ಬಿಬಿಎಂಪಿ ಪೌರಕಾರ್ಮಿಕರಾಗಿದ್ದ ಅಪ್ಪ ಸತ್ತ ಮೇಲೆ ಅನುಕಂಪದ ಮೇಲೆ ಕೆಲಸ ಗಿಟ್ಟಿಸಿಕೊಂಡ ಮಾಯಣ್ಣ ಇಂದು ನುಂಗಣ್ಣ ಆದ ಕತೆ!

ಮಾಯಣ್ಣ ತಂದೆ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿದ್ದರು. ಅಕಾಲಿಕ ನಿಧನ ಹೊಂದಿದ ಕಾರಣ, ಅನುಕಂಪದ ಆಧಾರದ ಮೇಲೆ ಮಾಯಣ್ಣ ಬಿಬಿಎಂಪಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ.

ಬಿಬಿಎಂಪಿ ಪೌರಕಾರ್ಮಿಕರಾಗಿದ್ದ ಅಪ್ಪ ಸತ್ತ ಮೇಲೆ ಅನುಕಂಪದ ಮೇಲೆ ಕೆಲಸ ಗಿಟ್ಟಿಸಿಕೊಂಡ ಮಾಯಣ್ಣ ಇಂದು ನುಂಗಣ್ಣ ಆದ ಕತೆ!
ಮಾಯಣ್ಣ
Follow us
TV9 Web
| Updated By: ಆಯೇಷಾ ಬಾನು

Updated on:Nov 24, 2021 | 1:48 PM

ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ ಎಸಿಬಿ ಭರ್ಜರಿ ಕಾರ್ಯಚರಣೆ ನಡೆಸಿದೆ. ಸುಮಾರು 60ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ ಚಿನ್ನ, ದಾಖಲೆ, ಆಸ್ತಿ-ಪಾಸ್ತಿಯನ್ನು ಪತ್ತೆಮಾಡಿದೆ. ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ 135 ಕೋಟಿ ನಷ್ಟವುಂಟು ಮಾಡಿದ್ದ ಮಾಯಣ್ಣನ ಮನೆ ಮೇಲೂ ಎಸಿಬಿ ದಾಳಿ ನಡೆಸಿದೆ. ತಂದೆಯ ಕೆಲಸ ಗಿಟ್ಟಿಸಿಕೊಂಡು ಕೋಟ್ಯಾಂತರ ರೂಪಾಯಿ ಸಂಪಾದಿಸಿದ ಕಿಲಾಡಿ ಮಾಯಣ್ಣನ ರೋಚಕ ಇತಿಹಾಸ ಇಲ್ಲಿದೆ.

ಮಾಯಣ್ಣ ತಂದೆ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿದ್ದರು. ಅಕಾಲಿಕ ನಿಧನ ಹೊಂದಿದ ಕಾರಣ, ಅನುಕಂಪದ ಆಧಾರದ ಮೇಲೆ ಮಾಯಣ್ಣ ಬಿಬಿಎಂಪಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. 2002 ಜನವರಿ 22 ರಲ್ಲಿ ಬಿಬಿಎಂಪಿಗೆ ನೇಮಕವಾಗಿದ್ದ. ತಂದೆ ನಿಧನದ ನಂತರ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಗುಮಾಸ್ತನಾಗಿ ನೇಮಕಗೊಂಡ. ಮೊದಲು ಮಾಗಡಿ ರೋಡ್ನ ಹೈಸ್ಕೂಲ್ನಲ್ಲಿ ಗುಮಾಸ್ತನಾಗಿದ್ದ ನಂತರ 2004 ರಲ್ಲಿ ಶಾಂತಿನಗರ ಎಇಇ ಕಚೇರಿಗೆ ಪೋಸ್ಟಿಂಗ್ ಆಯ್ತು. ಅಲ್ಲಿಂದ ಮುಂಬಡ್ತಿ ಪಡೆದು ಕೇಂದ್ರ ಕಚೇರಿಗೆ ಬಂದ. ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗಕ್ಕೆ ಮುಂಬಡ್ತಿ ಆಯ್ತು. 2009 ರಂದು ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ ಎಫ್ಡಿಸಿಯಾಗಿ ನೇಮಕಗೊಂಡ.

