BBMP Election: ಕಾವೇರುತ್ತಿದೆ ಬಿಬಿಎಂಪಿ ಚುನಾವಣೆ ಲೆಕ್ಕಾಚಾರ; ಬಿಜೆಪಿ-ಕಾಂಗ್ರೆಸ್​ಗೆ ಅತಂತ್ರ ಫಲಿತಾಂಶದ ಆತಂಕ

Bengaluru Politics: ರಾಜಕೀಯ ಪಕ್ಷಗಳಿಗೆ ಬಿಬಿಎಂಪಿ ಎಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ಹೀಗಾಗಿಯೇ ಬಿಬಿಎಂಪಿ ಚುನಾವಣೆಗೆ ಅಷ್ಟು ಪ್ರಾಮುಖ್ಯತೆ.

BBMP Election: ಕಾವೇರುತ್ತಿದೆ ಬಿಬಿಎಂಪಿ ಚುನಾವಣೆ ಲೆಕ್ಕಾಚಾರ; ಬಿಜೆಪಿ-ಕಾಂಗ್ರೆಸ್​ಗೆ ಅತಂತ್ರ ಫಲಿತಾಂಶದ ಆತಂಕ
ಬಿಬಿಎಂಪಿ ಕಚೇರಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 11, 2022 | 8:58 AM

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿಯಿದೆ. ಅಲ್ಲಿಯವರೆಗೆ ಬಿಬಿಎಂಪಿ  (Bruhat Bengaluru Mahanagara Palike – BBMP) ಚುನಾವಣೆಯನ್ನು ಮುಂದೂಡಬೇಕು ಎನ್ನುವುದು ಬಿಜೆಪಿ, ಕಾಂಗ್ರೆಸ್​ ಪಕ್ಷಗಳ ಅಂತರಂಗದ ಒತ್ತಾಸೆ. ಹಾಗೆಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಬಿಬಿಎಂಪಿ ಚುನಾವಣೆ ಎನ್ನುವುದು ಬಿಜೆಪಿ ಪಾಲಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ. ಕ್ಷೇತ್ರ ಪುನರ್​ವಿಂಗಡನೆ (BBMP Delimitation), ಅನುಕೂಲಸಿಂಧು ಮೀಸಲಾತಿ (BBMP Ward Reservation) ಪ್ರಶ್ನಿಸಿ ಹೈಕೋರ್ಟ್​ಗೆ (Karnataka High Court) ದಾಖಲಾಗಿರುವ ಅರ್ಜಿಗಳಿಂದಾಗಿ ಬಿಬಿಎಂಪಿ ಚುನಾವಣೆ ಎಂದು ನಡೆಯಬಹುದು ಎಂದು ಯಾರಿಗೂ ಹೇಳಲಾಗದ ಪರಿಸ್ಥಿತಿಯಿದೆ.

ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ತಡಮಾಡಲಾಗುತ್ತಿದೆ ಎಂದು ದೂರಿ ಹಲವರು ಈ ಹಿಂದೆ ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಆಗಸ್ಟ್ 4ರ ಒಳಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ಕೋರ್ಟ್ ಸೂಚಿಸಿತ್ತು. ಗಡುವಿಗೆ ಒಂದು ದಿನ ಮೊದಲು, ಅಂದರೆ ಆಗಸ್ಟ್ 3ರಂದು ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿತ್ತು. ಇದೇ ಹೊತ್ತಿಗೆ ಕ್ಷೇತ್ರ ಮರುವಿಂಗಡನೆಗೂ ಸರ್ಕಾರಕ್ಕೂ ಮುಂದಾಗಿತ್ತು. 198 ವಾರ್ಡ್​ಗಳಿದ್ದ ಬಿಬಿಎಂಪಿ ಕ್ಷೇತ್ರಗಳನ್ನು 243ಕ್ಕೆ ಹೆಚ್ಚಿಸಲಾಯಿತು. ಕ್ಷೇತ್ರ ಪುನರ್​ವಿಂಗಡನೆ ವೇಳೆ ಮತದಾರರ ಮಿತಿಯನ್ನು ಸಮರ್ಪಕ ರೀತಿಯಲ್ಲಿ ಪರಿಗಣಿಸಿದ ಕಾರಣ ಕಾಂಗ್ರೆಸ್ ಪ್ರಬಲವಾಗಿರುವ ಪ್ರದೇಶಗಳಿಗೆ ಅನ್ಯಾಯವಾಗಿದೆ, ಕಾಂಗ್ರೆಸ್​ನ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಆಗದಂತೆ ಮೀಸಲಾತಿ ನಿರ್ಧರಿಸಲಾಗಿದೆ ಎಂದು ಪ್ರತಿಪಕ್ಷಗಳ ಶಾಸಕರು ಗಂಭೀರ ಆರೋಪ ಮಾಡಿದ್ದರು.

