Bengaluru ED Raid: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳು ಸೇರಿ ಬೆಂಗಳೂರಿನ 5 ಕಡೆ ಇಡಿ ದಾಳಿ
ಬೆಂಗಳೂರು ಇಡಿ ದಾಳಿ: ಆಡಳಿತಾರೂಢ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಜಾರಿ ನಿರ್ದೇಶನಾಲಯ ಗುರುವಾರ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ. ಸುಬ್ಬಾರೆಡ್ಡಿ ಮನೆಗಳು ಸೇರಿದಂತೆ ಬೆಂಗಳೂರಿನ 5 ಕಡೆ ಇಡಿ ದಾಳಿ ನಡೆದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ದಾಳಿ ನಡೆಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಬೆಂಗಳೂರು, ಜುಲೈ 10: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ (Subba Reddy) ಮನೆಗಳ ಮೇಲೆ ಸೇರಿದಂತೆ ಒಟ್ಟು ಬೆಂಗಳೂರಿನ (Bengaluru) 5 ಕಡೆಗಳಲ್ಲಿ ಗುರುವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳಲ್ಲಿ ಶೋಧ ನಡೆಯುತ್ತಿದೆ. ಸುಬ್ಬಾರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದು, ಇವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಅದರ ಅನ್ವಯ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಸಕ ಸುಬ್ಬಾರೆಡ್ಡಿ ಕುಟುಂಬ ಸದಸ್ಯರು ಹೊಂದಿರುವ ವಿದೇಶಿ ಆಸ್ತಿ ಮತ್ತು ಅವರ ಉದ್ಯಮ ಪಾಲುದಾರರಿಗೆ ಸೇರಿದ ಆಸ್ತಿ ಸಂಬಂಧ ದಾಳಿ ನಡೆದಿದೆ. ವಿದೇಶಗಳಲ್ಲಿನ ಬ್ಯಾಂಕ್ ಅಕೌಂಟ್, ವಿದೇಶ ವ್ಯವಹಾರದಲ್ಲಿ ಹೂಡಿಕೆ ವಿಚಾರವಾಗಿ ಶೋಧ ನಡೆಸಲಾಗುತ್ತಿದೆ. ಸುಬ್ಬಾರೆಡ್ಡಿ ಮಲೇಷ್ಯಾ, ಹಾಂಕಾಂಗ್, ಜರ್ಮನಿಯಲ್ಲಿ ಆಸ್ತಿ ಹೊಂದಿದ್ದಾರೆ.
ಬೆಳಗ್ಗೆ 7 ಗಂಟೆಗೆ ಸುಬ್ಬಾರೆಡ್ಡಿ ಮನೆ ಮೇಲೆ ಇಡಿ ದಾಳಿ ನಡೆದಿದೆ. ಒಟ್ಟು ಐದು ಕಾರುಗಳಲ್ಲಿ 6 ಮಂದಿ ಇಡಿ ಅಧಿಕಾರಿಗಳು ಆಗಮಿಸಿದ್ದು, 7 ಸಿಬ್ಬಂದಿಯೂ ಜತೆಗಿದ್ದಾರೆ. ಮಾರತಹಳ್ಳಿ ಬಳಿ ಇರುವ ಸುಬ್ಬಾರೆಡ್ಡಿ ನಿವಾಸದಲ್ಲಿ ದಾಳಿ ನಡೆದಿದೆ.
ಶಾಸಕ ಸುಬ್ಬಾರೆಡ್ಡಿ ನಿವಾಸದಲ್ಲಿ ಇಡಿ ಅಧಿಕಾರಿಗಳ ಪರಿಶೀಲನೆ ಮಧ್ಯಾಹ್ನವಾದರೂ ಮುಂದುವರಿದಿದೆ. ಸುಬ್ಬಾರೆಡ್ಡಿ ನಿವಾಸ, ಕಚೇರಿಯಲ್ಲಿ ಇಡಿ ಅಧಿಕಾರಿಗಳಿಂದ ತೀವ್ರ ಶೋಧ ನಡೆಯುತ್ತಿದೆ. ಬ್ಯಾಂಕ್ ಖಾತೆ ಸೇರಿ ಹಲವು ಮಾಹಿತಿಗಳನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಈ ಮಧ್ಯೆ, ಸುಬ್ಬಾರೆಡ್ಡಿ ಮನೆಗಳ ಮೇಲೆ ಇಡಿ ದಾಳಿ ನಡೆದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ.
ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ
ಜೂನ್ 25 ರಂದು, ಎಂಜಿನಿಯರಿಂಗ್ ಸೀಟು ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ಕರ್ನಾಟಕದ ಸುಮಾರು 18 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿತ್ತು. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಇತರ ಕಾಲೇಜುಗಳ ಮೇಲೆ ದಾಳಿ ನಡೆದಿತ್ತು.
ಗೃಹ ಸಚಿವ ಡಾ. ಜಿ ಪರಮೇಶ್ವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕಚೇರಿಗಳ ಮೇಲೆ ಮೇ 21 ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 am, Thu, 10 July 25








