ದಂಡ ವಿಧಿಸಿದ್ರೂ ಬೆಂಗಳೂರಿನಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ: ವಿಲೇವಾರಿಯಲ್ಲೂ ನಿರ್ಲಕ್ಷ್ಯ

ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಜಿಬಿಎ ವಿಶೇಷ ಅಭಿಯಾನ ನಡೆಸಿ 30 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಆದರೂ ರಸ್ತೆ ಬದಿ ಕಸ ಎಸೆಯುವುದು ನಿಂತಿಲ್ಲ. ಜಿಬಿಎ ದಂಡ ವಿಧಿಸುತ್ತಿದ್ದರೂ, ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು, ನಗರದಲ್ಲಿ ಕಸದ ರಾಶಿಗಳು ಹೆಚ್ಚುತ್ತಿವೆ. ಸಾರ್ವಜನಿಕರು ಈ ಬಗ್ಗೆ ಜಿಬಿಎ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದಂಡ ವಿಧಿಸಿದ್ರೂ ಬೆಂಗಳೂರಿನಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ: ವಿಲೇವಾರಿಯಲ್ಲೂ ನಿರ್ಲಕ್ಷ್ಯ
ಕಸ
Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2025 | 7:23 PM

ಬೆಂಗಳೂರು, ನವೆಂಬರ್ 20: ನಗರದಲ್ಲಿ ಎಲ್ಲೆಂದರಲ್ಲಿ ಕಸ (Garbage) ಎಸೆಯುವವರ ವಿರುದ್ಧ ಸಮರ ಸಾರಿರುವ ಜಿಬಿಎ, ಕಳೆದ ಮೂರು ದಿನಗಳಿಂದ ವಿಶೇಷ ಅಭಿಯಾನ ನಡೆಸ್ತಿದೆ. ಎಲ್ಲೆಂದರಲ್ಲಿ ಕಸ ಎಸೆದವರ ಮನೆ ಬಾಗಿಲಿಗೆ ಕಸ ಸುರಿದು ದಂಡ ವಸೂಲಿ ಮಾಡ್ತಿರೋ ಜಿಬಿಎ (GBA), ಇದುವರೆಗೆ 30 ಲಕ್ಷ ರೂ ಅಧಿಕ ದಂಡ ವಸೂಲಿ ಮಾಡಿದೆ. ಇತ್ತ ಒಂದೆಡೆ ಕಸ ಎಸೆದವರ ಮೇಲೆ ದಂಡ ಪ್ರಯೋಗ ಮಾಡ್ತಿದ್ರೂ ಕೂಡ ಸಿಟಿಮಂದಿ ರಸ್ತೆಬದಿಯಲ್ಲಿ ಕಸ ಎಸೆಯೋದಕ್ಕೆ ಬ್ರೇಕ್ ಹಾಕದಿರೋದು ಸಿಟಿಯಲ್ಲಿ ಕಸದ ಸಮಸ್ಯೆ ತಂದಿಟ್ಟಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರ ಸಂಖ್ಯೆ ಹೆಚ್ಚಾಗ್ತಿದ್ರೆ, ಇತ್ತ ಕಸ ವಿಲೇವಾರಿಯಲ್ಲೂ ಜಿಬಿಎ ನಿರ್ಲಕ್ಷ್ಯ ತೋರಿರೋದು ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ.

ಐಟಿಸಿಟಿ ಬೆಂಗಳೂರನ್ನ ಕಸ ಮುಕ್ತ ಮಾಡ್ತೀವೆ ಅಂತಾ ಹೊರಟಿರುವ ಜಿಬಿಎ ಹಾಗೂ ಘನತ್ಯಾಜ್ಯ ನಿಯಮಿತ, ಕಸ ಎಸೆಯೋರನ್ನ ಹುಡುಕಿ ಹುಡುಕಿ ಮನೆ ಬಳಿ ಕಸ ಸುರಿದು ದಂಡ ವಸೂಲಿ ಮಾಡ್ತಿದೆ. ಕಸ ಎಸೆಯುವವರನ್ನ ಪತ್ತೆಹಚ್ಚಿ ದಂಡಾಸ್ತ್ರ ಪ್ರಯೋಗ ಮಾಡುವ ಮೂಲಕ ಜಿಬಿಎ ಬಿಸಿ ಮುಟ್ಟಿಸೋಕೆ ಹೊರಟಿದ್ದರೆ, ಇತ್ತ ರಾಜಧಾನಿಯ ರಸ್ತೆಗಳಲ್ಲಿ ಕಸ ಎಸೆಯುವ ಕೆಲಸಕ್ಕೆ ಬ್ರೇಕ್ ಬೀಳದಂತಾಗಿದೆ.

ಇದನ್ನೂ ಓದಿ: 218 ಮನೆಗಳ ಮುಂದೆ ಕಸ ಸುರಿದ ಜಿಬಿಎ! ಒಂದೇ ದಿನ 2.80 ಲಕ್ಷ ರೂ. ದಂಡ ವಸೂಲಿ

ವಿಲ್ಸನ್ ಗಾರ್ಡನ್, ವಿನಾಯಕ ನಗರ ಸುತ್ತಮುತ್ತ ನಿತ್ಯ ರಸ್ತೆಬದಿಯಲ್ಲಿ ರಾಶಿ ರಾಶಿ ಕಸ ಸಂಗ್ರಹ ಆಗ್ತಿದ್ರೆ, ಇತ್ತ ಕಸ ತೆರವು ಮಾಡೋಕೆ ಜಿಬಿಎ ನಿರ್ಲಕ್ಷ್ಯ ತೋರುತ್ತಿರೋದು ರಾಜಧಾನಿಯ ರಸ್ತೆಗಳಲ್ಲಿ ಕಸದ ರಾಶಿ ರಾರಾಜಿಸುವಂತೆ ಮಾಡಿದೆ.

