ಬೆಂಗಳೂರಿನಲ್ಲಿ ವಿದ್ಯುತ್ ಬೇಡಿಕೆ ಏರಿಕೆ! ಹಾಗಾದ್ರೆ ಇನ್ನು ಪವರ್ ಕಟ್ ಜಾಸ್ತಿಯಾಗತ್ತಾ?

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ವಿದ್ಯುತ್ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿದೆ, ಶುಕ್ರವಾರದಂದು ಬೆಸ್ಕಾಂ 8,802 ಮೆಗಾವಾಟ್ ಬೇಡಿಕೆ ದಾಖಲಿಸಿದೆ. ಇದರಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಒತ್ತಡ ಹೆಚ್ಚಾಗಿ ತಾತ್ಕಾಲಿಕ ವಿದ್ಯುತ್ ವ್ಯತ್ಯಯಗಳು ಉಂಟಾಗುತ್ತಿವೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಆದರೆ ಸ್ಥಳೀಯ ದುರಸ್ತಿ ಮತ್ತು ಲೋಡ್ ಹೆಚ್ಚಳದಿಂದ ಸಮಸ್ಯೆ ಎದುರಾಗಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಬೆಂಗಳೂರಿನಲ್ಲಿ ವಿದ್ಯುತ್ ಬೇಡಿಕೆ ಏರಿಕೆ! ಹಾಗಾದ್ರೆ ಇನ್ನು ಪವರ್ ಕಟ್ ಜಾಸ್ತಿಯಾಗತ್ತಾ?
ಬೆಂಗಳೂರಿನಲ್ಲಿ ವಿದ್ಯುತ್ ಬೇಡಿಕೆ ಏರಿಕೆ! ಹಾಗಾದ್ರೆ ಇನ್ನು ಪವರ್ ಕಟ್ ಜಾಸ್ತಿಯಾಗತ್ತಾ?
Image Credit source: google Gemini

Updated on: Apr 12, 2026 | 9:48 AM

ಬೆಂಗಳೂರು, ಏಪ್ರಿಲ್ 12: ನಗರದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ವಿದ್ಯುತ್ ಬಳಕೆಯ ಏರಿಕೆಯಿಂದಾಗಿ ಇತ್ತೀಚೆಗೆ ವಿದ್ಯುತ್ ವ್ಯತ್ಯಯಗಳು ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ. ಹೀಗಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಶುಕ್ರವಾರ ಬೆಳಿಗ್ಗೆ 10.30ಕ್ಕೆ ಇತಿಹಾಸದಲ್ಲೇ ಅತಿ ಹೆಚ್ಚು ವಿದ್ಯುತ್ ಬೇಡಿಕೆ ಮತ್ತು ಸರಬರಾಜನ್ನು ದಾಖಲಿಸಿದೆ. ಒಟ್ಟು 173.58 ಮಿಲಿಯನ್ ಯೂನಿಟ್ (8,802 ಮೆಗಾವಾಟ್) ವಿದ್ಯುತ್ ಬಳಕೆ ಆಗಿದೆ.

ಟ್ರಾನ್ಸ್‌ಫಾರ್ಮರ್ ಹಾಗೂ ಫೀಡರ್‌ಗಳ ಮೇಲೆ ಅಧಿಕ ಒತ್ತಡ

ಸಾಮಾನ್ಯವಾಗಿ ನಗರದಲ್ಲಿ ಹೆಚ್ಚು ಎಂದರೆ ಸುಮಾರು 7,800 ಮೆಗಾವಾಟ್ ವರೆಗೆ ವಿದ್ಯತ್ ಬಳಕೆಯಾಗುತ್ತದೆ. ಆದರೆ ಈ ಬೇಸಿಗೆ ಕಾಲದಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ವಿದ್ಯುತ್ ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಹೆಚ್ಚಿದ ಲೋಡ್ ಮತ್ತು ಉಷ್ಣತೆಯಿಂದಾಗಿ ವಿದ್ಯುತ್ ಲೈನ್‌ಗಳಲ್ಲಿ ಟ್ರಿಪ್ಪಿಂಗ್ ಸಮಸ್ಯೆಗಳು ಉಂಟಾಗುತ್ತಿವೆ. ಇದರಿಂದ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯಗಳು ಕಾಣಿಸಿಕೊಳ್ಳುತ್ತಿವೆ. ಕೆಲವು ಪ್ರದೇಶಗಳಲ್ಲಿ ಟ್ರಾನ್ಸ್‌ಫಾರ್ಮರ್ ಹಾಗೂ ಫೀಡರ್‌ಗಳ ಮೇಲೆ ಅಧಿಕ ಒತ್ತಡ ಇರುವುದರಿಂದ ಸುರಕ್ಷತಾ ಕಾರಣಗಳಿಂದ ಲೈನ್‌ಗಳನ್ನು ಬದಲಾಯಿಸುವ ಅಗತ್ಯವಿದೆ. ಇದರಿಂದಲೂ ವಿದ್ಯುತ್ ಕಡಿತಗಳು ಸಂಭವಿಸುತ್ತಿವೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ವಿದ್ಯುತ್ ಕೊರತೆ ಏನೂ ಇಲ್ಲ

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ ಮಾತನಾಡಿ, ಕಳೆದ ಒಂದು ವಾರದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಅಧಿಕಾರಿಗಳ ಪ್ರಕಾರ, ಖೋದೇಸ್ ಫ್ಯಾಕ್ಟರಿ ಸಮೀಪದ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಒಂದು ಸಾಧನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಸುಮಾರು 45 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಸಣ್ಣಪುಟ್ಟ ದುರಸ್ತಿ ಕಾರ್ಯಗಳೂ ತಾತ್ಕಾಲಿಕ ವ್ಯತ್ಯಯಗಳಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ ಯಾವುದೇ ಯೋಜಿತ ವಿದ್ಯುತ್ ಕಡಿತಗಳನ್ನು ಮಾಡಬಾರದು ಎಂಬ ತೀರ್ಮಾನ ಕೈಗೊಂಡಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮೇ ತಿಂಗಳ ಪರಿಸ್ಥಿತಿ ಕುರಿತು ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us