198 ವಾರ್ಡ್ ಗಳ ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ಬಿಲ್ಗಳನ್ನ ಮಾಯಣ್ಣನೇ ಪಾವತಿ ಮಾಡುತ್ತಿದ್ದ. ಬಿಲ್ಗಳಿಗೆ ಸಂಬಂಧಿಸಿದಂತೆ ಕಡತಗಳನ್ನ ವಿಲೇವಾರಿ ಮಾಡುತ್ತಿದ್ದ. ಪ್ರತಿ ವರ್ಷ ಎರಡು ಸಾವಿರ ಕೋಟಿಯಷ್ಟು ಅನುದಾನ ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗಕ್ಕೆ ಬರ್ತಾಯಿತ್ತು. ಹೀಗಾಗಿ ಗುತ್ತಿಗೆದಾರರಿಂದ ಬಿಲ್ ಹಾಗೂ ಟೆಂಡರ್ ವೇಳೆ 0.5 ಪರ್ಸೆಂಟೆಜ್ ಪಡೆಯುತ್ತಿದ್ದ. ಪರ್ಸೆಂಟೆಜ್ ಹಣ ಬರುತ್ತಿದ್ದ ಹಿನ್ನೆಲೆ ಕಳೆದ ಹತ್ತು ವರ್ಷದಿಂದ ಒಂದೇ ವಿಭಾಗದಲ್ಲಿ ಕೆಲ್ಸ ಮಾಡುತ್ತಿದ್ದ.

135 ಕೋಟಿ ಉಂಡೆ ನಾಮ ನಕಲಿ ಬಿಲ್ ಹಾಗೂ ನಕಲಿ‌ ಸಹಿ ಹಾಕಿ ಮಾಯಣ್ಣ ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ 135 ಕೋಟಿ ನಷ್ಟವುಂಟು ಮಾಡಿದ್ದ. ಹೀಗಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ 2017 ರಲ್ಲಿ ಮಾಯಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ಮಾಡಿದ್ದರು. ನಷ್ಟವನ್ನ ಮಾಯಣ್ಣನಿಂದ ವಸೂಲಿಗೂ ಆದೇಶ ಮಾಡಲಾಗಿತ್ತು. ಆದರೆ ಇದೂವರೆಗೂ ಮಾಯಣ್ಣ ವಿರುದ್ಧ ಯಾವ ಅಧಿಕಾರಿಯೂ ಕ್ರಮ ತೆಗೆದುಕೊಂಡಿಲ್ಲ. ಹಲವು ಬಾರಿ ವರ್ಗಾವಣೆ ಮಾಡಿದ್ದರೂ ಪ್ರಭಾವ ಬಳಸಿ ವರ್ಗಾವಣೆ ರದ್ದುಪಡಿಸಿಕೊಂಡು ಪಾಲಿಕೆಯಲ್ಲೇ ಉಳಿದಿದ್ದಾರೆ.

ಬಿಬಿಎಂಪಿ ಪ್ರಥಮ ದರ್ಜೆ ಗುಮಾಸ್ತ ಆಗಿರುವ ಮಾಯಣ್ಣ ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ನಗರ ಜಿಲ್ಲಾಧ್ಯಕ್ಷನೂ ಆಗಿದ್ದ. ಸದ್ಯ ಮೊನ್ನೆ ಅಧ್ಯಕ್ಷನ ಸ್ಥಾನದಿಂದ ಕೆಳಗೆ ಇಳಿದಿದ್ದಾನೆ. ಲಾಕ್ ಡೌನ್ಗೂ ಮುನ್ನ ವಿದೇಶ ಪ್ರವಾಸ ಮಾಡಿದ್ದ ಮಾಯಣ್ಣ ದುಬೈ, ಸಿಂಗಾಪುರ್ಗೆ ಕುಟುಂಬ ಸಮೇತ ಹೋಗಿ ಎಂಜಾಯ್ ಮಾಡಿ ಬಂದಿದ್ದ. ಅಲ್ಲದೆ ಲಂಡನ್ನಲ್ಲಿ ಸಾಹಿತ್ಯ ಸಮ್ಮೇಳನ ಮಾಡುವುದಾಗಿ ಹಲವರ ಬಳಿ ಹಣ ಸಂಗ್ರಹ ಮಾಡಿದ್ದ. ಬಿಬಿಎಂಪಿಯಲ್ಲಿ ತನ್ನದೇ ಟೀಮ್ ಕಟ್ಟುಕೊಂಡಿದ್ದ. ಈ ಎಲ್ಲಾ ಅಕ್ರಮದ ಜೊತೆಗೆ ಮಾಯಣ್ಣನ ಮೇಲೆ ಮೀ ಟು ಕೇಸ್ ಕೂಡ ಕೇಳಿ ಬಂದಿತ್ತು. ಮಹಿಳೆಯೊಬ್ಬರು ಮಾಯಣ್ಣನ ಮೇಲೆ ಮೀ ಟು ಕೇಸ್ ಹಾಕಿದ್ದರು. 2002 ಎಲ್ಲಿ 8 ಸಾವಿರ ಸಂಬಳಕ್ಕೆ ಬಂದಿದ್ದ ಮಾಯಣ್ಣನಿಗೆ ಈಗ 40 ಸಾವಿರ ರೂಪಾಯಿ ಸಂಬಳ ಸಿಗುತ್ತಿದೆ.

