Namma Metro: ವಿಮಾನ ನಿಲ್ದಾಣಕ್ಕೆ ರಸ್ತೆ ಜತೆಗೇ ಇರಲಿದೆ ಮೆಟ್ರೋ ಲೈನ್: 2026ಕ್ಕೆ ಪಿಂಕ್ ಲೈನ್ ಸಿದ್ಧ
Namma Metro Pink Line: ವಿಮಾನ ನಿಲ್ದಾಣದ ವರೆಗಿನ ನಮ್ಮ ಮೆಟ್ರೋ ಕಾಮಗಾರಿ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಭೂಸ್ವಾಧೀನ, ನಿರ್ಮಾಣ ಕಾಮಗಾರಿ, ವೆಚ್ಚ, ಕಾಮಗಾರಿ ಸಂದರ್ಭ ಸಂಚಾರ ದಟ್ಟಣೆ ತಡೆಗೆ ಕೈಗೊಂಡ ಮಾರ್ಗೋಪಾಯಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 9: ಕೆಆರ್ ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempe Gowda International Airport) ವರೆಗಿನ ಮೆಟ್ರೋ (Namma Metro) ಕಾಮಗಾರಿಯನ್ನು ಎರಡು ಹಂತಗಳಲ್ಲಿ ಮುಂದುವರಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಸಂಚಾರದಟ್ಟಣೆ ಗಮನದಲ್ಲಿಟ್ಟುಕೊಂಡು ಎಲ್ಲೆಲ್ಲಿ ಮೆಟ್ರೋ ಪಿಲ್ಲರ್ಗಳ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗುವುದು ಎಂದು ತಿಳಿಸಿದ ಅವರು, ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಪಿಂಕ್ ಲೈನ್ 2026ರ ವೇಳೆಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ ಎಂದರು. ಆದರೆ ಖಚಿತವಾದ ಡೆಡ್ ಲೈನ್ ನೀಡಿಲ್ಲ.
‘ಭದ್ರಾ’ ಹೆಸರಿನ ಸುರಂಗ ಕೊರೆಯುವ ಮಷೀನ್ (ಟನಲ್ ಬೋರಿಂಗ್ ಮೆಷಿನ್ ಅಥವಾ TBM) ವೆಂಕಟೇಶಪುರದಿಂದ ಕೆಜಿ ಹಳ್ಳಿಯವರೆಗೆ ಬರೋಬ್ಬರಿ 1186 ಮೀಟರ್ ಉದ್ದದ ಸುರಂಗ ಕೊರೆದು ಗುರುವಾರ ಹೊರ ಬಂದಿತ್ತು. ಇದೇ ಸಂದರ್ಭದಲ್ಲಿ ಮೆಟ್ರೋ ಕಾಮಗಾರಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಎಲ್ಲೆಲ್ಲಿ ಪಿಲ್ಲರ್ಗಳನ್ನು ಹಾಕಲಾಗಿಲ್ಲವೋ ಅಲ್ಲೆಲ್ಲಾ ಎರಡು ಹಂತಗಳಲ್ಲಿ ಪಿಲ್ಲರ್ ನಿರ್ಮಾಣ ಮಾಡಲು ಸೂಚಿಸಿದ್ದೇವೆ. ಆ ಕಡೆಗಳಲೆಲ್ಲಾ ಒಂದು ಕಡೆ ರಸ್ತೆಯನ್ನು ಬಳಸಿದರೆ ಮತ್ತೊಂದು ಕಡೆ ಪಿಲ್ಲರ್ ಕಾಮಗಾರಿ ನಡೆಯಲಿದೆ. ಇದರಿಂದ ಸಂಚಾರದಟ್ಟಣೆಯನ್ನು ನಿರ್ವಹಣೆ ಮಾಡಬಹುದು. ಫ್ಲೈ ಓವರ್ ವೆಚ್ಚವನ್ನು ಬಿಬಿಎಂಪಿ ಧರಿಸಿದರೆ ಮೆಟ್ರೋ ಸಂಬಂಧಿತ ವೆಚ್ಚವನ್ನು ಬಿಎಂಅರ್ಸಿಎಲ್ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಮೆಟ್ರೋಕ್ಕೆ 2024ರ ಗಡುವು ವಿಧಿಸಿದ್ದರ ಬಗ್ಗೆ ಪ್ರತಿಕ್ರಿಸಿದ ಅವರು, ಶೇಕಡ 98 ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ. ಶೇಕಡ 53 ರಷ್ಟು ನಿರ್ಮಾಣ ಕಾಮಗಾರಿಯು ಮುಗಿದಿದೆ. 17 ಸ್ಟೇಷನ್ಗಳ ಕಾಮಗಾರಿಯು ಮುಕ್ತಾಯವಾಗಿದೆ. ಹೊಸ ಮೆಟ್ರೋ ಲೈನ್ ಗಳ ಬಗ್ಗೆ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ತುಮಕೂರು, ಆನೇಕಲ್ ಹಾಗೂ ಬಿಡದಿ ಮಾರ್ಗಗಳಲ್ಲಿ ಮೆಟ್ರೋ ಲೈನ್ ವಿಸ್ತರಿಸುವ ಬಗ್ಗೆ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಬಿಎಂಅರ್ಸಿಎಲ್ಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೆಟ್ರೋ ಸುರಂಗ ಮಾರ್ಗ ಕೊರೆದು ವರ್ಷಕ್ಕೆ 8 ದಿನ ಬಾಕಿ ಇರುವಾಗಲೇ ಹೊರಬಂದ ಟಿಬಿಎಂ ಭದ್ರ
ವೆಂಕಟೇಶಪುರದಿಂದ ಕಾಡುಗೊಂಡನಹಳ್ಳಿ ನಿಲ್ದಾಣದ ವರೆಗಿನ ಸುರಂಗ ಮಾರ್ಗ ಕೊರೆಯಲು ಟಿಬಿಎಂ ಭದ್ರಾ 2023ರ ಫೆಬ್ರವರಿ 16ರಂದು ಕಾಮಗಾರಿ ಆರಂಭಿಸಿತ್ತು. ಒಂದು ವರ್ಷದ ನಂತರ, ಅಂದರೆ ಫೆಬ್ರವರಿ 8ರ ಗುರುವಾರ ಭದ್ರಾ, 1,185 ಮೀಟರ್ ಸುರಂಗ ಕೊರೆದು ಹೊರ ಬಂದಿದೆ. ಈ ಮೂಲಕ 20,992 ಮೀಟರ್ ಸುರಂಗ ಮಾರ್ಗದ ಪೈಕಿ 19,120 ಮೀಟರ್ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಂತಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