ಓದಿದ್ದು ಬಿಎ, ಆದ್ರೆ ಮಾಡ್ತಾ ಇದ್ದದ್ದು ಮಾತ್ರ ಕಳ್ಳತನ; ಬೆಂಗಳೂರಿನಲ್ಲಿ ಕೆಲಸ ಸಿಕ್ಕಿಲ್ಲ ಎಂದು ಲ್ಯಾಪ್ಟಾಪ್ ಕದ್ದ ಆಸಾಮಿ ಅರೆಸ್ಟ್
ಬೆಂಗಳೂರಿನಲ್ಲಿ ಕೆಲಸವಿಲ್ಲದೆ ಹತಾಶನಾದ ವ್ಯಕ್ತಿಯೋರ್ವ ಪಿಜಿಗಳಿಂದ 21 ಲ್ಯಾಪ್‌ಟಾಪ್‌ಗಳನ್ನು ಕದ್ದು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸ್ನೇಹಿತನ ಪಿಜಿಯಿಂದಲೇ ಕಳ್ಳತನ ಮಾಡುತ್ತಿದ್ದ ಆರೋಪಿ ಉಳಿದ ಪಿಜಿಗಳಲ್ಲಿಯೂ ಕನ್ನ ಹಾಕಲು ಶುರುಮಾಡಿದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾನೆ. ಪ್ರತ್ಯೇಕ ಪ್ರಕರಣದಲ್ಲಿ ಉತ್ತರಹಳ್ಳಿಯಲ್ಲಿ ಸ್ಕೂಟರ್ ಕಳವಾಗಿದ್ದು, ಸುಬ್ರಹ್ಮಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.

ಬೆಂಗಳೂರು, ಡಿಸೆಂಬರ್ 1: ಪದವಿ ಮುಗಿಸಿದ ಹಲವು ಉದ್ಯೋಗಾಕಾಂಕ್ಷಿಗಳು ಪ್ರತಿನಿತ್ಯ ಬೆಂಗಳೂರಿಗೆ (Bengaluru) ಬರುತ್ತಾರೆ. ಹಲವರು ಕೆಲಸ ಗಿಟ್ಟಿಸಿಕೊಂಡು ಇಲ್ಲೇ ಉಳಿಯುತ್ತಾರೆ. ಇಲ್ಲವಾದಲ್ಲಿ ಮನೆ ಕಡೆ ಮುಖ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿಗೆ ಕೆಲಸಕ್ಕೆಂದು ಬಂದು ಕಳ್ಳತನದ ಗೀಳಿಗೆ ಬಿದ್ದು ಕೊನೆಗೂ ಪೊಲೀಸರ ಬಲೆಗೆ ಬಿದ್ದ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ನೇಹಿತನ ಪಿಜಿಯಲ್ಲಿಯೇ ಕಳ್ಳತನ
ಆಂಧ್ರದ ಚಿತ್ತೂರು ಮೂಲದ ಗೋವರ್ಧನ್ ಎಂಬಾತ ನಾಲ್ಕು ತಿಂಗಳ ಹಿಂದೆ ಉದ್ಯೋಗದ ಹಂಬಲದಿಂದ ಬೆಂಗಳೂರಿಗೆ ಬಂದಿದ್ದ. ತನ್ನ ಸ್ನೇಹಿತನ ಪಿಜಿಯಲ್ಲಿ ವಾಸವಾಗಿದ್ದ ಅವನು, ಕೆಲಸ ಸಿಗದೇ ನಿರಾಶನಾಗಿದ್ದ. ಕೆಲಸವಿರದೆ, ಕೈಯಲ್ಲಿ ಹಣವೂ ಇರದೆ ಕಂಗಾಲಾಗಿದ್ದ ಗೋವರ್ಧನ್, ಮೊದಲಿಗೆ ಪಿಜಿಯಲ್ಲಿಯೇ ಲ್ಯಾಪ್‌ಟಾಪ್ ಕದ್ದು ಸ್ನೇಹಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ. ನಂತರ ಇದನ್ನೇ ರೂಢಿಸಿಕೊಂಡ ಆತ, ವಿವಿಧ ಪಿಜಿಗಳನ್ನು ಗುರಿಯಾಗಿಸಿಕೊಂಡು ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಆರೋಪಿ ಬಂಧನವಾಗಿದ್ದು, ಸುಮಾರು 21 ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜರೋಷವಾಗಿ ಸ್ಕೂಟರ್ ಎತ್ತಿಕೊಂಡು ಹೋದ ಕಳ್ಳರು
ಬೆಂಗಳೂರಿನ ಉತ್ತರಹಳ್ಳಿ ಬಳಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಅನ್ನು ನಾಲ್ವರು ಯುವಕರು ಕ್ಷಣಮಾತ್ರದಲ್ಲೇ ಕದ್ದು ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟರ್ ಮಾಲೀಕರು ಗಾಡಿಯಲ್ಲಿಯೇ ಕೀಲಿಯನ್ನು ಬಿಟ್ಟು ಹೋಗಿದ್ದನ್ನು ಗಮನಿಸಿದ ಕಳ್ಳರು, ತಮ್ಮದೇ ವಾಹನ ಎನ್ನುವಂತೆ ರಾಜರೋಷವಾಗಿ ಸ್ಕೂಟರ್ ಎತ್ತಿಕೊಂಡು ಹೋಗಿದ್ದಾರೆ. ಘಟನೆಯ ನಂತರ ಮಾಲೀಕರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರೂ, ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾಹನದ ಡಾಕ್ಯುಮೆಂಟ್ ತರಲು ಹೇಳಿ ಮಾಲೀಕರನ್ನು ವಾಪಸ್ ಕಳುಹಿಸಿದ್ದರೆಂದು ತಿಳಿದುಬಂದಿದೆ. ಐದು ತಿಂಗಳ ಹಿಂದಷ್ಟೇ ಸ್ಕೂಟರ್ ಖರೀದಿಸಿದ್ದ ವ್ಯಕ್ತಿ ಈಗ ನ್ಯಾಯಕ್ಕಾಗಿ ಸುತ್ತಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




