ಬೆಂಗಳೂರು: ಮನೆ ಅಂದ್ಮೇಲೆ ಅಲ್ಲಿ ಒಂದು ನಾಯಿ ಇರಲೇಬೇಕು, ಮನೆ ರಕ್ಷಣೆ ಮಾಡಲು ಅಥವಾ ಶ್ವಾನದ ಮೇಲಿನ ಪ್ರೀತಿಗೋ ಗೊತ್ತಿಲ್ಲ, ಬೆಂಗಳೂರಿನ ಯಾವ ಮನೆಗೆ ಹೋದ್ರು ಡಾಗ್, ಪಪೀಗಳು ಇದ್ದೆ ಇರುತ್ತವೆ. ಈಗ ಹೀಗೆ ಶ್ವಾನಗಳನ್ನು ಸಾಕಿರುವ ಮಾಲೀಕರು ಮತ್ತು ನಾಯಿ ಸಾಕೋಕ್ಕೆ ಪ್ಲಾನ್ ಮಾಡುವವರು ಕಡ್ಡಾಯವಾಗಿ ಲೈಸನ್ಸ್ ಪಡೆದಿರಬೇಕು. ಲೈಸನ್ಸ್ ಇಲ್ದೆ ಮನೆಯಲ್ಲಿ ನಾಯಿಗಳನ್ನು ಸಾಕುವ ಹಕ್ಕಿಲ್ಲ. ಮನೆಯಲ್ಲಿ ನಾಯಿ ಸಾಕಬೇಕಾದರೆ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಸಿದ್ಧತೆ ಎಂಬುದಕ್ಕಿಂತ ಮುಂದಿನ ತಿಂಗಳಿಂದ ಈ ನಿಯಮ ಜಾರಿಗೆ ಬರಲಿದ್ದು, ದುಡ್ಡು ಕಟ್ಟಿ ಲೈಸನ್ಸ್ ಪಡೆಯಬೇಕು. ಯಾವ ತಳ್ಳಿಯ ನಾಯಿ ಸಾಕಲು ಮುಂದಾಗಿದ್ದೀರಾ ಎಂದರೆ ಮೊದಲೇ ಲೈಸನ್ಸ್ ಪಡೆದಿರಬೇಕು. ಲೈಸನ್ಸ್ ಇಲ್ಲದೇ ಮನೆಯಲ್ಲಿ ಶ್ವಾನಗಳನ್ನು ಸಾಕಿದರೆ ಮನೆ ಮಾಲೀಕನಿಗೆ ದಂಡ ಹಾಕಲಾಗುತ್ತದೆ.
ಸಾಕು ನಾಯಿ ಪರವಾನಗಿ ಉಪವಿಧಿ ಶೀಘ್ರದಲ್ಲೇ ಜಾರಿ
ಹಿಂದೆ ಸಾಕು ನಾಯಿಗಳ ಪರವಾನಿಗೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ಆದರೆ ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಾಗಿತ್ತು. ಆಗ ಬೈಲಾವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಬಳಿಕ ಈಗ ಮತ್ತೆ ಪಾಲಿಕೆ ಪರಿಷ್ಕೃತ ಬೈಲಾವನ್ನು ಸರ್ಕಾರದ ಮುಂದೆ ಮಂಡಿಸಿದ್ದು, ಮುಂದಿನ ತಿಂಗಳಿಂದ ನಾಯಿ ಸಾಕಲು ನಿಗದಿತ ಶುಲ್ಕ ಪಾವತಿಸಿ ನಿಯೋಜಿತ ಪಶುವೈದ್ಯಾಧಿಕಾರಿಯಿಂದ ಪರವಾನಗಿ ಪಡೆಯಬೇಕು. ಮಾಲೀಕರು ಸ್ವಂತ ವೆಚ್ಚದಲ್ಲಿ ಅದಕ್ಕೆ ಮೈಕ್ರೊಚಿಪ್ ಅಳವಡಿಸಬೇಕು. ಜಂತು ನಾಶಕ ಔಷಧಿ ಮತ್ತು ರೇಬಿಸ್, ಕೆನೈನ್ ಡಿಸ್ಟೆಂಪರ್, ಲೆಪ್ಟೋಸ್ಪೈರೋಸಿಸ್ ಮುಂತಾದ ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು. 12 ತಿಂಗಳಿಗಿಂತ ಹೆಚ್ಚು ವಯಸ್ಸಿನ ಹೆಣ್ಣು ನಾಯಿಗಳನ್ನು ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು ಎಂಬ ಮುಂತಾದ ನಿಯಮಗಳು ಬೈಲಾದಲ್ಲಿ ಅಳವಡಿಸಲಾಗಿದೆ. ಇನ್ನೂ ಹೊಸ ಬೈಲಾದ ಹೈಲೆಟ್ಸ್ ಇಂತಿವೆ
ಶುಲ್ಕ ಪಾವತಿಸಿ ಬಿಬಿಎಂಪಿಯಿಂದ ಲೈಸನ್ಸ್ ಕಡ್ಡಾಯ
ಮನೆಯಲ್ಲಿ ಒಂದು ನಾಯಿ ಸಾಕಬೇಕಿದ್ದರು ಲೈಸನ್ಸ್ ಕಡ್ಡಾಯ
ಫ್ಲ್ಯಾಟ್‌ಗಳಲ್ಲಿ ಡಾಬರ್‌ಮನ್, ಜರ್ಮನ್ ಶೆಫರ್ಡ್, ರಾಟ್‌ವೆಯ್ಲರ್, ಹೌಂಡ್ ಮುಂತಾದ ಆಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವಂತಿಲ್ಲ..?
