಬೆಂಗಳೂರಿನ ನೂರು ಕಡೆಗಳಲ್ಲಿ ಮಹಿಳೆಯರಿಗಾಗಿ ‘ಶಿ ಟಾಯ್ಲೆಟ್ (SHE TOILET)’ಗಳ ನಿರ್ಮಾಣ, ಪೌರಕಾರ್ಮಿಕರ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂ. ಅನುದಾನ ಸೇರಿದಂತೆ ಹಲವು ಹೊಸ ಯೋಜನೆಗಳನ್ನು 2024-25ನೇ ಸಾಲಿನ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ನಲ್ಲಿ (BBMP Budget) ಘೋಷಣೆ ಮಾಡಲಾಗಿದೆ. ಬಿಬಿಎಂಪಿ ವಿಶೇಷ ಅಯುಕ್ತ ಶಿವಾನಂದ ಕಲ್ಕೆರಿ ಬೆಂಗಳೂರಿನ ಟೌನ್ ಹಾಲ್ನಲ್ಲಿ ಬಜೆಟ್ ಮಂಡನೆ ಮಾಡಿದರು. ಪೌರಕಾರ್ಮಿಕರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿ ನೀಡಲು ಹಾಗೂ ಪ್ರಶಸ್ತಿ ಜೊತೆಗೆ 50 ಸಾವಿರ ರೂ. ಬಹುಮಾನ ನೀಡುವ ಬಗ್ಗೆಯೂ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ 11,307 ಪೌರ ಕಾರ್ಮಿಕರ ನೇರ ನೇಮಕಾತಿ ಮಾಡುವುದಾಗಿ ಬಜೆಟ್ನಲ್ಲಿ ಭರವಸೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮೂಡಿಸಲು ‘ಹಸಿರುರಕ್ಷಕ’ ಆ್ಯಪ್, ರಸ್ತೆ ಬದಿ, ಪಾರ್ಕ್, ಕೆರೆ ಅಂಗಳದಲ್ಲಿ 2 ಲಕ್ಷ ಸಸಿ ನೆಡಲು ನಿರ್ಧಿರಿಸಿರುವುದಾಗಿ ಘೋಷಣೆ ಮಾಡಲಾಗಿದೆ. ದಾಸರಹಳ್ಳಿ, ಯಲಹಂಕ ವಲಯದಲ್ಲಿ ಹೈಟೆಕ್ ಸಸ್ಯಕ್ಷೇತ್ರ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಹೈಟೆಕ್ ಸಸ್ಯಕ್ಷೇತ್ರ ಸ್ಥಾಪನೆಗೆ 14 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಬನ್ನೇರುಘಟ್ಟ ಉದ್ಯಾನ ವನಕ್ಕೆ 1 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಇದಲ್ಲದೆ, ಬೆಂಗಳೂರಿನಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಸ್ಥಾಪನೆ, ಮೊಬೈಲ್ ಕ್ಯಾಂಟೀನ್ ಸ್ಥಾಪಿಸಲು 70 ಕೋಟಿ ರೂ. ಮೀಸಲು ಇಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಬಿಬಿಎಂಪಿ ಬಜೆಟ್ನಲ್ಲಿ ಘೋಷಣೆಯಾದ ಇನ್ನಷ್ಟು ಅಂಶ
- ಬೆಂಗಳೂರು ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗೆ 800 ಕೋಟಿ ರೂ.
- ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸಂಪರ್ಕ ಮೇಲ್ಸೇತುವೆಗೆ 380 ಕೋಟಿ ರೂ.
- ಸಂಯುಕ್ತ ಮೆಟ್ರೋ, ರಸ್ತೆ ಮೇಲ್ಸೇತುವೆಗೆ 100 ಕೋಟಿ ರೂ. ಅನುದಾನ.
- ಘನತ್ಯಾಜ್ಯ ಸಂಗ್ರಹಣೆ, ವಿಂಗಡನೆ, ಭೂಭರ್ತಿ ಪ್ರದೇಶ ಅಭಿವೃದ್ಧಿಗೆ 1 ಸಾವಿರ ಕೋಟಿ ಮೀಸಲು.
- ಮೊದಲ ಹಂತದಲ್ಲಿ ಬೇಗೂರಿನ ರಮಣಶ್ರೀ ಲೇಔಟ್ನಲ್ಲಿ 200 ಮನೆಗಳಿಂದ ಹಸಿ-ಒಣ ತ್ಯಾಜ್ಯ ಸಂಗ್ರಹಿಸಿ ರೀ ಸೈಕ್ಲಿಂಗ್.
ಇದನ್ನೂ ಓದಿ: ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತಿಕರಣಕ್ಕೆ 200 ಕೋಟಿ
- ಅರಣ್ಯ ತೋಟಗಾರಿಕೆ ಹಾಗೂ ಕೆರೆಗಳ ವಿಭಾಗವನ್ನ ಅರಣ್ಯ, ಪರಿಸರ, ವೈಪರಿತ್ಯ ನಿರ್ವಹಣೆ ಎಂದು ಮರುನಾಮಕರಣ/ ರಸ್ತೆ ಬದಿ ನೆಟ್ಟಿರುವ ಮರಗಳಿಗೆ 224 ಶಾಲೆಗಳ 52,015 ವಿದ್ಯಾರ್ಥಿಗಳ ಟ್ಯಾಗ್.
- ರಸ್ತೆ ಬದಿ, ಪಾರ್ಕ್,ಕೆರೆ ಅಂಗಳದಲ್ಲಿ 2 ಲಕ್ಷ ಸಸಿ ನೆಡುವಿಕೆ
- ದಾಸರಹಳ್ಳಿ, ಯಲಹಂಕ ವಲಯದಲ್ಲಿ ಹೊಸ ಹೈಟೆಕ್ ಸಸ್ಯಕ್ಷೇತ್ರ ಸ್ಥಾಪನೆ, ಇದಕ್ಕಾಗಿ 14 ಕೋಟಿ ಅನುದಾನ ಮೀಸಲು.
- ಅಪಘಾತಕ್ಕೀಡಾದ ವನ್ಯಜೀವಿಗಳ ರಕ್ಷಣೆಗೆ ಬನ್ನೇರುಘಟ್ಟ ಉದ್ಯಾನ ವನಕ್ಕೆ 1 ಕೋಟಿ ರೂ. ಮೀಸಲು.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ 8 ವಿಭಾಗ
ಬಿಬಿಎಂಪಿ ಬಜೆಟ್ನಲ್ಲಿ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ 8 ವಿಭಾಗಗಳನ್ನು ಹೆಸರಿಸಲಾಗಿದೆ. ಅವುಗಳು ಹೀಗಿವೆ;
- ಸುಗಮ ಸಂಚಾರ
- ಸ್ವಚ್ಚ ಬೆಂಗಳೂರು
- ಹಸಿರು ಬೆಂಗಳೂರು
- ಆರೋಗ್ಯಕರ ಬೆಂಗಳೂರು
- ಶಿಕ್ಷಣ ಬೆಂಗಳೂರು
- ಟೆಕ್ ಬೆಂಗಳೂರು
- ವೈಬ್ರೆಂಟ್ ಬೆಂಗಳೂರು
- ನೀರಿನ ಭದ್ರತೆಯ ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Thu, 29 February 24