
ಬೆಂಗಳೂರು, ಸೆಪ್ಟೆಂಬರ್ 21: ದೇಶಾದ್ಯಂತ ಸೈಬರ್ ವಂಚನೆಯಿಂದ ದೋಚಿದ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ‘ಮ್ಯೂಲ್’ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಮೊಬೈಲ್ ಫೋನ್‌ಗಳಲ್ಲಿ ಬರೋಬ್ಬರಿ 507 ಖಾತೆಗಳ ಮಾಹಿತಿ ಪತ್ತೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜಾರ್ಖಂಡ್ ಮೂಲದ ಅಮಿತ್ ಮಿಶ್ರಾ ಹಾಗೂ ಬೆಂಗಳೂರಿನ ತೌಸೀಫ್ ಅಹಮದ್ ಮತ್ತು ಪರಶುರಾಮ್ ಕಣ್ಣಾವರ್ ಬಂಧಿತ ಆರೋಪಿಗಳು. ಹರೀಶ್ ಕುಮಾರ್ ಎಂಬುವವರು ಶೇರ್ ಮಾರ್ಕೆಟ್ ಹೂಡಿಕೆ ಹೆಸರಿನಲ್ಲಿ 93.6 ಲಕ್ಷ ರೂಪಾಯಿ ಕಳೆದುಕೊಂಡ ನಂತರ ದಾಖಲಿಸಿದ ದೂರಿನನ್ವಯ ಪೊಲೀಸರು ತನಿಖೆ ನಡೆಸಿ ಈ ದಂಧೆಯನ್ನು ಬಯಲಿಗೆಳೆದಿದ್ದಾರೆ.
ಆರೋಪಿಗಳು ಸಾರ್ವಜನಿಕರಿಗೆ ಕಮಿಷನ್ ಆಸೆ ತೋರಿಸಿ ಅವರ ಚಾಲ್ತಿ ಮತ್ತು ಕಾರ್ಪೊರೇಟ್ ಬ್ಯಾಂಕ್ ಖಾತೆಗಳು, ನೆಟ್ ಬ್ಯಾಂಕಿಂಗ್ ಐಡಿ ಹಾಗೂ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಿದ್ದರು. ಖಾತೆದಾರರನ್ನು ಹೋಟೆಲ್‌ಗಳಲ್ಲಿ ತಂಗಿಸಿ, ಅವರ ಫೋನ್‌ಗಳಿಗೆ ‘ZNPAY’ ನಂತಹ ಎಸ್‌ಎಂಎಸ್ ಫಾರ್ವರ್ಡಿಂಗ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಿದ್ದರು. ಇದರಿಂದ ಬ್ಯಾಂಕ್‌ಗಳಿಂದ ಬರುವ ಒಟಿಪಿ ಮತ್ತು ಸಂದೇಶಗಳು ನೇರವಾಗಿ ಸೈಬರ್ ವಂಚಕರಿಗೆ ತಲುಪುತ್ತಿತ್ತು. ಇದನ್ನು ಬಳಸಿ ದೂರದಲ್ಲೇ ಕುಳಿತು ಖಾತೆಗಳನ್ನು ನಿರ್ವಹಿಸಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು.
ಬಂಧಿತರ ಬಳಿಯಿದ್ದ ಫೋನ್‌ಗಳ ಪರಿಶೀಲನೆ ನಡೆಸಿದಾಗ, ಈ 507 ಖಾತೆಗಳು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸೈಬರ್ ಅಪರಾಧ ಪ್ರಕರಣಗಳಿಗೆ ಲಿಂಕ್ ಆಗಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ತಂತಿರಹಿತವಾಗಿ ಕಾರ್ಯಾಚರಿಸಲು APK ಫೈಲ್‌ಗಳು, ಟೆಲಿಗ್ರಾಂ ಹಾಗೂ ವಾಟ್ಸಾಪ್ ಗ್ರೂಪ್‌ಗಳನ್ನು ಬಳಸಲಾಗಿತ್ತು.
ಟೆಲಿಗ್ರಾಂ ಮತ್ತು ವಾಟ್ಸಾಪ್ ಐಪಿ ವಿಳಾಸಗಳ ತಾಂತ್ರಿಕ ಪರಿಶೀಲನೆ ನಡೆಸಿದಾಗ, ಈ ಜಾಲದ ಮೂಲ ಕಲ್ಕತ್ತಾ, ಹಾಂಗ್ ಕಾಂಗ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ಲಿಂಕ್‌ಗಳನ್ನು ಹೊಂದಿರುವುದು ತಿಳಿದುಬಂದಿದೆ. ವಂಚನೆ ಹಣವನ್ನು ಬೈನಾನ್ಸ್ ಕ್ರಿಪ್ಟೋ ವಾಲೆಟ್‌ಗಳ ಮೂಲಕವೂ ವರ್ಗಾಯಿಸಲಾಗುತ್ತಿತ್ತು. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Mon, 21 September 26