12 ತಿಂಗಳಿಗಿಂತ ಹೆಚ್ಚು ವಯಸ್ಸಿನ ಹೆಣ್ಣು ನಾಯಿಗಳನ್ನು ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ
ನಾಯಿಯನ್ನು ತ್ಯಜಿಸಿದರೆ ಮಾಲೀಕರಿಗೆ ಆಯುಕ್ತರು ದಂಡ ವಿಧಿಸಬಹುದು ಮತ್ತು ಶಿಸ್ತುಕ್ರಮ ಕೈಗೊಳ್ಳಬಹುದು
ಉದ್ಯಾನ, ಪಾದಚಾರಿ ಮಾರ್ಗ, ರಸ್ತೆ ಮುಂತಾದ ಸ್ಥಳಗಳಲ್ಲಿ ಸಾಕುನಾಯಿ ಮಲ ವಿಸರ್ಜಿಸಿದರೆ ತೆರವುಗೊಳಿಸುವುದು ಮಾಲೀಕರ ಹೊಣೆ
ಸಾಕುನಾಯಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರೆದೊಯ್ಯುವಾಗ ಕಡ್ಡಾಯವಾಗಿ ಸರಪಳಿಯಿಂದ ಕಟ್ಟಬೇಕು
ನಿಯಮ ಉಲ್ಲಂಘನೆಗೆ ಮೊದಲ ಸಲ ₹ 500, ನಂತರ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.
ಈ ರೂಲ್ಸ್ ಶೀಘ್ರದಲ್ಲೇ ಜಾರಿಗೆ ಬರಲಿದ್ದು, ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಬಿಬಿಎಂಪಿಯ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದ್ದು ಬಿಬಿಎಂಪಿ ಲೈಸನ್ಸ್ ನೀಡಲು ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಲೈಸನ್ಸ್ ನೀಡುವುದನ್ನು ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನಲ್ಲಿ ಶ್ವಾನಗಳನ್ನು ಸಾಕೋದು ಒಂದು ಬ್ಯುಸಿನೆಸ್ ಆಗಿದ್ದು, ಬಿಬಿಎಂಪಿ ಇದರಿಂದಲೂ ಆದಾಯ ಗಳಿಸಲು ಮುಂದಾಗಿದೆ. ಆದರೆ ಮನೆಗೆ ಒಂದೇ, ಫ್ಲ್ಯಾಟ್ಗೆ ಒಂದೇ ಶ್ವಾನ ಎಂಬ ರೂಲ್ಸ್ ಬಗ್ಗೆ ಸಾಕಷ್ಟು ಟೀಕೆಗಳು ಬರುವ ಸಾಧ್ಯತೆಯಿದೆ.
ವರದಿ: ಮುತ್ತಪ್ಪ ಲಮಾಣಿ ಟಿವಿ9 ಬೆಂಗಳೂರು
ಇದನ್ನೂ ಓದಿ:
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು
ದುರ್ಗಾ ಮಾತೆ ವೇಷದಲ್ಲಿ ಸಂಜನಾ ಗಲ್ರಾನಿ; ನವರಾತ್ರಿ ಪ್ರಯುಕ್ತ ವಿಶೇಷ ಫೋಟೋಶೂಟ್
Published On - 7:30 pm, Sat, 9 October 21