ಹಿಂದುತ್ವದ ಬಗ್ಗೆ ಅವಹೇಳನಾಕಾರಿ ಪೋಸ್ಟ್ ಪ್ರಕರಣ: ನಟ ಚೇತನ್ ಅಹಿಂಸಾಗೆ ಜಾಮೀನು
ಸೋಶಿಯಲ್ ಮೀಡಿಯಾದಲ್ಲಿ ಹಿಂದುತ್ವದ ಬಗ್ಗೆ ಪೋಸ್ಟ್ ಮಾಡಿದ್ದ ನಟ ಚೇತನ್ ಅಹಿಂಸಾ ಅವರಿಗೆ ಬೆಂಗಳೂರಿನ 32ನೇ ACMM ಕೋರ್ಟ್ ಚೇತನ್ಗೆ ಜಾಮೀನು ಮಂಜೂರು ನೀಡಿ ಆದೇಶಿಸಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದರು.
ಬೆಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ (Chethan Kumar Ahimsa) ಅವರಿಗೆ ಜಾಮೀನು ಮಂಜೂರಾಗಿದೆ. 25 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್, ಒಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿ ಚೇತನ್ಗೆ ಜಾಮೀನು ಮಂಜೂರು ಮಾಡಿ ಬೆಂಗಳೂರಿನ 32ನೇ ACMM ಕೋರ್ಟ್ ನ್ಯಾಯಾಧೀಶೆ ಲತಾ ಅವರು ಆದೇಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಪ್ರಕರಣ ಸಂಬಂಧ ಚೇತನ್ನನ್ನ ಬಂಧಿಸಿದ್ದ ಶೇಷಾದ್ರಿಪುರಂ ಠಾಣಾ ಪೊಲೀಸರು, ಕೋರ್ಟ್ಗೆ ಹಾಜರು ಪಡಿಸಿದ್ದರು. ಅದರಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿತ್ತು. ಅದರ ಅನ್ವಯ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಚೇತನ್ಗೆ ಇದೀಗ ಜಾಮೀನು ಮಂಜೂರಾಗಿದೆ.
ಚೇತನ್ ಮಾಡಿದ ಟ್ವೀಟ್ನಲ್ಲಿ ಏನಿದೆ?
‘ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು. ಇದು ಒಂದು ಸುಳ್ಳು. 1992ರಲ್ಲಿ: ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’. ಇದು ಒಂದು ಸುಳ್ಳು. ಈಗ 2023ರಲ್ಲಿ: ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು- ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು ಸತ್ಯವೇ ಸಮಾನತೆ’ ಎಂದು ಚೇತನ್ ಮಾಡಿರುವ ಪೋಸ್ಟ್ ವೈರಲ್ ಆಗಿತ್ತು.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ: ಚೇತನ್ ಅಹಿಂಸಾ
ಚೇತನ್ ಮಾಡಿರುವ ಈ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಚೇತನ್ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಶಿವಕುಮಾರ್ ಎಂಬವರು ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. ಸಿನಿಮಾ ಹೊರತಾಗಿಯೂ ಚೇತನ್ ಸದಾ ಹಿಂದೂ ಧರ್ಮ, ಹಿಂಧುತ್ವ, ಬ್ರಾಹ್ಮಣರ ವಿರುದ್ಧ ಹೇಳಿಕೆ ನೀಡುವ ಮೂಲಕ ಸದಾ ಸದ್ದಿಯಲ್ಲಿರುತ್ತಾರೆ. ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ವಿವಾದ ಹುಟ್ಟುಕೊಳ್ಳುವಂತೆ ಆಗಾಗ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿರುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Thu, 23 March 23