ಬೆಂಗಳೂರು: ಮೆಟ್ರೋ ರೈಲಿನಲ್ಲಿ (Metro Train) ಮದ್ಯದ ಬಾಟಲಿಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅವಕಾಶ ನೀಡುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ. ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಎರಡು ಮದ್ಯದ ಸೀಲ್ಡ್ ಬಾಟಲಿಗಳನ್ನು ಸಾಗಿಸಲು ಅನುಮತಿ ನೀಡಿದ ನಂತರ ಬಿಎಂಆರ್‌ಸಿಎಲ್ ಕೂಡ ಮೆಟ್ರೋ ನಿಲ್ದಾಣದೊಳಗೆ ಪ್ರಯಾಣಿಕರಿಗೆ ಮದ್ಯವನ್ನು ಸಾಗಿಸಲು ಅವಕಾಶ ಕಲ್ಪಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಮೆಟ್ರೋ ರೈಲಿನಲ್ಲಿ ಮದ್ಯವನ್ನು ಸಾಗಿಸಲು ಪ್ರಯಾಣಿಕರಿಗೆ ದೆಹಲಿ ಮೆಟ್ರೋ ಇತ್ತೀಚೆಗೆ ಅನುಮತಿ ನೀಡಿದೆ. ಆ ಕುರಿತು ಅಧ್ಯಯನ ಮಾಡಿದ ನಂತರ ಪ್ರಯಾಣಿಕರಿಗೆ ಮದ್ಯವನ್ನು ಸಾಗಿಸಲು ಅನುಮತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ‘ಟೈಮ್ಸ್ ಆಫ್ ಇಂಡಿಯಾ’ಗೆ ತಿಳಿಸಿದ್ದಾರೆ.
ಪ್ರಸ್ತುತ, ಪ್ರಯಾಣಿಕರು ಮೆಟ್ರೋ ನಿಲ್ದಾಣದ ಒಳಗೆ ಮದ್ಯದ ಬಾಟಲಿಗಳನ್ನು ಕೊಂಡೊಯ್ಯುವಂತಿಲ್ಲ. ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಸೇವಿಸಿ ಇತರರಿಗೆ ತೊಂದರೆ ಉಂಟುಮಾಡುವ ಕಾರಣ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ದೆಹಲಿ ಮೆಟ್ರೋ ಕೆಲವು ಷರತ್ತುಗಳೊಂದಿಗೆ ಮೆಟ್ರೋ ರೈಲಿನ ಒಳಗೆ ಎರಡು ಸೀಲ್ಡ್ ಮದ್ಯದ ಬಾಟಲಿಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅನುಮತಿ ನೀಡಿದೆ. ನಾವು ಆ ಷರತ್ತುಗಳನ್ನು ಅಧ್ಯಯನ ಮಾಡುತ್ತೇವೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತೇವೆ ”ಎಂದು ಪರ್ವೇಜ್ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ತಿಳಿಸಿದ್ದಾರೆ.
ಮೆಟ್ರೋ ಒಳಗೆ ಮದ್ಯದ ಬಾಟಲಿಗಳನ್ನು ಸಾಗಿಸಲು ಬಿಎಂಆರ್‌ಸಿಎಲ್ ಈ ಹಿಂದೆ ಪ್ರಯಾಣಿಕರಿಗೆ ಅನುಮತಿ ನೀಡಿತ್ತು. ಮೆಟ್ರೋ ನಿಲ್ದಾಣದ ರೆಸ್ಟ್ ರೂಂನಲ್ಲಿ ಪ್ರಯಾಣಿಕರೊಬ್ಬರು ಮದ್ಯ ಸೇವಿಸುತ್ತಿರುವುದು ಕಂಡುಬಂದ ನಂತರ 2019 ರಲ್ಲಿ ಬಿಎಂಆರ್‌ಸಿಎಲ್ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಮೆಟ್ರೋ ನಿಲ್ದಾಣಗಳಲ್ಲಿ ಮದ್ಯವನ್ನು ನಿಷೇಧಿಸಲು ಮತ್ತೊಂದು ಕಾರಣವೆಂದರೆ, ಅದು ಶೀಘ್ರ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳ ವ್ಯಾಪ್ತಿಯಲ್ಲಿ ಬರುವುದು.
ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೂಡ ಮದ್ಯದ ಬಾಟಲಿಗಳನ್ನು ಸಾಗಿಸುವಂತಿಲ್ಲ.
ಇದನ್ನೂ ಓದಿ: ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನಿಂದ ಬಿಎಂಟಿಸಿ ಬಸ್ ಕಾರ್ಯಾರಂಭ
ದೆಹಲಿ ಮೆಟ್ರೋ ಇತ್ತೀಚೆಗೆ ಪ್ರಯಾಣದ ಸಮಯದಲ್ಲಿ ಮೆಟ್ರೋದೊಳಗೆ ಎರಡು ಸೀಲ್ ಮಾಡಿದ ಬಾಟಲಿಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಮೆಟ್ರೋ ಆವರಣದಲ್ಲಿ ಪ್ರಯಾಣಿಕರು ಮದ್ಯ ಸೇವಿಸುವಂತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