
ಬೆಂಗಳೂರು, ನವೆಂಬರ್ 30: ಎಟಿಎಂ ವಾಹನವನ್ನ ಹೊತ್ತೊಯ್ದು, 7 ಕೋಟಿ ರೂ ದೋಚಿದ್ದ ಕೇಸ್ (Robbery Case) ಸಿಲಿಕಾನ್ ಸಿಟಿ ಪೊಲೀಸರ (bangaluru police) ನಿದ್ದೆ ಭಂಗ ಮಾಡಿತ್ತು. ಸತತ ಕಾರ್ಯಚರಣೆ ಬಳಿಕ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನಿರಂತರ ವಿಚಾರಣೆ ನಡೆಸಿದ್ದು, ಮತ್ತಷ್ಟು ಸಂಗತಿಗಳು ಬಯಲಾಗಿವೆ. ಅಂದು ರಾಬರ್ಸ್ 2 ಕೋಟಿ ರೂ. ಕದಿಯಲು ಹೋಗಿ 7 ಕೋಟಿ ರೂ. ಕದ್ದಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.
ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ರಾಬರಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ದರೋಡೆ ಮಾಡಲು 3 ತಿಂಗಳಿಂದ ಗ್ಯಾಂಗ್ ಸ್ಕೆಚ್ ಹಾಕಿತ್ತು. ಈ ಪೈಕಿ ಸಿಎಂಎಸ್ ವಾಹನದ ಮಾಜಿ ಉದ್ಯೋಗಿ ಕ್ಸೇವಿಯರ್ ಮಾಡಿದ್ದ ಮಸಲತ್ತು ಬಟಾಬಯಲಾಗಿದೆ. ಎಟಿಎಂ ವಾಹನದಲ್ಲಿ 7 ಕೋಟಿ ರೂ ಸಾಗಿಸುವುದು ಕಾನೂನು ಬಾಹಿರ. 5 ಕೋಟಿಗಿಂತ ಹೆಚ್ಚು ಹಣ ಸಾಗಿಸಲು ಅನುಮತಿ ಇಲ್ಲವಂತೆ. ಹೀಗಾಗಿ ಆ ಎಟಿಎಂ ವಾಹನದಲ್ಲಿ 2 ಕೋಟಿ ರೂ ಕದ್ದರೆ ಕೇಸ್ ಕೊಡಲ್ಲ ಎಂದು ಬಣ್ಣ ಬಣ್ಣದ ಮಾತನ್ನ ಹೇಳಿ ಕ್ಸೇವಿಯರ್ ದರೋಡೆ ಮಾಡಲು ಗ್ಯಾಂಗ್ ರೆಡಿ ಮಾಡಿದ್ದ.
ಇದನ್ನೂ ಓದಿ: ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ
ಆತನ ಮಾತಿನಂತೆ 2 ಕೋಟಿ ರೂ. ಮಾತ್ರ ರಾಬರಿ ಮಾಡಲು ಪ್ಲಾನ್ ಆಗಿತ್ತು. ಹಾಗೆ ಒಂದೊಂದು ಬಾಕ್ಸ್ನಲ್ಲಿ 50 ಲಕ್ಷ ರೂ. ಮಾತ್ರ ಇರುತ್ತದೆ. ಒಟ್ಟು ನಾಲ್ಕು ಬಾಕ್ಸ್ ರಾಬರಿ ಮಾಡಿದರೆ ಅಲ್ಲಿಗೆ 2 ಕೋಟಿ ರೂ ಆಗುತ್ತದೆ ಎಂದು ಗ್ಯಾಂಗ್ ನಂಬಿತ್ತು. ಅದರಂತೆ ಅಂದು ಎಟಿಎಂ ವಾಹನದಲ್ಲಿ 2 ಕೋಟಿ ರೂ. ರಾಬರಿಗೆ ಸ್ಕೆಚ್ ಹಾಕಿ ಸಿಎಎಂಎಸ್ ವ್ಯಾನ್ನಿಂದ 4 ಬಾಕ್ಸ್ಗಳನ್ನ ಮಾತ್ರ ಶಿಫ್ಟ್ ಮಾಡಿಕೊಂಡಿದ್ದರು. ಆದರೆ ದರೋಡೆಕೋರರು ಅಂದುಕೊಂಡಿದ್ದೇ ಒಂದು, ಆಗಿದ್ದು ಮಾತ್ರ ಇನ್ನೊಂದು.
ದರೋಡೆಕೋರರ ಗ್ಯಾಂಗ್ 2 ಕೋಟಿ ರೂ. ಅಂತಾ ತಿಳಿದು ಬರೋಬ್ಬರಿ 7 ಕೋಟಿ ರೂ ರಾಬರಿ ಮಾಡಿದ್ದರು. ಈ ಹಣವನ್ನ ದಾರಿಯಲ್ಲಿ ಚೀಲಗಳಿಗೆ ತುಂಬಿಕೊಂಡು ಬಾಕ್ಸ್ಗಳನ್ನ ಎಸದಿದ್ದರು. ಬಳಿಕ ಚಿತ್ತೂರಿನಲ್ಲಿ ಆರೋಪಿಗಳೆಲ್ಲಾ ಸ್ವಲ್ಪ ಹಂಚಿಕೊಂಡಿದ್ದಾರೆ. ಆ ವೇಳೆಯೂ ತಮ್ಮ ಬಳಿ 7 ಕೋಟಿ ರೂ. ಇದೆ ಅಂತ ಗೊತ್ತಿರಲಿಲ್ಲ. ಕೊನೆಗೆ ಕುಪ್ಪಂ ತಲುಪಿದ ಮೇಲೆ ಪಾಳು ಮನೆಯಲ್ಲಿ ಹಣ ಸುರಿದು ಲೆಕ್ಕ ಹಾಕಿದ್ದು, ರಾಬರಿಗೆ ಪ್ಲಾನ್ ಮಾಡಿದ್ದು, 2 ಕೋಟಿ ರೂ.ಗೆ ಮಾತ್ರ, ಆದರೆ ಸಿಕ್ಕಿರುವುದು 7 ಕೋಟಿ ರೂ ಅಂತಾ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?
7 ಕೋಟಿ ರೂ. ಬ್ಯಾಂಕ್ ಹಣ ಆಗಿರುವುದರಿಂದ ಪೊಲೀಸರ ಭಯ ಶುರುವಾಗಿದೆ. ಬಳಿಕ ಹಣವನ್ನು ನಿರ್ಜನ ಪ್ರದೇಶದಲ್ಲಿರುವ ಪಾಳು ಮನೆಯೊಂದರಲ್ಲಿ ಬಚ್ಚಿಟ್ಟು ಎಸ್ಕೇಪ್ ಆಗಿದ್ದಾರೆ. ಚೆನ್ನೈ, ಕುಪ್ಪಂ, ಹೈದರಾಬಾದ್ ಕಡೆಗೆ ದರೋಡೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ಸದ್ಯ 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, tv9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Sun, 30 November 25