ಎರಡ್ಮೂರು ದಿನಗಳಾದ್ರೂ ತೆರವಾಗದ ಕಸ: ಜನರು ಪರದಾಟ

ಇನ್ನು ರಸ್ತೆಗಳಲ್ಲಿ ಕಸ ಎಸೆಯೋದು ಒಂದೆಡೆಯಾದರೆ ಕಸದರಾಶಿಯಲ್ಲಿರುವ ಅಳಿದುಳಿದ ಆಹಾರ ಪದಾರ್ಥಗಳು, ಕೊಳೆತ ತರಕಾರಿಗಳನ್ನ ಬೀಡಾಡಿ ದನಗಳು ತಿನ್ನುತ್ತಿರೋದು ಹಸುಗಳ ಆರೋಗಕ್ಕೂ ಕಂಟಕ ತಂದಿಡೋ ಸೂಚನೆ ನೀಡ್ತಿದೆ. ರಸ್ತೆಬದಿ ಕಸದ ರಾಶಿ ಬಿದ್ದು ಎರಡ್ಮೂರು ದಿನಗಳಾದ್ರೂ ಕಸ ತೆರವು ಮಾಡದಿರೋದು ಅಕ್ಕಪಕ್ಕದ ಜನರಿಗೆ ಸಂಕಷ್ಟ ತಂದಿಟ್ಟಿದೆ.

ಕಸದ ವಾಸನೆಗೆ ಮೂಗು ಮುಚ್ಚಿಕೊಂಡೇ ಓಡಾಡೋ ಸ್ಥಿತಿ ನಿರ್ಮಾಣ ಆಗಿದ್ದರೆ, ಕಸ ಎಸೆಯೋರನ್ನ ತಡೆಯೋದಕ್ಕೆ ಜಿಬಿಎ, ಸರಿಯಾದ ಸಮಯಕ್ಕೆ ಕಸದ ವಾಹನ ಬರುತ್ತ ಅನ್ನೋದನ್ನ ನಿಗಾ ಇಡಲಿ ಅಂತಿರೋ ಸಿಟಿಮಂದಿ, ಜನರು ಕೂಡ ಕಸ ಎಸೆಯೋ ಬದಲು ಕಸದ ವಾಹನಗಳ ವಿಳಂಬ, ಕಸ ವಿಲೇವಾರಿಯಲ್ಲಿನ ಸಮಸ್ಯೆ ಬಗ್ಗೆ ದೂರು ಕೊಡಿ ಅಂತಿದ್ದಾರೆ.

ಟಿವಿ9 ದೌಡಾಯಿಸುತ್ತಿದ್ದಂತೆ ಕಸ ತೆರವು

ಸದ್ಯ ಬೆಂಗಳೂರಿನ ಹಲವೆಡೆ ಕಸ ಎಸೆಯುವವರನ್ನ ಜಿಬಿಎ ಕಡಿವಾಣ ಹಾಕೋಕೆ ಹೊರಟಿದ್ರೆ, ಇತ್ತ ರಸ್ತೆಬದಿಯಲ್ಲಿ ಕಸ ಹಾಕೋ ಕೆಲಸ ಕೂಡ ಮುಂದುವರಿದಿದೆ. ಸದ್ಯ ವಿನಾಯಕ ನಗರದ ರಸ್ತೆಯಲ್ಲಿನ ಕಸದ ಅವ್ಯವಸ್ಥೆಯ ಬಗ್ಗೆ ಟಿವಿ9 ವರದಿ ಮಾಡೋಕೆ ತೆರಳಿದ ಬಳಿಕ ದಿಢೀರ್ ಅಂತಾ ಪ್ರತ್ಯಕ್ಷವಾದ ಜಿಬಿಎ ಸಿಬ್ಬಂದಿ ಎರಡು ದಿನಗಳಿಂದ ಬಿದ್ದಿದ್ದ ಕಸ ತೆರವು ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲೆಂದರಲ್ಲಿ ಕಸ ಎಸೆಯುತ್ತೀರಾ ಜೋಕೆ: ನಿಮ್ಮ ಮನೆ ಬಾಗಿಲಲ್ಲೇ ಸುರಿಯಬಹುದು ರಾಶಿ ರಾಶಿ ತ್ಯಾಜ್ಯ!

ಸದ್ಯ ಕಸ ಎಸೆದವರ ಮನೆ ಮುಂದೆ ಕಸ ಸುರಿದು ದಂಡ ಪೀಕುವ ಜಿಬಿಎ, ಯಾವ ಯಾವ ಏರಿಯಾಗಳಲ್ಲಿ ಕಸ ನಿರ್ವಹಣೆ ಆಗ್ತಿಲ್ಲ, ಕಸದ ಆಟೋಗಳು ಸರಿಯಾಗಿ ಕಸ ಸಂಗ್ರಹ ಮಾಡುತ್ತಿವೆಯಾ ಅನ್ನೋದನ್ನ ಪರಿಶೀಲಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.