ಈ ಬಗ್ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸಿದ್ದು, ಮೀಸಲಾತಿಯನ್ನು ಸದ್ಯಕ್ಕೆ ಅಂತಿಮಗೊಳಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕ ಆದೇಶ ನೀಡಿದೆ. ಬಿಬಿಎಂಪಿ ಚುನಾವಣೆಯನ್ನು ಸಾಧ್ಯವಾದಷ್ಟೂ ಮುಂದೂಡುವ ರಾಜಕೀಯ ಪಕ್ಷಗಳ ಯತ್ನಕ್ಕೆ ಕೋರ್ಟ್​ ಚಾಟಿ ಬೀಸುವ ಸಾಧ್ಯತೆಯೇ ಹೆಚ್ಚು. ಬಿಬಿಎಂಪಿಗೆ ಚುನಾವಣೆ ನಡೆದು, ಜನಪ್ರತಿನಿಧಿಗಳು ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂದು ಕೋರ್ಟ್​ ಈ ಹಿಂದೆ ತನ್ನ ನಿಲುವು ವ್ಯಕ್ತಪಡಿಸಿತ್ತು. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ಸಿದ್ಧತೆ ಆರಂಭಿಸಿವೆ.

ಆಂತರಿಕ ಸಮೀಕ್ಷೆ

ರಾಜಧಾನಿ ಬೆಂಗಳೂರಿನ ಆಡಳಿತ ನಿರ್ವಹಿಸುವ ಬಿಬಿಎಂಪಿ ಯಾವ ಪಕ್ಷದ ಸುಪರ್ದಿಯಲ್ಲಿ ಇರುತ್ತದೆಯೋ ಅವರಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಅನುಕೂಲಗಳು ಹೆಚ್ಚು. ಏಕೆಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ವಾರ್ಡ್​ಗಳಲ್ಲಿ ತಮ್ಮ ಪಕ್ಷದ ಕೌನ್ಸಿಲರ್​ಗಳಿದ್ದರೆ ಅವರ ಮೂಲಕ ಸ್ಥಳೀಯ ಮಟ್ಟದಲ್ಲಿ ಮತದಾರರ ಸಂಪರ್ಕ ಸಾಧಿಸಿ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸುಲಭವಾಗಿಸಿಕೊಳ್ಳಬಹುದು.

ಬಿಬಿಎಂಪಿ ಎನ್ನುವುದು ರಾಜಕೀಯ ಪಕ್ಷಗಳ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಿದ್ದಂತೆ. ಬಿಬಿಎಂಪಿ ಬಜೆಟ್ ಗಾತ್ರವು ₹ 10 ಸಾವಿರ ಕೋಟಿಗೂ ಹೆಚ್ಚು. ಇದರ ಜೊತೆಗೆ ಆಪ್ತರಿಗೆ ಗುತ್ತಿಗೆಗಳನ್ನು ಕೊಡಿಸಲು, ಬೆಂಬಲಿಗರಿಗೆ ಕೆಲಸಗಳನ್ನು ಕೊಡಿಸಲು ರಾಜಕೀಯ ಪಕ್ಷಗಳಿಗೆ ಬಿಬಿಎಂಪಿ ಬೇಕು. ಕರ್ನಾಟದಲ್ಲಿ ಅತಿಹೆಚ್ಚು ತೆರಿಗೆ ಪಾವತಿಯಾಗುವ, ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಬೆಂಗಳೂರು ನಗರವು ರಾಜಕೀಯ ಪಕ್ಷಗಳಿಗೆ ‘ಚುನಾವಣೆ ಖರ್ಚು’ ನಿರ್ವಹಿಸಲು ಬೇಕಿರುವಷ್ಟು ಸಂಪನ್ಮೂಲ ಸಂಗ್ರಹದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.ಹೀಗಾಗಿಯೇ ಬಿಬಿಎಂಪಿ ಚುನಾವಣೆಗೆ ಮಹತ್ವ ಹೆಚ್ಚು.

ಚುರುಕಾಯ್ತು ಆಪ್: ಚತುಷ್ಕೋನ ಸ್ಪರ್ಧೆ ನಿರೀಕ್ಷಿತ

ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಇತ್ತೀಚೆಗೆ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸಿ ಚುನಾವಣಾ ಸಿದ್ಧತೆಗೆ ಚಾಲನೆ ನೀಡಿತ್ತು. ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಸಹ ಚುನಾವಣೆಗೆ ಕಹಳೆ ಮೊಳಗಿಸಿದೆ. ಜನತಾ ಜಲಧಾರೆ ಮೂಲಕ ಜೆಡಿಎಸ್​ ಮತದಾರರ ಗಮನ ಸೆಳೆಯಲು ಯತ್ನಿಸಿದೆ. ಆಪ್ ಕಾರ್ಯಕರ್ತರು ನಗರ ವ್ಯಾಪ್ತಿಯಲ್ಲಿ ಎದ್ದು ಕಾಣುವಂತೆ ಹೆಚ್ಚಿನ ಚಟುವಟಿಕೆ ನಡೆಸಿದ್ದರೂ, ಮನೆಮನೆ ಸಂಪರ್ಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಘಟನೆ ಬಲಪಡಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಪ್ರಬಲ ಹಣಾಹಣಿ ಇದ್ದರೂ ಜೆಡಿಎಸ್​ ಜೊತೆಗೆ ಆಪ್ ಸಹ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮತ ಕಸಿಯುವುದು ನಿರೀಕ್ಷಿತ.

