ಕನ್ನಡಿಗರಿಗೆ ಸಿಹಿ ಸುದ್ದಿ: ಬೆಂಗಳೂರು ವಿಮಾನ ನಿಲ್ದಾಣ ಮಾಹಿತಿ, ವಿಮಾನ ವೇಳಾಪಟ್ಟಿ ಕನ್ನಡದಲ್ಲಿ ಪ್ರಕಟ

| Updated By: ವಿವೇಕ ಬಿರಾದಾರ

Updated on: Apr 01, 2025 | 9:06 PM

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಅಧಿಕೃತ ವೆಬ್‌ಸೈಟ್ ಅನ್ನು ಕನ್ನಡದಲ್ಲೂ ಪರಿಚಯಿಸಿದೆ. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.ನೈಜ ಸಮಯದ ವಿಮಾನ ಮಾಹಿತಿ, ಬುಕಿಂಗ್, ಸಾರಿಗೆ ಆಯ್ಕೆಗಳು ಮತ್ತು ಇತರ ಪ್ರಮುಖ ವಿವರಗಳು ಕನ್ನಡದಲ್ಲಿ ಲಭ್ಯವಿದೆ. ಇದು ಪ್ರಯಾಣಿಕರಗೆ ಅನುಕೂಲವಾಗಲಿದೆ.

ಕನ್ನಡಿಗರಿಗೆ ಸಿಹಿ ಸುದ್ದಿ: ಬೆಂಗಳೂರು ವಿಮಾನ ನಿಲ್ದಾಣ ಮಾಹಿತಿ, ವಿಮಾನ ವೇಳಾಪಟ್ಟಿ ಕನ್ನಡದಲ್ಲಿ ಪ್ರಕಟ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Follow us on

ಬೆಂಗಳೂರು, ಏಪ್ರಿಲ್ 01: ಕನ್ನಡ ಭಾಷೆಗೆ ಆದ್ಯತೆ ನೀಡುವ ಜೊತೆಗೆ ಪ್ರಾದೇಶಿಕ, ಸಾಂಸ್ಕೃತಿಕ ಮೌಲ್ಯ ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಬೆಂಗಳೂರಿನ (Bengaluru) ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ಹೊಸದಾಗಿ ಪರಿಚಯಿಸಲಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಈ ಆಯ್ಕೆಯನ್ನು ಬಳಸುವ ಮೂಲಕ, ಸ್ಥಳೀಯ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಸುಲಭವಾಗಿ ತಮ್ಮದೇ ಭಾಷೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗೆ ಒಟ್ಟಾರೆ ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಹೊಂದಿದ್ದು, ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿದೆ ಎಂದಿದೆ.

ಏನೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ:

  • ಕನ್ನಡದಲ್ಲಿ ನೈಜ-ಸಮಯದ ವಿಮಾನಗಳ ಹಾರಾಟದ ಮಾಹಿತಿ, ನಿರ್ಗಮನ, ಆಗಮನ ಮತ್ತು ವಿಳಂಬಗಳ ಬಗ್ಗೆ ತಡೆರಹಿತ ಮಾಹಿತಿ ಲಭ್ಯವಾಗುತ್ತದೆ.
  • ಪ್ರಯಾಣಿಕರು ವಿಮಾನಗಳನ್ನು ಕಾಯ್ದಿರಿಸಲು, ಸಾರಿಗೆ ಆಯ್ಕೆ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳನ್ನು ತಿಳಿಯಲು ಅನುಕೂಲವಾಗಲಿದೆ.
  •  ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು, ಪ್ರಯಾಣಕ್ಕೆ ಬೇಕಾದ ಅನುಕೂಲತೆಯ ಮಾಹಿತಿಗಳು ಸೇರಿದಂತೆ ಹಲವು ವಿಚಾರಗಳು ಸ್ಥಳೀಯ ಭಾಷೆಯಲ್ಲಿ ದೊರೆಯಲಿದೆ.
  • ಸಾಮಾನ್ಯ ಪ್ರಶ್ನೆಗಳನ್ನು ಪರಿಹರಿಸುವ ಸಮಗ್ರ FAQ, ಪ್ರಯಾಣ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ಈ ನೂತನ ಉಪಕ್ರಮದ ಬಗ್ಗೆ ಪ್ರತಿಕ್ರಿಯಿಸಿದ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (BIAL) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರಿ ಮಾರಾರ್ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕೇವಲ ಸಾರಿಗೆ ಕೇಂದ್ರವಾಗಿರದೇ, ಸಾಕಷ್ಟು ಬೆಳೆದಿದೆ. ಇದೀಗ ಸ್ಥಳೀಯ ಭಾಷೆಯಲ್ಲೇ ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸುವ ಮೂಲಕ ನಮ್ಮ ಭಾಷಾ ಪರಂಪರೆಯ ಶ್ರೀಮಂತಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ
ದರ ಏರಿಕೆ: ಮೆಟ್ರೋ ಪ್ರಯಾಣಿಕರ ಪರ್ಯಾಯ ವ್ಯವಸ್ಥೆ, ಟ್ರಾಫಿಕ್​ ಸಮಸ್ಯೆ
ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ಯಾಕೆ?
ಇದೇ ತಿಂಗಳು ಬೆಂಗಳೂರಿಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು
ಜನವರಿಯಲ್ಲಿ ನಮ್ಮ ಮೆಟ್ರೋಗೆ ಬರಲಿವೆ ಎರಡು ಹೊಸ ರೈಲು

ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷಾ ಆಯ್ಕೆಯ ಪರಿಚಯವು ವಿಮಾನ ನಿಲ್ದಾಣದಲ್ಲಿ ಕನ್ನಡದ ಪರಿಸರವನ್ನು ವೃದ್ಧಿಸಲಿದೆ. ವಿಮಾನ ನಿಲ್ದಾಣದ ದೀರ್ಘಕಾಲದ ಪ್ರಯತ್ನದೊಂದಿಗೆ ಭಾಷಾ ಆಯ್ಕೆಯನ್ನು ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದಾದ್ಯಂತ ವಿಮಾನ ಮಾಹಿತಿ ಪ್ರದರ್ಶನ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆ ವ್ಯವಸ್ಥೆ, ಅಂಗಡಿ ಮತ್ತು ಮಳಿಗೆಗಳ ನಾಮಫಲಕಗಳಿಂದ ಹಿಡಿದ ಸಿಬ್ಬಂದಿಗಳವರೆಗೆ ಎಲ್ಲೆಡೆ ಕನ್ನಡವನ್ನು ವಿಮಾನ ನಿಲ್ದಾಣ ಅಳವಡಿಸಿಕೊಂಡಿದೆ. ಕರ್ನಾಟಕದ ಸಂಸ್ಕೃತಿ ಮತ್ತು ನೀತಿಗಳನ್ನು ಪ್ರತಿಬಿಂಬಿಸುವಂತೆ ವಿಮಾನ ನಿಲ್ದಾಣವನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್​ ವಜಾ

ಈ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಉಪಕ್ರಮವು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸಲು ಹಾಗೂ ಭಾಷಾ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಹೊಂದಿರುವ ಬದ್ಧತೆಯನ್ನು ಮತ್ತಷ್ಟು ವರ್ಧಿಸುತ್ತದೆ ಎಂದು ಹೇಳಿದೆ. ಹೆಚ್ಚಿನ ಮಾಹಿತಿಗಾಗಿ, https://www.bengaluruairport.com/kn/ ಕನ್ನಡ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