ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?: ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ

GBA Meeting: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಹಾಗೂ ಗಿಡ ನೆಡುವ ಯೋಜನೆ ಸಂಬಂಧ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಕಿ-ಅಂಶಗಳಿಲ್ಲದೆ ಬಂದ ಅಧಿಕಾರಿಗಳ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ? ಎಂದು ಆಫೀಸರ್​​ಗಳ ಅಸಂಬದ್ಧ ಉತ್ತರಕ್ಕೆ ಕಿಡಿ ಕಾರಿರುವ ಪ್ರಸಂಗ ನಡೆದಿದೆ.

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?: ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ
Image Credit source: Krishna Byre Gowda Facebook
Edited By:

Updated on: Jun 30, 2026 | 2:33 PM

ಮುಖ್ಯಾಂಶಗಳು

  • ಸಚಿವರ ಸಭೆಗೆ ಕನಿಷ್ಠ ಅಂಕಿ-ಅಂಶವೂ ಇಲ್ಲದೆ ಬಂದಿದ್ದೀರ?
  • GBA ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೃಷ್ಣಭೈರೇಗೌಡ ಗರಂ
  • ಅಧಿಕಾರಿಗಳ ಅಸಂಬದ್ಧ ಉತ್ತರಕ್ಕೂ ಸಚಿವರ ಅಸಮಾಧಾನ

ಬೆಂಗಳೂರು, ಜೂನ್​​ 30: ನಾಯಿಗಳ ಸಂತಾನ ಹರಣ ಕಾರ್ಯಕ್ರಮದ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳನ್ನು ತರಾಟೆಗೆ ಪಡೆದ ಘಟನೆ ನಡೆದಿದೆ. ಜಿಬಿಎ ಸಭೆಗೆ ಅಂಕಿಅಂಶಗಳು ಇಲ್ಲದೆ ಬರಿಗೈನಲ್ಲಿ ಬಂದ ಆಫೀಸರ್​​ಗಳ​​ ವಿರುದ್ಧ ಗರಂ ಆದ ಸಚಿವರು, ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಅಧಿಕಾರಿಗಳಿದ್ದು ಸಚಿವರ ಸಭೆಗೆ ಕನಿಷ್ಠ ಡಾಟಾವೂ ಇಲ್ಲದೇ ಬಂದಿದ್ದೀರ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 20 ವರ್ಷದಿಂದಲೂ ಸಂತಾನ ಹರಣ ಮಾಡಿಯೂ ನಾಯಿಗಳ ಸಂಖ್ಯೆ ಅಷ್ಟೇ ಇರಲು ಹೇಗೆ ಸಾಧ್ಯ? ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ? ಎಂದು ಅಧಿಕಾರಿಗಳ ಅಸಂಬದ್ಧ ಉತ್ತರಕ್ಕೆ ಸಚಿವರು ಕಿಡಿ ಕಾರಿದ್ದಾರೆ.

ಇರುವ ನಾಯಿಗಳಿಗಿಂತ ಹೆಚ್ಚಾಗಿ ಸಂತಾನಹರಣ ಚಿಕಿತ್ಸೆ!

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಚರ್ಚೆ ಸಂಬಂಧ ಮಾಹಿತಿ ನೀಡಿದ ಸಚಿವರು, ಬೀದಿ ನಾಯಿಗಳ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಮತ್ತು ನಗರದಲ್ಲಿ ಗಿಡ ನೆಡುವ ಕಾರ್ಯದ ವಿಚಾರವಾಗಿ ಸುದೀರ್ಘ ಚರ್ಚೆ ಆಗಿದೆ. ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆ ಕಳೆದ 50 ವರ್ಷಗಳಿಂದ ಇದ್ದು, ನಾನು ಕಾಲೇಜು ದಿನಗಳಿಂದ ಈ ಸಮಸ್ಯೆ ನೋಡುತ್ತಿದ್ದೇನೆ. 2000ನೇ ಇಸವಿಯಿಂದಲೂ ನಾಯಿಗಳ ಸಂತಾನ ಹರಣ ಚಿಕಿತ್ಸೆ ಆಗುತ್ತಿದೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದು, ಬಿಬಿಎಂಪಿ ಆದ ಬಳಿಕ 8.80 ಲಕ್ಷ ನಾಯಿಗಳಿಗೆ ಮತ್ತು 2016ರಿಂದ 2023ರ ವರೆಗೆ 3.33 ಲಕ್ಷ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಆಗಿದೆ ಎಂದಿದ್ದಾರೆ. 2019ರ ಸರ್ವೆ ಪ್ರಕಾರ 3.10 ಲಕ್ಷ, 2023ರ ಸರ್ವೆ ಪ್ರಕಾರ 2.79 ಲಕ್ಷ ಬೀದಿ ನಾಯಿಗಳು ಇವೆ. ಇವರು ಹೇಳುತ್ತಿರುವ ಪ್ರಕಾರ ಇರುವ ನಾಯಿಗಳಿಗಿಂತ ಹೆಚ್ಚಾಗಿ ಸಂತಾನಹರಣ ಚಿಕಿತ್ಸೆ ನಡೆದಿದ್ದು, ಈ ಕುರಿತಾಗಿ ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲ. ಕಳೆದ 5 ವರ್ಷಗಳಲ್ಲಿ 42 ಕೋಟಿ ಇದಕ್ಕಾಗಿ ಖರ್ಚು ಮಾಡಿದ್ದಾರೆ . ಜನರ ತೆರಿಗೆ ದುಡ್ಡು ಖರ್ಚಾಗುತ್ತಲೇ ಇದೆ. ಆದರೆ ನಾಯಿಗಳ ಸಂತಾನ ಮುಂದುವರೆದಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು

