Bird Flu: ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ; ಪೌಲ್ಟ್ರಿ ಫಾರಂ ಬಂದ್!

ಬೆಂಗಳೂರಿನ ಹೆಸರಘಟ್ಟದಲ್ಲಿ H5N1 ಹಕ್ಕಿ ಜ್ವರ ಪತ್ತೆಯಾಗಿದ್ದು, ರಾಜ್ಯದಲ್ಲಿ ಆತಂಕ ಹೆಚ್ಚಿದೆ. ಹೆಚ್ಚಿನ ತಾಪಮಾನದಲ್ಲಿ ವೇಗವಾಗಿ ಹರಡುವ ಈ ವೈರಸ್ ಮನುಷ್ಯರಿಗೂ ಹರಡಬಹುದಾಗಿದೆ. ಸೋಂಕಿತ ಕೋಳಿ ಫಾರಂ ಮುಚ್ಚಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ಸಧ್ಯಕ್ಕೆ ಫಾರಂನ ನೌಕರರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸಾರ್ವಜನಿಕರು ಸ್ವಚ್ಛತೆ ಕಾಪಾಡುವಂತೆ ಹೇಳಲಾಗಿದೆ.

Bird Flu: ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ; ಪೌಲ್ಟ್ರಿ ಫಾರಂ ಬಂದ್!
ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ

Updated on: Apr 17, 2026 | 12:47 PM

ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಹಕ್ಕಿ ಜ್ವರದ (Bird Flu) ಆತಂಕ ಹೆಚ್ಚಾಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ನಡೆಸಿದ ತಪಾಸಣೆಯ ವೇಳೆ ಕೋಳಿಗಳಲ್ಲಿ ಈ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಈ ಪ್ರದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ಆಗುತ್ತಿದ್ದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಠಿಣಗೊಳಿಸಲಾಗಿದೆ.

ತಾಪಮಾನ ಹೆಚ್ಚಾದಂತೆ ವೇಗವಾಗಿ ಹರಡುತ್ತೆ ವೈರಸ್!

ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಲ್ಲಿಯೂ ಕಂಡು ಬರುತ್ತದೆ. ಈಗ ಇದೇ ವೈರಸ್ ನಗರದಲ್ಲಿ ಕಂಡುಬರುತ್ತಿದ್ದು, ಪೌಲ್ಟ್ರಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಕೋಳಿ ಸಾಕಾಣಿಕೆದಾರರನ್ನು ವೈದ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ. ಸುತ್ತಮುತ್ತಲಿನ ಕೋಳಿ ಶೆಡ್‌ಗಳಲ್ಲೂ ತಪಾಸಣೆ ನಡೆಸುವಂತೆ ಪಶುವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಎಚ್ಚರಿಕಾ ನೋಟಿಸ್ ನೀಡಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರಗಳು ಹಾಗೂ ಕೋಳಿ ಅಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಯುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ ಹಕ್ಕಿ ಜ್ವರ ಮನುಷ್ಯರಿಗೂ ತಗುಲಬಹುದು; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

H5N1 ರೋಗ ಲಕ್ಷಣಗಳು ಏನು?

ಮಾನವರಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಬೇರೆ ಬೇರೆ ರೀತಿ ಇರುತ್ತವೆ. ಉಸಿರಾಟದಲ್ಲಿ ತೊಂದರೆ ಮತ್ತು ಜ್ವರವೂ ಈ ರೋಗದ ಲಕ್ಷಣವಾಗಿದೆ. ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ (ಕಾಂಜಂಕ್ಟಿವಿಟಿಸ್), ಸೌಮ್ಯ ಜ್ವರ, ಕೆಮ್ಮು, ಗಂಟಲು ನೋವು, ಸ್ನಾಯು ಅಥವಾ ದೇಹದ ನೋವು ತಲೆನೋವು , ಆಯಾಸ ಇವೆಲ್ಲವೂ ಮಾನವರಲ್ಲಿ ಕಂಡುಬರುವ ರೋಗದ ಲಕ್ಷಣವಾಗಿದ್ದು, ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ವೈದ್ಯರು ಸೂಚಿಸಿದ್ದಾರೆ.

ಮುಂಜಾಗ್ರತಾ ಕ್ರಮಗಳೇನು?

ಇದು ಮನುಷ್ಯರಿಗೂ ಹರಡಬಹುದಾದ್ದರಿಂದ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಸೋಂಕಿತ ಹಕ್ಕಿಗಳನ್ನು ಸ್ಪರ್ಶಿಸಬಾರದು. ಆಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಹಸಿ ಮೊಟ್ಟೆ ಮತ್ತು ಸರಿಯಾಗಿ ಬೇಯಿಸದ ಮಾಂಸವನ್ನು ತಿನ್ನಬಾರದು. ಕೈಗಳನ್ನು ನಿಯಮಿತವಾಗಿ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಸುರಕ್ಷಿತ ಕ್ರಮಗಳಾಗಿವೆ.

ವರದಿ: ಮಂಜುನಾಥ್,ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 am, Fri, 17 April 26

Follow Us