ಬೆಂಗಳೂರು ಸೆಂಟ್ರಲ್: ಪಿಸಿ ಮೋಹನ್ 4ನೇ ಗೆಲುವು ತಡೆಗೆ ಮನ್ಸೂರ್ ಅಲಿ ಖಾನ್ ‘ಗ್ಯಾರಂಟಿ’ ಅಸ್ತ್ರ
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿಸಿ ಮೋಹನ್, ಕಾಂಗ್ರೆಸ್ನಿಂದ ಮನ್ಸೂರ್ ಅಲಿ ಖಾನ್ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಹಿನ್ನೆಲೆ, ಈ ಹಿಂದಿನ ಫಲಿತಾಂಶಗಳು, ಅಭ್ಯರ್ಥಿಗಳ ಬಲಾಬಲ, ಮತದಾರರ ಅಭಿಪ್ರಾಯ, ಗೆಲುವಿನ ಲೆಕ್ಕಾಚಾರ ಸೇರಿದಂತೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 15: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರ ‘ಬೆಂಗಳೂರು ಸೆಂಟ್ರಲ್’ನಲ್ಲಿ (Bengaluru Central Lok sabha constituency) ಹಾಲಿ ಬಿಜೆಪಿ ಸಂಸದ ಪಿಸಿ ಮೋಹನ್ (PC Mohan) ಮತ್ತು ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ (Mansoor Ali Khan) ನಡುವೆ ಪೈಪೋಟಿ ಏರ್ಪಟ್ಟಿದೆ. ಮೋಹನ್ ಸತತ ನಾಲ್ಕನೇ ಗೆಲುವಿನ ಗುರಿಯಲ್ಲಿದ್ದರೆ, ಖಾನ್ ಗೆಲುವಿಗಾಗಿ ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಅವಲಂಬಿಸಿದ್ದಾರೆ. ಈ ಕ್ಷೇತ್ರ ಪೂರ್ವದ ಮಹದೇವಪುರದಿಂದ ಪಶ್ಚಿಮದ ರಾಜಾಜಿನಗರದವರೆಗೆ ವ್ಯಾಪಿಸಿದೆ.
ಹೇಗಿತ್ತು 2019ರ ಬಲಾಬಲ?
2019 ರ ಲೋಕಸಭೆ ಚುನಾವಣೆಯಲ್ಲಿ ನಡೆದಿದ್ದ ತ್ರಿಕೋನ ಪೈಪೋಟಿಯಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಟ ಪ್ರಕಾಶ್ ರಾಜ್ ಅವರನ್ನು ಮೋಹನ್ 70,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿದ್ದರು.
ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ
ಬೆಂಗಳೂರು ಸೆಂಟ್ರಲ್‌ನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಸಿವಿ ರಾಮನ್ ನಗರ, ರಾಜಾಜಿನಗರ, ಮಹದೇವಪುರ ಹೊರತುಪಡಿಸಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಖಾನ್ ಪರವಾಗಿ ಕೆಲಸ ಮಾಡಲಿದೆ. ಆದರೆ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೊರತುಪಡಿಸಿ, ಪಕ್ಷದ ಹಲವು ಮುಖಂಡರು ಖಾನ್ ನಾಮಪತ್ರ ಸಲ್ಲಿಸುವಾಗ ಗೈರಾಗಿದ್ದರು. ಇದು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿತ್ತು. ಅಲ್ಲದೆ, ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್‌ಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು ಎನ್ನಲಾಗಿತ್ತು. ಟಿಕೆಟ್ ಕೈತಪ್ಪಿದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ಪಿಸಿ ಮೋಹನ್ ಮತ್ತು ಖಾನ್ ಇಬ್ಬರೂ ರೋಡ್‌ಶೋಗಳನ್ನು ಮಾಡುತ್ತಿದ್ದಾರೆ. ಉದ್ಯಾನವನಗಳಿಗೆ ಬೆಳಗ್ಗಿನ ವಾಕ್‌ಗೆ ಹೋಗುತ್ತಾರೆ. ಬೀದಿಗಳಲ್ಲಿ ಜನರೊಂದಿಗೆ ಬೆರೆಯುತ್ತಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳನ್ನು ಭೇಟಿ ಮಾಡುತ್ತಿದ್ದಾರೆ ಮತ್ತು ಕ್ಷೇತ್ರದಲ್ಲಿ ಮತ ಯಾಚಿಸಲು ಮಠ-ಮಂದಿರಗಳಿಗೂ ಭೇಟಿ ನೀಡುತ್ತಿದ್ದಾರೆ.
