218 ಮನೆಗಳ ಮುಂದೆ ಕಸ ಸುರಿದ ಜಿಬಿಎ! ಒಂದೇ ದಿನ 2.80 ಲಕ್ಷ ರೂ. ದಂಡ ವಸೂಲಿ
ಎಷ್ಟೇ ದಂಡ ಹಾಕಿದರೂ, ಎಚ್ಚರಿಕೆ ನೀಡಿದರೂ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಬೆಂಗಳೂರಿನ ಜನ ನಿಲ್ಲಿಸುತ್ತಿಲ್ಲ. ಬೆಂಗಳೂರಿನ ಕಸದ ಸಮಸ್ಯೆ ದೇಶ-ವಿದೇಶ ಮಟ್ಟದಲ್ಲಿ ಸುದ್ದಿಯಾಗಿ ನಗರದ ಮನ ಹರಾಜಾಗುತ್ತಿದೆ. ಇದರಿಂದಾಗಿ ಎಚ್ಚೆತ್ತುಕೊಂಡಿರುವ ಜಿಪಿಎ ಅಧಿಕಾರಿಗಳು, ಹೊಸ ಕೆಲಸ ಆರಂಭಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ಅದನ್ನು ಮತ್ತೆ ಅವರ ಮನೆ ಮುಂದೆಯೇ ಸುರಿಯುವುದಲ್ಲದೆ, ದಂಡ ವಿಧಿಸಲು ಆರಂಭಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 31: ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮಾರ್ಷಲ್ಗಳು ಗುರುವಾರ ಭರ್ಜರಿ ಕಾರ್ಯಾಚರಣೆಯನ್ನೇ ನಡೆಸಿದ್ದಾರೆ. ಒಂದೇ ದಿನ 218 ಮನೆಗಳ ಮುಂದೆ ಕಸ ಸುರಿದಿದ್ದು, 2.80 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರಿನ ಗಾಂಧಿನಗರ ವಾರ್ಡ್ ನಂಬರ್ 94 ರಲ್ಲಿ ವಾಸವಾಗಿರುವ ಮನೆಯವರು ರಸ್ತೆ ಬದಿ ಕಸ ಎಸೆದು ಬಂದಿದ್ದರು. ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಪಾಲಿಕೆ ಮಾರ್ಷೆಲ್‌ಗಳು, ಗುರುವಾರ ಕಸವನ್ನು ಅವರ ಮನೆ ಮುಂದೆಯೇ ಸುರಿದಿದ್ದಾರೆ. ಹೀಗೆ ಇದೇ ಏರಿಯಾದಲ್ಲಿ ಹತ್ತಾರು ಮನೆಗಳ ಮುಂದೆ ಕಸ ಸುರಿದು, ಜತೆಗೆ ತಲಾ 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಮಲ್ಲೇಶ್ವರದ ದತ್ತಾತ್ರೇಯ ಟೆಂಪಲ್ ವಾರ್ಡ್‌ನಲ್ಲಿ ಗುಜರಿ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬ ಕೂಡಾ ರಸ್ತೆ ಬದಿ ಕಸ ಸುರಿದು ಬಂದಿದ್ದ. ಆತನಿಗೂ ಜಿಪಿಎ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.
ಹೊಸಕೆರೆಹಳ್ಳಿ, ಬನಶಂಕರಿ, ಮಹದೇವಪುರ ಸೇರಿದಂತೆ ಹಲವೆಡೆ ಕಸ ಎಸೆಯುವವರನ್ನು ಮಾರ್ಷಲ್‌ಗಳ ಮೂಲಕ ಪತ್ತೆಹಚ್ಚಿದ್ದ ಜಿಬಿಎ, ಎಲ್ಲೆಂದರಲ್ಲಿ ಕಸ ಎಸೆದ 218 ಜನರ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಿದೆ. ಅಲ್ಲದೇ ಕಸ ಎಸೆದವರ ಬಳಿ ತಲಾ ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.
ಆರಂಭದಲ್ಲಿ ಒಂದು ಸಾವಿರ ದಂಡ ವಿಧಿಸುತ್ತಿರುವ ಜಿಬಿಎ, ಮತ್ತೆ ಕಸ ಹಾಕಿದರೆ, ಮತ್ತೊಂದು ಶಾಕ್ ಕೊಡಲು ಮುಂದಾಗಿದೆ.
ರಸ್ತೆ ಬದಿ ಕಸ ಸುರಿದರೆ ಮುಂದೈತೆ ಮಾರಿಹಬ್ಬ!
- ಆರಂಭದಲ್ಲಿ ಕಸ ಸುರಿದವರಿಗೆ 1000ರೂ. ದಂಡ
- ಮನೆ ಮುಂದೆ ಕಸ ಸುರಿದು, ತಮಟೆ ಬಾರಿಸಿ ಜಾಗೃತಿ
- ಮತ್ತೆ ಅದೇ ಮನೆಯವರು ಕಸ ಸುರಿದರೆ ಬಿಗ್ ಶಾಕ್
- ಎರಡನೇ ಬಾರಿಗೆ ಬೀಳಲಿದೆ 5000 ರೂ. ದಂಡ
- ಮನೆಯೊಳಗೇ ಕಸ ಸುರಿಯಲಿದ್ದಾರೆ ಜಿಬಿಎ ಅಧಿಕಾರಿಗಳು
ಜಿಬಿಎ ಅಧಿಕಾರಿಗಳ ಈ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಸರಿಯಾಗಿ ಕಸ ಸಂಗ್ರಹಕ್ಕೆ ಬರುತ್ತಿಲ್ಲ. ಅವರು ಬಂದು ಸಂಗ್ರಹಿಸಿಕೊಂಡು ಹೋದರೆನಾವು ಕಸ ಎಸೆಯುವ ಸಮಸ್ಯೆ ಇರಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಅಪಘಾತವಾದ್ರೆ ಇನ್ಮುಂದ್ರೆ ಪೊಲೀಸರಿಗೆ ಕರೆ ಮಾಡೋದೇ ಬೇಡ: ಹೊಸ ಟೆಕ್ನಾಲಜಿ ಪರಿಚಯಿಸಿದ BTP
ಕಸ ಸುರಿದು ದಂಡ ವಿಧಿಸಿ ಜಾಗೃತಿ ಮೂಡಿಸಿದ ಅಧಿಕಾರಿಗಳು, ಬಳಿಕ ಅದೇ ಕಸವನ್ನು ಮತ್ತೆ ತುಂಬಿಕೊಂಡು ಹೋಗಿದ್ದಾರೆ. ಬೆಂಗಳೂರಿಗರು ಇನ್ನಾದರೂ ಹೀಗೆ ಬ್ಲಾಕ್ ಪಾಯಿಂಟ್‌ಗಳಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕಿದೆ. ಜತೆಗೆ ಪಾಲಿಕೆ ಕೂಡಾ ಕಸ ಸಂಗ್ರಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ.



