ಜನರಿಗೆ ಇಂದಿರಾ ಕ್ಯಾಂಟೀನ್, ಬೀದಿ ನಾಯಿಗಳಿಗೆ ಬಾಡೂಟ! ಬಿಬಿಎಂಪಿ ಹೊಸ ಯೋಜನೆ

ಬಡವರು ಹಸಿವಿನಿಂದ ಇರಬಾರದು ಎಂದು ಬೆಂಗಳೂರು ಹಾಗೂ ಕರ್ನಾಟಕದ ಇತರ ನಗರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಬೆಂಗಳೂರಿನ ಬೀದಿ ನಾಯಿಗಳಿಗೆ ಆಹಾರ ನೀಡಲು ಮುಂದಾಗಿದೆ! ಹೌದು, ಬೀದಿ ನಾಯಿಗಳಿಗೆ ಆಹಾರ ನೀಡಲು ಬಿಬಿಎಂಪಿ ಸುಮಾರು 2.8 ಕೋಟಿ ರೂ. ಟೆಂಡರ್ ಕರೆದಿದೆ. ಇದಕ್ಕೆ ಕಾರಣವೇನು? ಈ ಯೋಜನೆಯ ಉದ್ದೇಶವೇನು? ಬಿಬಿಎಂಪಿ ಹೇಳಿದ್ದೇನು? ಇಲ್ಲಿದೆ ವಿವರ.

ಜನರಿಗೆ ಇಂದಿರಾ ಕ್ಯಾಂಟೀನ್, ಬೀದಿ ನಾಯಿಗಳಿಗೆ ಬಾಡೂಟ! ಬಿಬಿಎಂಪಿ ಹೊಸ ಯೋಜನೆ
ಬೀದಿ ನಾಯಿಗಳಿಗೆ ಆಹಾರ ವಿತರಣೆ! ಬಿಬಿಎಂಪಿ ಹೊಸ ಯೋಜನೆ ಬಗ್ಗೆ ಸೂರಳ್ಕರ್‌ ವಿಕಾಸ್‌ ಕಿಶೋರ್‌ ಮಾಹಿತಿ

Updated on: Jul 10, 2025 | 12:02 PM

ಬೆಂಗಳೂರು, ಜುಲೈ 10: ಇಂದಿರಾ ಕ್ಯಾಂಟೀನ್ ಯೋಜನೆ ಮೂಲಕ ಬಡವರ ಹಸಿವು ತಣಿಸಲು ಮುಂದಾಗಿ ಈಗಲೂ ಅದನ್ನು ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Govt) ಈಗ ಬೆಂಗಳೂರಿನ (Bengaluru) ಬೀದಿ ನಾಯಿಗಳ (Stray Dogs) ಹೊಟ್ಟೆ ತುಂಬಿಸಲು ಯೋಜನೆ ಹಮ್ಮಿಕೊಂಡಿದೆ. ಬಿಬಿಎಂಪಿಯ 8 ವಲಯಗಳಲ್ಲಿ ಬೀದಿ ನಾಯಿಗಳಿಗೆ ಊಟ ಹಾಕಿಸುವುದಕ್ಕಾಗಿ ಸುಮಾರು 2.8 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ಸೂರಳ್ಕರ್‌ ವಿಕಾಸ್‌ ಕಿಶೋರ್‌ ಮಾಹಿತಿ ನೀಡಿದ್ದು, ಬೀದಿ ನಾಯಿಗಳಿಗೆ ಆಹಾರ ಹಾಕುವ ಯೋಜನೆ ಯಾಕಾಗಿ ಹಮ್ಮಿಕೊಳ್ಳಲಾಗುತ್ತಿದೆ, ಟೆಂಡರ್ ನಿಯಮಾವಳಿಗಳು ಏನಿರಲಿವೆ ಇತ್ಯಾದಿ ವಿವರಗಳನ್ನು ನೀಡಿದ್ದಾರೆ.

ಬೀದಿ ನಾಯಿಗಳಿಗೆ ಆಹಾರ ಯೋಜನೆ ಏಕೆ?

ಬೀದಿ ನಾಯಿಗಳು ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ದಾಳಿ ನಡೆಸುವ ಪ್ರಕರಣಗಳನ್ನು ತಡೆಯುವ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ. ಊಟ ಹಾಕಿ ಹೊಟ್ಟೆ ತುಂಬಿಸುವುದರಿಂದ ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಲಾರವು. ಈಗಾಗಲೇ ಈ ಸಂಬಂಧ ಕೆಲವು ವಾರ್ಡ್​​ಗಳಲ್ಲಿ ಊಟ ನೀಡಿ ಪ್ರಯೋಗ ಮಾಡಲಾಗಿದೆ. ಸುಮಾರು 100 ನಾಯಿಗಳಿಗೆ 2-3 ತಿಂಗಳು ಊಟ ಹಾಕಿ ಪ್ರಯೋಗ ಮಾಡಲಾಗಿದೆ ಎಂದು ಸೂರಳ್ಕರ್‌ ವಿಕಾಸ್‌ ಕಿಶೋರ್‌ ತಿಳಿಸಿದ್ದಾರೆ.

ಬೀದಿ ನಾಯಿಗಳಿಗೆ ಏನೇನು ಆಹಾರ?