ಸಂತಾನಹರಣ ಚಿಕಿತ್ಸೆ ಸಂಖ್ಯೆ ದ್ವಿಗುಣಕ್ಕೆ ಸೂಚನೆ

ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಂಖ್ಯೆ ದ್ವಿಗುಣಕ್ಕೆ ಸೂಚಿಸಿದ್ದೇನೆ. ಇದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಿ ಅಂತಲೂ ಹೇಳಿದ್ದೇನೆ. ಜೊತೆಗೆ ಬೇರೆ ಸಂಸ್ಥೆಗಳನ್ನು ಆಹ್ವಾನ ಮಾಡಬಹುದು. ವೈದ್ಯಕೀಯ ಸಿಬ್ಬಂದಿ ಸಾಲದೇ ಹೋದರೆ ಹೊರಗುತ್ತಿಗೆ ಮೇಲೆ ಮಾಡಿ ಎಂದೂ ಅಧಿಕಾರಿಗಳಿಗೆ ತಿಳಿಸಿರೋದಾಗಿ ಸಚಿವರು ಹೇಳಿದ್ದಾರೆ.

‘ನೆಟ್ಟ ಗಿಡಗಳು ಇಲ್ಲಿ ಹೋದವು?’

2008ರಿಂದ 20 ಲಕ್ಷ ಗಿಡ ನೆಟ್ಟಿದ್ದೇವೆ ಎಂದು ಹೇಳುತ್ತಾರೆ. ಮರಗಣತಿ ಪ್ರಕಾರ ಎಷ್ಟು ಆಗಿದೆ ಅಂತ ಕೇಳಿದರೆ 9 ಲಕ್ಷ ಮರಗಳು ಇವೆಯೆಂದು ಇವರೇ ಹೇಳುತ್ತಿದ್ದಾರೆ. ಹಾಗಾದರೆ ನೆಟ್ಟ ಗಿಡಗಳು ಎಲ್ಲಿ ಹೋದವು? ಎಂದೂ ಸಚಿವ ಕೃಷ್ಣಭೈರೇಗೌಡ ಪ್ರಶ್ನಿಸಿದ್ದಾರೆ. ಒಂದು ಗಿಡ ಬೆಳೆಸಲು 2,300 ರೂಪಾಯಿ ಖರ್ಚಾಗುತ್ತೆ. ಅರಣ್ಯ ಕಾರ್ಯಕ್ರಮದಲ್ಲಿ ನೆಟ್ಟರೆ 3,300 ರೂ. ವೆಚ್ಚ ಮಾಡುತ್ತೇವೆ. ಗುಂಡಿ ತೊಡೋಕೆ 300 ರೂ., 1064 ರೂ. ನೀರು ಹಾಕಲು, ಟ್ರೀ ಗಾರ್ಡ್ ಹಾಕೋಕೆ 452 ರೂ. ಸೇರಿ 3 ವರ್ಷದ ನಿರ್ವಹಣೆಗೆ ಹಣ ವ್ಯಯಮಾಡಲಾಗುತ್ತೆ. 2.5 ಅಡಿ ಆಳ 2.5 ಅಡಿ ಉದ್ದ ತೆಗೆದು ಗಿಡ ನೆಡಬೇಕು ಎಂದಿದೆ. ಆದರೆ ನನ್ನ ಕ್ಷೇತ್ರದಲ್ಲಿ ಈ ರೀತಿ ನೆಟ್ಟಿರೋದನ್ನು ನಾನು ನೋಡಿಲ್ಲ ಎಂದು ಸಚಿವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:30 pm, Tue, 30 June 26

Follow Us