ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ಅತ್ಯಾಚಾರ, ಬ್ಲ್ಯಾಕ್ ಮೇಲ್ ಆರೋಪ: ಉದ್ಯಮಿ ಅರೆಸ್ಟ್​​

ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಉದ್ಯಮಿಯೋರ್ವನನ್ನುಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮದುವೆಯ ಆಮಿಷವೊಡ್ಡಿ ಪರಿಚಯ ಬೆಳೆಸಿದ್ದ ಆರೋಪಿ ಅತ್ಯಾಚಾರ ಎಸಗಿ, ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ. ಈತನ ಮೇಲೆ ಹಿಂದೆಯೂ ಹಲವು ಆರೋಪಗಳಿದ್ದು, ಇತರ ಅಧಿಕಾರಿಗಳಿಗೂ ಅನ್ಯಾಯ ಮಾಡಿರುವ ಶಂಕೆ ಇದೆ. ಹೀಗಾಗಿ ನೊಂದವರು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ಅತ್ಯಾಚಾರ, ಬ್ಲ್ಯಾಕ್ ಮೇಲ್ ಆರೋಪ: ಉದ್ಯಮಿ ಅರೆಸ್ಟ್​​
ಬಂಧಿತ ಆರೋಪಿ
Image Credit source: Tv9 Kannada
Edited By:

Updated on: Apr 05, 2026 | 7:26 AM

ಬೆಂಗಳೂರು, ಏಪ್ರಿಲ್​​ 05: ಮಹಿಳಾ ಕಸ್ಟಮ್ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮತ್ತು ಅತ್ಯಾಚಾರ ಆರೋಪ ಸಂಬಂಧ ಎಂ.ಕೃಪಲಾನಿ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಅಧಿಕಾರಿಗೆ ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಹೇಳಿದಂತೆ ಕೇಳದಿದ್ದರೆ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ಕೃಪಲಾನಿ ಕಿರುಕುಳಕ್ಕೆ ಬೇಸತ್ತು ಕೊನೆಗೂ ಈ ಬಗ್ಗೆ ಮಹಿಳಾ ಅಧಿಕಾರಿ ದೂರು ನೀಡಿದ್ದು, ಯಲಹಂಕ ಠಾಣೆಯಲ್ಲಿ ಈತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ಬಳಿಕ ಇಂದಿರಾನಗರ ಪೊಲೀಸ್ ಠಾಣೆಗೆ ಕೇಸ್​​ ವರ್ಗಾವಣೆಗೊಂಡಿತ್ತು. ಈ ಬಗ್ಗೆ ತನಿಖೆಗೆ ಪುಲಕೇಶಿನಗರ ಎಸಿಪಿ ಹಾಗೂ ಪಿಐಗೆ ಅಧಿಕಾರಿಗಳು ಸೂಚಿಸಿದ್ದರು. ಆ ಹಿನ್ನೆಲೆ ಆರೋಪಿ ಕೃಪಲಾನಿಯನ್ನು ಪೊಲೀಸರ ತಂಡವೀಗ ಬಂಧಿಸಿದೆ.

ಅತ್ಯಾಚಾರ ಅಲ್ಲದೇ ಆರೋಪಿ ಮೇಲೆ ಹಲವು ಗಂಭೀರ ಆರೋಪಗಳನ್ನು ಮಹಿಳಾ ಅಧಿಕಾರಿ ಮಾಡಿದ್ದು, ಎಲೆಕ್ಟ್ರಾನಿಕ್ ಬ್ಯುಸಿನೆಸ್ ನಡೆಸುತ್ತಿದ್ದ ಕೃಪಲಾನಿ ಕಸ್ಟಮ್ ಕಣ್ತಪ್ಪಿಸಿ ಸಾಕಷ್ಟು ವ್ಯವಹಾರ ನಡೆಸ್ತಿದ್ದ ಆರೋಪ ಕೇಳಿಬಂದಿದೆ. ಈತನಿಗೆ 9 ವರ್ಷದ ಹಿಂದೆ ಮಹಿಳಾ ಕಸ್ಟಮ್ ಅಧಿಕಾರಿ ಪರಿಚಯವಾಗಿದ್ದು, ಆಕೆ ಜೊತೆಗೆ ಪ್ರೀತಿ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ. ಅಲ್ಲದೆ ಮದುವೆ ಆಮೀಷವೊಡ್ಡಿ ಕೆಲಸದ ಕೆಲ ಲೂಪ್ ಹೋಲ್ ತಿಳಿದಿದ್ದ. ಆಕೆ ಬಳಸಿಕೊಂಡು ಕೆಲ ಕಸ್ಟಮ್ ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹಣ ಕೂಡ ಪಡೆದಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪೊಲೀಸ್ ಕ್ವಾಟ್ರಸ್ ಜಾಗಕ್ಕೆ ಸ್ಕೆಚ್ ಹಾಕಿದ್ದ ಭೂಗಳ್ಳರು ಅಂದರ್; ಮೂವರು ಅರೆಸ್ಟ್​​

ಈ ಹಿಂದೆ ತನ್ನ ಮಗ ನಾಪತ್ತೆಯಾಗಿದ್ದಾನೆಂದು ಕೃಪಲಾನಿ ತಾಯಿ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು. ಆದರೆ ಕೃಪಲಾನಿ ಉದ್ದೇಶ ಪೂರ್ವಕವಾಗಿ ಹೊಟೆಲ್​ನಲ್ಲಿ ಅಡಗಿರೋದು ಈ ವೇಳೆ ಪತ್ತೆ ಆಗಿತ್ತು. ಹೀಗಾಗಿ ಈ ವೇಳೆ ಕೃಪಲಾನಿಗೆ ಕೋರ್ಟ್ ಎರಡು ಲಕ್ಷ ರೂ. ದಂಡ ಕೂಡ ವಿಧಿಸಿತ್ತು. ಇಷ್ಟು ಸಾಲದ್ದಕ್ಕೆ ದಶಕದ ಹಿಂದೆ ಕುಡಿದು ಮಹಿಳಾ ಅಧಿಕಾರಿಗಳ ಜತೆ ಅಸಭ್ಯ ವರ್ತನೆ ಆರೋಪವೂ ಈತನಮೇಲಿದೆ. ಕೃಪಲಾನಿ ಜಾಲಕ್ಕೆ ಸಿಲುಕಿ ಹಲವು ಕಸ್ಟಮ್ಸ್ ಅಧಿಕಾರಿಗಳು ನರಳಿದ್ದಾರೆ ಎನ್ನಲಾಗಿದ್ದು, ಆ ಕಾರಣ ಈತನಿಂದ ಅನ್ಯಾಯವಾಗಿದ್ರೆ ದೂರು ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us