ತೆರಿಗೆ ವಂಚನೆ ಪತ್ತೆಗೆ, ಮನೆ ಮನೆಗೆ ಖಾತಾ ತಲುಪಿಸಲು ಬರಲಿದೆ ಎಐ! ಬಿಬಿಎಂಪಿ ಮಹತ್ವದ ಕ್ರಮ

|

Updated on: Mar 25, 2025 | 10:11 AM

ಅಕ್ರಮ ಕಟ್ಟಡ ನಿರ್ಮಾಣಗಳನ್ನು ಪತ್ತೆಹಚ್ಚಲು ಮತ್ತು ಆಸ್ತಿ ತೆರಿಗೆ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸಲು ಬಿಬಿಎಂಪಿ ಮುಂದಾಗಿದೆ. ಎಐ ಮೂಲಕ ಅಕ್ರಮಗಳನ್ನು ಪತ್ತೆಹಚ್ಚಿ ತೆರಿಗೆ ವಸೂಲಿ ಮಾಡುವುದು ಹಾಗೂ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ. ಜತೆಗೆ ಏಪ್ರಿಲ್​ನಿಂದ ಮನೆ ಬಾಗಿಲಿಗೆ ಖಾತಾ ತಲುಪಿಸುವ ಯೋಜನೆ ಜಾರಿಯಾಗಲಿದೆ.

ತೆರಿಗೆ ವಂಚನೆ ಪತ್ತೆಗೆ, ಮನೆ ಮನೆಗೆ ಖಾತಾ ತಲುಪಿಸಲು ಬರಲಿದೆ ಎಐ! ಬಿಬಿಎಂಪಿ ಮಹತ್ವದ ಕ್ರಮ
ಬಿಬಿಎಂಪಿ
Follow us on

ಬೆಂಗಳೂರು, ಮಾರ್ಚ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈಗ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಮತ್ತು ಅಕ್ರಮ ಕಟ್ಟಡ ನಿರ್ಮಾಣಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸಲಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೋಮವಾರ ಘೋಷಿಸಿದ್ದಾರೆ. ಬೆಂಗಳೂರಿನ ಶಾಸಕರೊಂದಿಗೆ ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ಆಸ್ತಿ ಮಾಲೀಕರು ಕಾನೂನು ಅನುಮತಿಯಿಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದಾರೆ. ಅಂಥವರು ಸರಿಯಾಗಿ ತೆರಿಗೆಗಳನ್ನು ಸಹ ಪಾವತಿಸುತ್ತಿಲ್ಲ. ಅಂತಹ ಅಕ್ರಮಗಳನ್ನು ಗುರುತಿಸಲು ಮತ್ತು ಅಳೆಯಲು ನಾವು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತೇವೆ ಎಂದು ಹೇಳಿದ್ದಾರೆ.

ಸುಮಾರು 7 ಲಕ್ಷ ಆಸ್ತಿಗಳಿಗೆ ಆಸ್ತಿ ತೆರಿಗೆ ಪಾವತಿಸಲಾಗಿಲ್ಲ. ಅದರಲ್ಲಿ ಒಂದು ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿರುವುದಾಗಿ ‘ಎಎನ್​ಐ’ ವರದಿ ಮಾಡಿದೆ. ಉಳಿದವುಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕಾಗಿದೆ. ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಬಿಬಿಎಂಪಿಗೆ ಇರಲಿಲ್ಲ, ಆದರೆ ಕಳೆದ ವಾರ ಅದಕ್ಕೆ ಸಂಬಂಧಿಸಿದಂತೆ ಕಾನೂನನ್ನು ಅನುಮೋದಿಸಲಾಗಿದೆ. ಖಾಸಗಿ ಬಡಾವಣೆಗಳಲ್ಲಿನ ಖಾಸಗಿ ರಸ್ತೆಗಳನ್ನು ಸಹ ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲ ಆಸ್ತಿಗೂ ತೆರಿಗೆ ಪಾವತಿ ಕಡ್ಡಾಯ: ಡಿಕೆ ಶಿವಕುಮಾರ್

ಅಕ್ರಮ ಆಸ್ತಿಗಳ ಮಾಲೀಕರೊಂದಿಗೆ ಕೈಜೋಡಿಸಿದ ಬಿಬಿಎಂಪಿ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಲ್ಲಾ ಆಸ್ತಿಗೂ ತೆರಿಗೆ ಪಾವತಿಸಬೇಕು ಮತ್ತು ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
ಎಚ್ಚರ: ಬೆಕ್ಕುಗಳಿಗೆ ವಕ್ಕರಿಸಿದೆ ಮಾರಣಾಂತಿಕ ಎಫ್​ಪಿವಿ ವೈರಸ್
ಮೇಕೆದಾಟು: ಕರ್ನಾಟಕದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ತಮಿಳುನಾಡು
ಯುಗಾದಿ, ರಂಜಾನ್​ಗೆ ಊರಿಗೆ ಹೋಗುವವರಿಗೆ ಶಾಕ್: ಬಸ್ ಟಿಕೆಟ್ ದರ ಭಾರಿ ಏರಿಕೆ
ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ: ಪ್ರೋಟೋಕಾಲ್ ದುರ್ಬಳಕೆ ವರದಿ ಸಿದ್ದ

ಏಪ್ರಿಲ್​ನಿಂದ ಮನೆ ಬಾಗಿಲಿಗೆ ಖಾತಾ: ಡಿಕೆಶಿ

ಏಪ್ರಿಲ್​ನಿಂದ ಜನರ ಮನೆ ಬಾಗಿಲಿಗೆ ಖಾತಾ ತಲುಪಿಸುವ ಉಪಕ್ರಮವನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಎಲ್ಲಾ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ನಾವು ಆಯಾ ಕ್ಷೇತ್ರಗಳ ಶಾಸಕರ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಯುಗಾದಿ, ರಂಜಾನ್​ಗೆ ಊರಿಗೆ ಹೊರಡುವವರಿಗೆ ಶಾಕ್: ಬಸ್ ಟಿಕೆಟ್ ದರ ಭಾರಿ ಏರಿಕೆ, ಇಲ್ಲಿದೆ ವಿವರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಟ್ಟಾರೆಯಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವ 1.73 ಲಕ್ಷ ಸುಸ್ತಿದಾರರಿಂದ ಇರುವ 390 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Tue, 25 March 25