3 ಮತ್ತು 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ ಸ್ಕಾಲರ್ಶಿಪ್; ಭಾರಿ ಪ್ರತಿಭಟನೆ
ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಬರಿದಾಗಿದೆಯಾ? ಇಂಥದೊಂದು ಅನುಮಾನ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಮೂಡಿಬಂದಿದೆ. ಸ್ಕಾಲರ್ಶಿಪ್ ಕೊಡಿ ಎಂದು ಎಂಬಿಬಿಎಸ್ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. 2692 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆ ಭರ್ತಿ ಮಾಡುವಂತೆಯೂ ಆಗ್ರಹಿಸಲಾಗಿದೆ.
ಬೆಂಗಳೂರು, ಆಗಸ್ಟ್ 9: ಗ್ಯಾರಂಟಿ ಭಾಗ್ಯಗಳ ಬೆನ್ನಲ್ಲೇ ಸರ್ಕಾರದ ಬೊಕ್ಕಸ ಖಾಲಿ ಆಗಿದೆಯಾ ಎಂಬ ಚರ್ಚೆ ಎಲ್ಲ ಕಡೆಯೂ ನಡೆಯುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಅನುದಾನದ ಕಡಿತಗಳು ವರದಿಯಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಯುವಿಸಿಇ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಕೊಡಿ ಎಂದು ಬೀದಿಗಿಳಿದಿದ್ದಾರೆ.
ವರ್ಷದಿಂದ ಬಿಡುಗಡೆಯಾಗಿಲ್ಲ ಸ್ಕಾಲರ್ಶಿಪ್
ರಾಜ್ಯದೆಲ್ಲೆಡೆ ಮೂರು ಮತ್ತು ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಕ್ಕಿಲ್ಲ. ತಾಂತ್ರಿಕ ದೋಷದ ನೆಪಹೇಳಿ ಸರ್ಕಾರ ಕಳೆದೊಂದು ವರ್ಷದಿಂದ ನಯಾಪೈಸೆ ಬಿಡುಗಡೆ ಮಾಡಿಲ್ಲ. ಬೆಂಗಳೂರಿನ ಬಿಎಂಸುಆರ್ಐ, ಅಟಲ್ ಬಿಹಾರಿ ವಾಜಪೇಯಿ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಸೇರಿ ಹಲವು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ.
ವಿದ್ಯಾರ್ಥಿ ವೇತನ ಬಿಡುಗಡೆ ಮಾಡದ ಸರ್ಕಾರ ಅತ್ತ ಖಾಲಿ ಹುದ್ದೆಗಳ ನೇಮಕಾತಿ ಕೂಡ ನಡೆಸುತ್ತಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನೇ ದಿನೇ ಕಳಪೆ ಆಹಾರಗಳ ಸೇವನೆ ಜನರ ಜೀವ ಹಿಂಡುತ್ತಿದೆ. ಇಂತಹ ಹೊತ್ತಿನಲ್ಲಿ ಪ್ರಮುಖ ಪಾತ್ರ ವಹಿಸುವ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳು ಕೂಡ ಭರ್ತಿ ಆಗಿಲ್ಲ. ಸುಮಾರು 2692 ಹುದ್ದೆಗಳು ಖಾಲಿ ಇವೆ. ಈ ಹಿನ್ನೆಲೆಯಲ್ಲಿ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಉದ್ಯೋಗಾಂಕ್ಷಿಗಳು ಫ್ರೀಡಂ ಪಾರ್ಕ್ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್; ಹೋಟೆಲ್, ರೆಸ್ಟೋರೆಂಟ್ ರೀತಿ ಆರ್ಡರ್ ಮಾಡುವ ವ್ಯವಸ್ಥೆ
ಅನುದಾನ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣವೇ ಇಲ್ಲ. ಹೀಗಾಗಿ ಪೋರ್ಟಲ್ ಓಪನ್ ಮಾಡದೇ ತಾಂತ್ರಿಕ ದೋಷ ಎಂದು ನಾಟಕ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