
ಬೆಂಗಳೂರು, ಅಕ್ಟೋಬರ್ 21: ಕರ್ನಾಟಕದಾದ್ಯಂತ ದೀಪಾವಳಿ ಹಬ್ಬದ (deepavali festival) ಸಡಗರ ಹಾಗೂ ಸಂಭ್ರಮ ಜೋರಾಗಿದೆ. ಆದರೆ ಇದೇ ಬೆಳಕಿನ ಹಬ್ಬ ಅದೆಷ್ಟೋ ಜನರ ಬಾಳನ್ನು ಕತ್ತಲಾಗಿಸುತ್ತದೆ. ಹಬ್ಬದ ಮೊದಲ ದಿನವೇ ಪಟಾಕಿ (fire crackers) ಹೊಡೆಯುವ ಭರದಲ್ಲಿ ಐವರ ಮಕ್ಕಳು ಸೇರಿದಂತೆ ಹಲವು ಜನರು ಗಾಯಗೊಂಡಿದ್ದಾರೆ. ಅದರಲ್ಲೂ ಮಕ್ಕಳು ಕಣ್ಣಿಗೆ ಹಾನಿ ಮಾಡಿಕೊಂಡಿರುವಂತಹ ಘಟನೆಗಳು ನಡೆದಿವೆ. ಸದ್ಯ ಎಲ್ಲರೂ ಚಿಕಿತ್ಸೆ ಪಡೆದುಕೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಅದೆಷ್ಟೋ ಜನರು ದುಬಾರಿಯಾದರೂ ಪಟಾಕಿನ ಖರೀದಿಸಿ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಅದೇ ಪಟಾಕಿಯಿಂದ ಅದೆಷ್ಟೋ ಜನರು ಸುಟ್ಟುಕೊಂಡು ಅಥವಾ ಪಟಾಕಿ ಸಿಡಿದು ಕಣ್ಣುಗಳಿಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗುವುದೇನು ಹೊಸದೇನಲ್ಲ. ಅದರಲ್ಲೂ ಮೊದಲ ದಿನವೇ ಪಟಾಕಿಯಿಂದ ಕಣ್ಣಿಗೆ ಪೆಟ್ಟಾದ ಐವರು ಮಕ್ಕಳು ಮಿಂಟೋ ಹಾಗೂ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದು, ಇವರೆಲ್ಲರೂ 15 ವರ್ಷದೊಳಗಿನ ಮಕ್ಕಳೇ ಅಂತಿದ್ದಾರೆ ವೈದ್ಯರು.
ಇದನ್ನೂ ಓದಿ: Deepavali 2025: ಮಕ್ಕಳೊಂದಿಗೆ ಪಟಾಕಿ ಸಿಡಿಸುವಾಗ ತಪ್ಪದೆ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 14 ವರ್ಷದ ಹಾಗೂ 12 ವರ್ಷದ ಮಕ್ಕಳಿಬ್ಬರು ಗಾಯಗೊಂಡು ಚಿಕಿತ್ಸೆ ಪಡೆದರೆ, ನಾರಾಯಣ ನೇತ್ರಾಲಯದಲ್ಲಿ 3 ವರ್ಷ, 4 ವರ್ಷ ಹಾಗೂ 14 ವರ್ಷದ ಮಕ್ಕಳು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಈ ಐವರಲ್ಲಿ ಇಬ್ಬರು ಸ್ವತಃ ಪಟಾಕಿ ಹಚ್ಚಿ ಗಾಯಗೊಂಡರೆ, ಇನ್ನುಳಿದ ಮೂವರು ಹಚ್ಚಿದ ಪಟಾಕಿ ನೋಡುವಾಗ ಗಾಯಗೊಂಡಿರುವುದಾಗಿ ಮಿಂಟೋ ಕಣ್ಣಿನ ಆಸ್ಪತ್ರೆಯ ಡಾ. ಶಶಿಧರ್ ಮಾಹಿತಿ ನೀಡಿದ್ದಾರೆ.
ಇನ್ನು ಕಣ್ಣಿಗೆ ಕಿಡಿ ಹಾರಿದರೆ ತೆಗೆದುಕೊಳ್ಳಬೇಕಾದ ಕ್ರಮವೇನು ಎಂಬುವುದರ ಕುರಿತಾಗಿ ನಾರಾಯಣ ನೇತ್ರಾಲಯದ ಡಾ. ನರೇನ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಕಣ್ಣುಗಳನ್ನು ಉಜ್ಜಬಾರದು, ಕನಿಷ್ಠ 15 ನಿಮಿಷ ಶುದ್ಧ ನೀರಿನಿಂದ ಕಣ್ಣನ್ನು ನಿಧಾನವಾಗಿ ತೊಳೆಯುವುದು ಮತ್ತು ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯುವುದು ಹಾಗೂ ಸ್ವಯಂ-ಔಷಧಿಗಳನ್ನು ಬಳಸಬಾರದು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ದೀಪಾವಳಿಯಂದು ಮಕ್ಕಳು ಪಟಾಕಿ ಮುಟ್ಟದಂತೆ ಮಾಡಬೇಕೇ? ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ
ಒಟ್ಟಿನಲ್ಲಿ ಕೇವಲ ಕ್ಷಣಿಕದ ಖುಷಿಗೋಸ್ಕರ ಇಡೀ ಜೀವನವೇ ಕತ್ತಲಾಗಲಿದೆ. ಸದ್ಯ ಅದೃಷ್ಟವಶಾತ್ ಐದು ಮಕ್ಕಳಿಗೆ ಕಣ್ಣಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನಾದರೂ ಪೋಷಕರು ಕೊಂಚ ಎಚ್ಚರ ವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 am, Tue, 21 October 25