ಆಂತರಿಕ ಸಮೀಕ್ಷೆಗಳು ಏನು ಹೇಳುತ್ತವೆ

ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳು ಖಾಸಗಿಯಾಗಿ ಮಾಡಿಸಿರುವ ಆಂತರಿಕ ಸಮೀಕ್ಷೆಗಳು ಬಹಿರಂಗಗೊಂಡಿವೆ. ಅಧಿಕೃತವಾಗಿ ಈ ಮಾಹಿತಿ ಲಭ್ಯವಿಲ್ಲವಾದರೂ ಪಕ್ಷಗಳ ಆಂತರಿಕ ವಲಯಗಳು ಹಲವು ಅಂಶಗಳು ತೇಲಿಬಿಟ್ಟಿವೆ. ಅದರಂತೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ 91ರಿಂ 96, ಕಾಂಗ್ರೆಸ್​ಗೆ 85ರಿಂದ 91, ಜೆಡಿಎಸ್​ಗೆ 20ರಿಂದ 25, ಆಪ್​ಗೆ 21ರಿಂದ 26, ಪಕ್ಷೇತರರು 5ರಿಂದ 6 ಆಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ಹೇಳಲಾಗುತ್ತಿದೆ.

ಬಿಬಿಎಂಪಿಯ ಒಟ್ಟು ವಾರ್ಡ್​ಗಳು 243. ಅಂದರೆ ಇಷ್ಟು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರ ಜೊತೆಗೆ ಮೇಯರ್ ಆಯ್ಕೆ ಸೇರಿದಂತೆ ಮಹತ್ವದ ಸಂದರ್ಭಗಳಲ್ಲಿ ಇತರ ಜನಪ್ರತಿನಿಧಿಗಳ ಮತಗಳಿಗೂ ಮೌಲ್ಯವಿದೆ. ನಗರ ವ್ಯಾಪ್ತಿಯಲ್ಲಿ 28 ಶಾಸಕರು, ಐವರು ಲೋಕಸಭಾ ಸದಸ್ಯರು, ಆರು ಮಂದಿ ರಾಜ್ಯಸಭಾ ಸದಸ್ಯರು ಹಾಗೂ 20 ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಈ ಎಲ್ಲವನ್ನೂ ಒಗ್ಗೂಡಿಸಿದರೆ ಬಿಬಿಎಂಪಿ ಸದಸ್ಯ ಬಲವು 302ಕ್ಕೆ ಏರುತ್ತದೆ. ಅಧಿಕಾರಕ್ಕೆ ಬರಲು 152 ಸದಸ್ಯ ಬಲ ಬೇಕಿದೆ.

ಕಳೆದ ಬಾರಿ 198 ವಾರ್ಡ್​ಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ 101 ವಾರ್ಡ್​ಗಳಲ್ಲಿ ಜಯಗಳಿಸಿತ್ತು. ಬಿಜೆಪಿಗೆ 37 ಇತರ ಮತಗಳ ಶ್ರೀರಕ್ಷೆ ಇತ್ತು. ಅಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಜೆಪಿಯ 16 ಶಾಸಕರು, 8 ಸಂಸದರು ಮತ್ತು 13 ವಿಧಾನ ಪರಿಷತ್ ಸದಸ್ಯರು (13) ಇದ್ದರು. ಬಿಜೆಪಿ ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ರಾಜ್ಯ ಸರ್ಕಾರದ ಗೊಂದಲಗಳಿಂದಾಗಿ ಆಡಳಿತ ವಿರೋಧಿ ಅಲೆ ಎದುರಾಗಿರುವುದು, ಕಾಂಗ್ರೆಸ್ ಮತ್ತು ಆಪ್ ಚುರುಕಾಗಿ ಸಂಘಟನೆಗೆ ಮುಂದಾಗಿರುವುದರಿಂದ ಬಿಜೆಪಿಗೆ ಪ್ರಬಲ ಸವಾಲು ಎದುರಾಗಿದೆ. ಬಿಜೆಪಿ ನಿಚ್ಚಳ ಬಹುಮತ ಗಳಿಸದಿದ್ದರೆ ಜೆಡಿಎಸ್ ಮತ್ತು ಆಪ್ ಪಕ್ಷಗಳು ಯಾರಿಗೆ ಅಧಿಕಾರ ಹೋಗಬೇಕು ಎಂದು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ.

ಬೆಂಗಳೂರು ನಗರಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:53 am, Thu, 11 August 22