ಮಾಯಣ್ಣನ ಆಸ್ತಿ ಎಲ್ಲೆಲ್ಲಿ ಇದೆ? ಇನ್ನು ಇಷ್ಟೆಲ್ಲಾ ಮಾಯಣ್ಣನ ಮಾಯೆಯ ನಡುವೆ ಜೋಸೆಫ್ ಎಂಬಾತ ಮಾಯಣ್ಣನ ಆಸ್ತಿ ಎಷ್ಟಿದೆ ಎಂಬ ಬಗ್ಗೆ ಎಸಿಬಿಗೆ ದೂರು ನೀಡಿದ್ದ. ಮಾಯಣ್ಣ ಪತ್ನಿ ಉಮಾ ಅವರ ಹೆಸರಿನಲ್ಲಿ ಉಲ್ಲಾಳದಲ್ಲಿ 4 ಹಂತಸ್ತಿನ ಕಟ್ಟಡ, ಮಾಯಣ್ಣ ಹೆಸರಲ್ಲಿ ವೀರಭ್ರನಗರದಲ್ಲಿ ನಾಲ್ಕು ಅಂತಸ್ತಿನ ಬಂಗಲೆ, ಹಾರ್ತಿಕ್ ಗೌಡ ಎಂಬ ಗುತ್ತಿಗೆ ದಾರರ ಹೆಸರಲ್ಲಿ ಬೇನಾಮಿ ಆಸ್ತಿ, ಮಾಯಣ್ಣ ಹೆಸರಿನಲ್ಲಿ ಕೆಂಗೇರಿ ಬಳಿ 2 ನಿವೇಶನ, ಮಾಯಣ್ಣ ಹೆಸರಲ್ಲಿ ಚಾಮರಾಪೇಟೆಯಲ್ಲಿ ಕಚೇರಿ, ಬೇನಾಮಿ ಹೆಸರಲ್ಲಿ ಒಂದು ಇನೋವಾ ಕ್ರಿಸ್ಟಾ, ಒಂದು ಬೆನ್ಸ್ ಹೊಂದಿದ್ದ. ಪ್ರಸಿದ್ಧ ದೇವಸ್ಥಾನಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿರುವ ಬಗ್ಗೆ ದಾಖಲೆಗಳ ಸಮೇತ 2020 ರಲ್ಲಿ ಜೋಸೆಫ್ ಎಸಿಬಿಗೆ ದೂರು ನೀಡಿದ್ದರು. ಇನ್ನು ಬಿಬಿಎಂಪಿ ಕಚೇರಿಯಿಂದ ಟೇಬಲ್, ಜೆರಾಕ್ಸ್ ಮಿಷನ್ ಪಡೆದು ತಮ್ಮ ಮನೆಗೆ ತೆಗೆದುಕೊಂಡು ಹೋಗಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಿದ್ದಾರೆ. ಮಾಯಣ್ಣ ಬೆಂಗಳೂರಿನ ಕಂಟ್ರಿ ಕ್ಲಬ್ ಶ್ರೀನಗರದಲ್ಲಿ ಸದಸ್ಯನಾಗಿದ್ದಾನೆ.

ಇದನ್ನೂ ಓದಿ: ACB Raid: ‘ಮಾಯ’ದಂತಹ ಭ್ರಷ್ಟಾಚಾರ: ನಕಲಿ ಬಿಲ್‌ ಸೃಷ್ಟಿ ಪರಿಣತ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಜಿಲ್ಲಾಧ್ಯಕ್ಷನೂ ಹೌದು!

Published On - 1:44 pm, Wed, 24 November 21