ಬೀದಿ ನಾಯಿಗಳಿಗೆ ಎಗ್ ರೈಸ್, ಚಿಕನ್ ರೈಸ್ ಸೇರಿದಂತೆ ಕ್ಯಾಲೊರಿಯುಕ್ತ ಆಹಾರ ನೀಡಲು ಬಿಬಿಎಂಪಿ ಉದ್ದೇಶಿಸಿದೆ.

ಇದನ್ನೂ ಓದಿ
ದಾವಣಗೆರೆ: ಮೂರೇ ತಿಂಗಳಲ್ಲಿ 50 ಲಕ್ಷ ರೂ. ತೆರಿಗೆ ಸಂಗ್ರಹಿಸಿದ ಮಹಿಳೆಯರು!
ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು!
ದೆಹಲಿಯಲ್ಲಿ ಸಿಎಂ, ಡಿಸಿಎಂ ಕುತೂಹಲದ ನಡೆ: ಇಂದು ಸಂಜೆ ಹೈಕಮಾಂಡ್ ಭೇಟಿ
ಭೇಟಿ ಸಕ್ಸಸ್: ಸಿದ್ದರಾಮಯ್ಯ ಬೇಡಿಕೆಗಳಿಗೆ ಸ್ಪಂದಿಸಿದ ರಕ್ಷಣಾ ಸಚಿವ!

ಬೀದಿ ನಾಯಿಗಳಿಗೆ ಊಟ ವಿತರಣೆ ಹೇಗೆ?

ರೆಸ್ಟೋರೆಂಟ್, ಹೊಟೇಲ್ ಹಾಗೂ ಇತರ ಸಂಸ್ಥೆಗಳ ಸಹಕಾರದಲ್ಲಿ ಬೀದಿ ನಾಯಿಗಳಿಗೆ ಊಟ ವಿತರಣೆ ಮಾಡಲಾಗುವುದು. ಅದಕ್ಕೆ ಟೆಂಡರ್ ಕರೆಯಲಾಗಿದ್ದು, 8 ವಲಯಗಳಿಗೆ 2.88 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಬೀದಿ ನಾಯಿಗಳಿಗೆ ಆಹಾರ ಯೋಜನೆ: ಗುತ್ತಿಗೆ ಹೇಗೆ?

ಬಿಬಿಎಂಪಿಯ ಪಶುಸಂಗೋಪನಾ ಜಂಟಿ ನಿರ್ದೇಶಕರು, ಕರ್ನಾಟಕ ಸಾರ್ವಜನಿಕ ಖರೀದಿ ಪೋರ್ಟಲ್ ಅಡಿಯಲ್ಲಿ ಬಿಬಿಎಂಪಿಯ 8 ವಲಯಗಳಲ್ಲಿ ನಾಯಿಗಳಿಗೆ ಆಹಾರ ಸೇವೆ ಒದಗಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. 1 ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ಇದನ್ನು ಮಾಡಲಾಗುತ್ತಿದ್ದು, ಗುತ್ತಿಗೆ ಪಡೆದವರು ಒದಗಿಸಿದ ಸೇವೆಗಳು ತೃಪ್ತಿಕರವಾಗಿದ್ದರೆ ಇನ್ನೂ 1 ವರ್ಷ ವಿಸ್ತರಿಸಬಹುದಾಗಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರು ನಿರ್ಧಾರ ತೆಗೆದುಕೊಳ್ಳುತ್ತಾರೆ.

ಟೆಂಡರ್​ಗೆ ಯಾರು ಅರ್ಹರು?

ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಾಯಿತ ಎಲ್ಲಾ ಸೇವಾ ಪೂರೈಕೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಇದನ್ನೂ ಓದಿ: ಶಕ್ತಿ ಯೋಜನೆ: 500 ಕೋಟಿ ತಲುಪಲಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ

ಬೀದಿ ನಾಯಿಗಳಿಗೆ ಆಹಾರ ವಿತರಣೆ ಹೇಗೆ ನಡೆಯುತ್ತದೆ?

ಬೀದಿ ನಾಯಿಗಳಿಗೆ 700 ರಿಂದ 750 ಕ್ಯಾಲೊರಿಯ ಆಹಾರ ಸಿದ್ಧಪಡಿಸುವುದಕ್ಕಾಗಿ ಮೆನು ಈಗಾಗಲೇ ಸಿದ್ಧಮಾಡಿಕೊಟ್ಟಿದ್ದೇವೆ. ಬಿಡ್ಡರ್​ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಡುಗೆ ಮನೆ ಹೊಂದಿರಬೇಕು. ಅಲ್ಲಿ ಆಹಾರ ತಯಾರಿಸಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳ ಆಯ್ಕೆ ಮಾಡಬೇಕು. ನಮ್ಮ ಸ್ವಯಂಸೇವಕರ ಜತೆ ಸೇರಿಕೊಂಡು ಆಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ನಂತರ ಆ ಜಾಗವನ್ನು ಸ್ವಚ್ಛಗೊಳಿಸಿ ನಮಗೆ ವರದಿ ಸಲ್ಲಿಸಬೇಕು. ಎಷ್ಟು ನಾಯಿಗಳಿಗೆ ಆಹಾರ ನೀಡಲಾಗಿದೆ ಎಂಬ ಮಾಹಿತಿ ನೀಡಬೇಕು. ಎಂದು ಸೂರಳ್ಕರ್‌ ವಿಕಾಸ್‌ ಕಿಶೋರ್‌ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:55 am, Thu, 10 July 25