
ಮಂಗಳೂರು, ಜುಲೈ 13: ಬೆಂಗಳೂರಿನ (Bengaluru) ಮೈಸೂರು ರಸ್ತೆಯ (Mysore Road) ಬ್ಯಾಟರಾಯನಪುರದಲ್ಲಿರುವ ಐತಿಹಾಸಕ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು (Gali Anjaneya Swamy Temple) ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮುಜರಾಯಿ ಇಲಾಖೆ ದೇವಾಲಯವನ್ನು ವಶಕ್ಕೆ ಪಡೆದಿರುವುದಕ್ಕೆ ಟ್ರಸ್ಟ್ ಪದಾಧಿಕಾರಿಗಳು ಮತ್ತು ಭಕ್ತರಿಂದ ಖಂಡನೆ ವ್ಯಕ್ತವಾಗುತ್ತಿದ್ದಂತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಐದು ವರ್ಷ ಸರ್ಕಾರ ವಶಕ್ಕೆ ಪಡೆಯಲು ಅವಕಾಶ ಇದೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1,85,000 ದೇವಸ್ಥಾನಗಳಿವೆ. ಇದರಲ್ಲಿ 35 ಸಾವಿರ ಮುಜರಾಯಿ ಇಲಾಖೆಗೆ ಒಳಪಟ್ಟಿವೆ. 1,50,000 ಖಾಸಗಿ ದೇವಸ್ಥಾನಗಳಿವೆ. ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ ಐದು ವರ್ಷ ಸರ್ಕಾರ ವಶಕ್ಕೆ ಪಡೆಯಲು ಅವಕಾಶ ಇದೆ ಎಂದು ಹೇಳಿದರು.
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದೆ. ಹಣ ತೆಗೆದುಕೊಂಡು ಹೋಗುತ್ತಿದ್ದ ವಿಡಿಯೋ ನೀವೇ ನೋಡಿದ್ದೀರಿ. ಐದು ವರ್ಷ ಆದ ಮೇಲೆ ದೇವಸ್ಥಾನವನ್ನು ವಾಪಸ್ ಕೊಡುತ್ತೇವೆ. ಬಿಜೆಪಿ ಸರ್ಕಾರ ಎಂಟು ದೇವಸ್ಥಾನಗಳನ್ನು ವಶಕ್ಕೆ ಪಡೆದಿತ್ತು. ಅವ್ಯವಹಾರ ನಡೆದಿತ್ತು ಅಂತ ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದುಕೊಂಡು ವಾಪಾಸ್ ಕೊಟ್ಟಿದೆ. ಖಾಸಗಿ ದೇವಸ್ಥಾನಗಳಲ್ಲಿ ಅವ್ಯಹಾರ ನಡೆದಾಗ ವಶಕ್ಕೆ ಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದರು.
ಇದನ್ನೂ ಓದಿ: ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಮುಜರಾಯಿ ಸುಪರ್ದಿಗೆ
ಬಿಜೆಪಿ ಸರ್ಕಾರ ವಶ ಪಡಿಸಿಕೊಂಡಾಗ ಯಾಕೆ ಮಾತನಾಡಿಲ್ಲ? ಗಾಳಿ ಆಂಜನೇಯ ದೇವಸ್ಥಾನದಲ್ಲಿ 25 ವರ್ಷಗಳಿಂದ ಅವ್ಯವಹಾರ ನಡೆಯುತ್ತಿದೆ. ಆಡಳಿತ ಮಂಡಳಿಯವರು ದೇವಸ್ಥಾನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತೇವೆ ಅಂದ್ರೆ ವಾಪಾಸ್ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಅವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುತ್ತಿರುವುದು ಮತ್ತು ಹಣ ದುರುಪಯೋಗಪಡಿಸಿಕೊಂಡಿರುವುದು, ಟ್ರಸ್ಟ್ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಕಲಂ ಸೆಕ್ಷನ್ 42 ಮತ್ತು 43ರ ಅಡಿಯಲ್ಲಿ ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
Published On - 2:52 pm, Sun, 13 July 25