ಬೆಂಗಳೂರು, ಆಗಸ್ಟ್ 9: ನೈಸ್ ರಸ್ತೆಯಲ್ಲಿ ಅತಿವೇಗದ ವಾಹನ ಚಾಲನೆ ಮಾಡುವವರನ್ನು ನಿಯಂತ್ರಿಸಲು ಬೆಂಗಳೂರು ಸಂಚಾರ ಪೊಲೀಸರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ನೈಸ್ ರಸ್ತೆಯಲ್ಲಿ ಓವರ್ ಸ್ಪೀಡ್ ಚಾಲನೆ ಮಾಡುವವರ ಮೇಲೆ ಕಣ್ಣಿಡಲು ‘ಲೇಸರ್ ಟ್ರ್ಯಾಕ್ ಗನ್’ ಅಳವಡಿಸಲಾಗಿದ್ದು, ಇದರ ಮೂಲಕ ಅತಿವೇಗದ ಚಾಲನೆ ಮಾಡಿದವರನ್ನು ಪತ್ತೆಹಚ್ಚಿ 1,000 ರೂ. ದಂಡ ವಿಧಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ‘ಲೇಸರ್ ಟ್ರ್ಯಾಕ್ ಗನ್’ ಅಳವಡಿಸಲಾಗಿದೆ.
ಲೇಸರ್ ಟ್ರ್ಯಾಕ್ ಗನ್ ಎಂಬುದು ವೇಹನಗಳು ಚಲಿಸುತ್ತಿರುವ ವೇಗವನ್ನು ಪತ್ತೆಹಚ್ಚುವ ಒಂದು ಸಾಧನ. ನೈಸ್ ರಸ್ತೆಯಲ್ಲಿ ಅಲ್ಲಲ್ಲಿ ಪ್ರಯಾಣಿಕರ ಅರಿವಿಗೆ ಬಾರದಂತೆ ಈ ಸಾಧನದೊಂದಿಗೆ ಸಂಚಾರ ಪೊಲೀಸರು ಇರಲಿದ್ದಾರೆ. ನಿಗದಿತ ಮಿತಿಗಿಂತ ವೇಗವಾಗಿ ವಾಹನ ಸಂಚರಿಸಿದರೆ ಲೇಸರ್ ಟ್ರ್ಯಾಕ್ ಗನ್ ಅದನ್ನು ಕ್ಯಾಪ್ಚರ್ ಮಾಡುತ್ತದೆ. ವಾಹನದ ನಂಬರ್ ಅನ್ನು ಈ ಯಂತ್ರ ಡಿಟೆಕ್ಟ್ ಮಾಡುತ್ತದೆ. ಲೇಸರ್ ಟ್ರ್ಯಾಕ್ ಗನ್ ಇರಿಸಿದ ಜಾಗದಿಂದ ಟೋಲ್ ಬಳಿಗೆ ವಾಹನದ ಮಾಹಿತಿ ಹೋಗುತ್ತದೆ. ವಾಹನದ ಫೋಟೊ ಹಾಗೂ ನಂಬರ್ ವಾಟ್ಸ್ಆ್ಯಪ್ ಮೂಲಕ ಟೋಲ್ ಬಳಿ ಇರುವ ಸಿಬ್ಬಂದಿಗೆ ರವಾನೆಯಾಗುತ್ತದೆ. ಟೋಲ್ ಬಳಿ ವಾಹನದ ವೇಗ ಕಡಿಮೆ ಆದಾಗ ವಾಹನ ತಡೆದು ಟ್ರಾಫಿಕ್ ಪೊಲೀಸರು ದಂಡ ಸ್ವೀಕರಿಸಲಿದ್ದಾರೆ.
ಕಳೆದ ಒಂದು ವಾರದಿಂದ ಲೇಸರ್ ಟ್ರ್ಯಾಕ್ ಗನ್ ಮೂಲಕ ಅತಿವೇಗದ ಚಾಲನೆ ಪತ್ತೆಹಚ್ಚಿ ದಂಡ ವಸೂಲಿ ಮಾಡಲಾಗುತ್ತಿದೆ. ಒಂದೊಂದು ಮಾದರಿಯ ವಾಹನಕ್ಕೆ ಒಂದೊಂದು ವೇಗದ ಮಿತಿ ನಿಗದಿಪಡಿಸಲಾಗಿದೆ. ಆ ವೇಗದ ಮಿತಿ ಮೀರಿ ಚಾಲನೆ ಮಾಡಿದರೆ ದಂಡ ಬೀಳಲಿದೆ. ಇಷ್ಟೇ ಅಲ್ಲದೆ, ನಿಗದಿತ ಟ್ರ್ಯಾಕ್ನಲ್ಲಿಯೇ ವಾಹನಗಳು ಸಂಚರಿಸಬೇಕು. ಟ್ರ್ಯಾಕ್ ದಾಟಿ ಬಂದರೂ ಫೈನ್ ಬೀಳುವುದು ಖಚಿತವಾಗಿದೆ.
8 ಜನಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ವಾಹನಗಳಿಗೆ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ. 8 ಜನರಿಗಿಂತ ಅಧಿಕ ಸಾಮರ್ಥ್ಯ ಇರುವ ವಾಹನ ವೇಗದ ಮಿತಿ 80 ಕಿಮೀ ಆಗಿದೆ.
ನೈಸ್ ರಸ್ತೆಯ ಬಲ ಭಾಗದಲ್ಲಿ ಕಾರುಗಳು ಸಂಚರಿಸಬೇಕು. ಬಲ ಭಾಗದಲ್ಲಿ ಸಂಚರಿಸುವ ಕಾರಿನ ವೇಗದ ಮಿತಿ ಗಂಟೆಗೆ 120 ಕಿ.ಮೀ ಇರಬೇಕು. 121 ಕಿಮೀ ಹಾಗೂ ಅದಕ್ಕಿಂತ ಹೆಚ್ಚು ವೇಗವಾಗಿ ಸಾಗಿದರೆ ದಂಡ ಬೀಳಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಯಾವ ನಂಬರ್ಗೆ ಎಷ್ಟು ಹಣ? ಇಲ್ಲಿದೆ ಪಟ್ಟಿ
ರಸ್ತೆಯ ಎಡಭಾಗದ ಟ್ರ್ಯಾಕ್ನಲ್ಲಿ ಬೈಕ್ ಹಾಗೂ ಗೂಡ್ಸ್ ವಾಹನಗಳು ಸಂಚರಿಸಬೇಕು. ಈ ವಾಹನಗಳ ವೇಗದ ಮಿತಿ ಗಂಟೆಗೆ 80 ಕಿಮೀ ಆಗಿದೆ. 81 ಕಿಮೀ ಹಾಗೂ ಅಧಿಕ ವೇಗದಲ್ಲಿ ಚಾಲನೆ ಮಾಡಿದರೆ ದಂಡ ತೆರಬೇಕಾಗಲಿದೆ. ಲೇಸರ್ ಟ್ರ್ಯಾಕ್ ಗನ್ ಸಹಾಯದಿಂದ ದಿನಕ್ಕೆ 30 ರಿಂದ 35 ಪ್ರಕರಣಗಳು ದಾಖಲಾಗುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 am, Fri, 9 August 24