ಈ ಕ್ಷೇತ್ರವು ವೈವಿಧ್ಯಮಯವಾಗಿದ್ದು ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ತಮಿಳು ಮತ್ತು ಇತರ ಭಾಷೆಗಳ ಗಮನಾರ್ಹ ಜನಸಂಖ್ಯೆಯ ನೆಲೆಯಾಗಿದೆ.
ಪಿಸಿ ಮೋಹನ್ ಬಲವೇನು?
ಪಿಸಿ ಮೋಹನ್ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನಗಳಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಅನೇಕ ಉಪಕ್ರಮಗಳನ್ನು ಜಾರಿಗೆ ತರಲು ಶ್ರಮಿಸುತ್ತಿದ್ದಾರೆ. ನಮ್ಮ ಮೆಟ್ರೋ ಮತ್ತು ಸಬ್ ಅರ್ಬನ್ ರೈಲಿನಂತಹ ಯೋಜನೆಗಳನ್ನು ಪ್ರತಿಪಾದಿಸುತ್ತಿದ್ದಾರೆ. ರೈಲ್ವೆ ನಿಲ್ದಾಣಗಳು ಮತ್ತು ಹೆದ್ದಾರಿಗಳಲ್ಲಿ ಉತ್ತಮ ಸೌಕರ್ಯಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ಬಸ್‌ಗಳು, ಸ್ಕೈವಾಕ್‌ಗಳು ಮತ್ತು ಫ್ಲೈಓವರ್‌ಗಳೊಂದಿಗೆ ಆಧುನಿಕ ಬೆಂಗಳೂರನ್ನು ನಿರ್ಮಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಮನ್ಸೂರ್ ಅಲಿ ಖಾನ್ಗೆ ‘ಗ್ಯಾರಂಟಿ’ ಬಲ
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಉಚಿತ ಗ್ಯಾರಂಟಿಗಳ ಭರವಸೆಯನ್ನು ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಅವೆಲ್ಲವನ್ನೂ ಈಡೇರಿಸಿದೆ. ಇಷ್ಟೇ ಅಲ್ಲದೆ, ಪರಿಸರ ಸ್ನೇಹಿ ಕ್ರಮಗಳ ಮೂಲಕ ಬೆಂಗಳೂರನ್ನು ಸುಸ್ಥಿರ ನಗರವನ್ನಾಗಿ ಮಾಡಲು ಶ್ರಮಿಸುವುದಾಗಿ ಖಾನ್ ಮತದಾರರಿಗೆ ಹೇಳುತ್ತಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ನಗರದ ನೀರಿನ ಸಮಸ್ಯೆ ನೀಗಿಸುವುದು ಸಲುಭವಾಗಲಿದೆ ಎಂದು ಅವರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ನೆರವಾದೀತೇ ಕುಮಾರಸ್ವಾಮಿ ಪ್ರಭಾವ? ಬಲಾಬಲ ಲೆಕ್ಕಾಚಾರ ಇಲ್ಲಿದೆ
ಪ್ರಮುಖ ಚರ್ಚಾ ವಿಷಯಗಳೇನು?
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯವು ಪ್ರಮುಖ ಸಮಸ್ಯೆಗಳಾಗಿದ್ದು, ಚುನಾವಣೆಯ ಚರ್ಚಾ ವಿಷಯಗಳೂ ಆಗಿವೆ. ಈ ಸಮಸ್ಯೆಗಳಿಗೆ ಕಡಿವಾಣ ಹಾಕಲು ಶಾಸಕ ಜಮೀರ್ ಆಗಲಿ, ಸಂಸದ ಮೋಹನ್ ಆಗಲಿ ತಲೆ ಕೆಡಿಸಿಕೊಂಡಿಲ್ಲ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವ್ಯಕ್ತಿಯೊಬ್ಬರು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಉಲ್ಲೇಖಿಸಿದೆ. ಅನೇಕ ಯುವಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದೂ ಕ್ಷೇತ್ರದ ಮತಾದರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಗೆಲುವು ಸುಲಭವೇ? ಕೈ, ಕಮಲ ಬಲಾಬಲ ಹೀಗಿದೆ
ಕ್ಷೇತ್ರದಲ್ಲಿನ ಕಳಪೆ ಸಾರ್ವಜನಿಕ ಮೂಲಸೌಕರ್ಯಗಳು, ಸಂಚಾರ ದಟ್ಟಣೆ ಬಗ್ಗೆಯೂ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳಬೇಕಿರುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